ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕದ ಪ್ರವೇಶವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಪ್ರತಿಯೊಬ್ಬ ಹುತಾತ್ಮನಿಗೂ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

Iran-israel War Tension: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಅಮೆರಿಕದ ಪ್ರವೇಶವು ಇಡೀ ಪ್ರಪಂಚದ ಗಮನವನ್ನು ಮಧ್ಯಪ್ರಾಚ್ಯದ ಕಡೆಗೆ ಸೆಳೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ, ಇರಾನ್ ಪ್ರತಿಯೊಬ್ಬ ಹುತಾತ್ಮನಿಗೂ ಸೇಡು ತೀರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಶರಣಾಗುವುದಿಲ್ಲ, ಅಮೆರಿಕ ಅದರ ಪರಿಣಾಮ ಮುಂದೆ ಅನುಭವಿಸುತ್ತೆ:

ಟ್ರಂಪ್ ಅವರ ಬೆದರಿಕೆಗಳನ್ನು ಉಲ್ಲೇಖಿಸಿದ ಖಮೇನಿ, ಇರಾನ್‌ನ ಇತಿಹಾಸವನ್ನು ತಿಳಿದಿರುವವರಿಗೆ ಇರಾನಿಯನ್ನರು ಬೆದರಿಕೆಗಳ ಭಾಷೆಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿದಿದೆ ಎಂದು ಹೇಳಿದರು. ಇರಾನ್ ಹೇರಿದ ಶಾಂತಿ ಅಥವಾ ಯುದ್ಧವನ್ನು ಸ್ವೀಕರಿಸುವುದಿಲ್ಲ. ಅಮೆರಿಕದ ಬೆದರಿಕೆಯೊಡ್ಡು ಹೇಳಿಕೆಗಳಿಗೆ ಇರಾನ್ ಶರಣಾಗುವುದಿಲ್ಲ ಎಂದು ಅಮೆರಿಕ ತಿಳಿದಿರಬೇಕು. ಅಮೆರಿಕದ ಪಡೆಗಳು ಯಾವುದೇ ರೀತಿಯ ದಾಳಿ ನಡೆಸಿದರೆ, ಅವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಖಮೇನಿ ಹೇಳಿದರು ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ದೊಡ್ಡ ತಪ್ಪು ಮಾಡಿದೆ - ಖಮೇನಿ

ಇಸ್ರೇಲ್ ದೊಡ್ಡ ತಪ್ಪು ಮಾಡಿದೆ ಮತ್ತು ಅದರ ತಪ್ಪಿಗೆ ಶಿಕ್ಷೆಯಾಗುತ್ತದೆ ಎಂದು ಖಮೇನಿ ಹೇಳಿದರು. ಹುತಾತ್ಮರ ರಕ್ತ ಮತ್ತು ನಮ್ಮ ಪ್ರದೇಶದ ಮೇಲಿನ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಇರಾನ್ ಶರಣಾಗುವುದಿಲ್ಲ ಎಂದು ಅಮೆರಿಕ ತಿಳಿದಿರಬೇಕು ಎಂದು ಅವರು ಹೇಳಿದರು. ಅಮೆರಿಕದ ಯಾವುದೇ ರೀತಿಯ ಹಸ್ತಕ್ಷೇಪವು ಈ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ..

ಇರಾನ್ ಬೇಷರತ್ತಾಗಿ ಶರಣಾಗಬೇಕು: ಟ್ರಂಪ್

ಕೆನಡಾದಲ್ಲಿ ನಡೆದ G7 ಶೃಂಗಸಭೆಯಿಂದ ವಾಷಿಂಗ್ಟನ್‌ಗೆ ಹಿಂದಿರುಗಿದ ನಂತರ ಮಂಗಳವಾರ (ಜೂನ್ 17, 2025) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂದು, ಇರಾನ್‌ನ ಆಕಾಶದ ಮೇಲೆ ಅಮೆರಿಕದ ನಿಯಂತ್ರಣವನ್ನು ಅವರು ಪ್ರತಿಪಾದಿಸಿದ್ದರು. ಇರಾನ್ ಉತ್ತಮ ಸ್ಕೈ ಟ್ರ್ಯಾಕರ್‌ಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಹೊಂದಿದ್ದರೂ ಅದನ್ನು ಅಮೆರಿಕದಲ್ಲಿ ತಯಾರಿಸಿದ ತಂತ್ರಜ್ಞಾನಕ್ಕೆ ಹೋಲಿಸಲಾಗುವುದಿಲ್ಲ. ಅಮೆರಿಕಕ್ಕಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದರು.

ಇರಾನ್‌ನ ಸರ್ವೋಚ್ಚ ನಾಯಕನ ಸ್ಥಳ ಅಮೆರಿಕಕ್ಕೆ ತಿಳಿದಿದೆ. ನಾವು ಈಗ ಅವರ ಮೇಲೆ ದಾಳಿ ಮಾಡುವುದಿಲ್ಲ, ಆದರೆ ನಮ್ಮ ತಾಳ್ಮೆ ನಿಧಾನವಾಗಿ ಮುಗಿಯುತ್ತಿದೆ' ಎಂದು ಟ್ರಂಪ್ ಹೇಳಿದ್ದರು. ಇದೀಗ ಅಮೆರಿಕಕ್ಕೆ ಇರಾನ್ ಸುಪ್ರೀಂ ಖಮೇನಿ ತಿರುಗೇಟು ನೀಡಿದ್ದಾರೆ.