ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂಗೆ ಮತ್ತೆ ತಲೆನೋವು ಶುರುವಾಗಿದೆ. ಇದೀಗ ಪುತ್ರ ಕಾರ್ತಿ ಪಿ ಚಿದಂಬರಂ ಅವರ ಕರ್ನಾಟಕದ ಕೊಡಗಿನಲ್ಲಿರುವ 11 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ

ದೆಹಲಿ(ಏ.18): ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ಪಿ ಚಿದಂಬರಂ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಚಿದಂಬರಂ ಪುತ್ರ, ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂಗೆ ಇಡಿ ಶಾಕ್ ನೀಡಿದೆ. ಕಾರ್ತಿ ಪಿ ಚಿದಂಬರಂ ಅವರು ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಕರ್ನಾಟಕದ ಕೊಡಗಿನಲ್ಲಿರುವ 4 ಸ್ಥಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾರ್ತಿಕ್ ಚಿದು ಸೇರಿ ಇತರರ ಈ ನಾಲ್ಕು ಆಸ್ತಿಗಳ ಒಟ್ಟು ಮೌಲ್ಯ 11 ಕೋಟಿ ರೂಪಾಯಿ. ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಪಿ ಚಿದಂಬರಂ ಹಾಗೂ ಪುತ್ರ ಕಾರ್ತಿ ಪಿ ಚಿದಂಬರಂ ಅವರಿಗೆ ಅಕ್ರಮ ಹಣ ವರ್ಗಾವಣೆ ಬೆಂಬಿಡದ ಬೇತಾಳನಂತೆ ಚುಚ್ಚುತ್ತಿದೆ. ಇಡಿ ತನಿಖೆ ವೇಳೆ ಐಎನ್‌ಎಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ಅಕ್ರಮವಾಗಿ ಹಣಪಡೆದಿರುವುದು ಪತ್ತೆಯಾಗಿದೆ. ಪಿ ಚಿದಂಬರಂ ಶೆಲ್ ಕಂಪನಿಗಳ ಒಡೆತನವನ್ನೂ ತಮ್ಮ ಪ್ರಯೋಜನಕ್ಕೆ ಬಳಸಿಕೊಂಡಿದ್ದಾರ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.

ನನ್ನ ಗೌಪ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ ಕಾರ್ತಿ ಚಿದಂಬರಂ!

ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಕಾರ್ತಿ ಚಿದಂಬರಂ ಈಗಾಗಲೇ 3 ತಿಂಗಳ ಜೈಲ ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಈ ವೇಳೆ ನ್ಯಾಯಾಲಯ ಹಲುವ ಷರತ್ತು ವಿಧಿಸಿತ್ತು. ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೇ ವಿದೇಶಕ್ಕೆ ತೆರಳುವಂತಿಲ್ಲ. ಕರಣ ಸಂಬಂಧ ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ, ಸಾರ್ವಜನಿಕ ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ಷರತ್ತು ವಿಧಿಸಿತ್ತು.

106 ದಿನಗಳ ಕಾಲ ತಿಹಾರ್‌ ಜೈಲಿನಲ್ಲಿದ್ದ ಕಾರ್ತಿ ಚಿದಂಬರಂಗೆ ಇದೀಗ ಮತ್ತೆ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಕೊರಳಿಗೆ ಸುತ್ತಿಕೊಳ್ಳುತ್ತಿದೆ . ಚಿದಂಬರಂ ಅವರು 2007ರಲ್ಲಿ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾ ಗ್ರೂಪ್‌ ವಿದೇಶದಿಂದ 305 ಕೋಟಿ ರು. ಬಂಡವಾಳ ಪಡೆಯಲು ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ಅನುಮತಿ ಕೊಡಿಸಿದ್ದರು. ಆದರೆ ಇದರಲ್ಲಿ ಅಕ್ರಮ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 2017ರ ಮೇ 15ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಅದಾದ ಬಳಿಕ ಜಾರಿ ನಿರ್ದೇಶನಾಲಯ ಕೂಡ ಪ್ರತ್ಯೇಕ ಮೊಕದ್ದಮೆ ದಾಖಲಿಸಿಕೊಂಡಿತ್ತು. ಇದೇ ವರ್ಷದ ಆ.21ರಂದು ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಅ.16ರಂದು ಜಾರಿ ನಿರ್ದೇಶನಾಲಯವೂ ಬಂಧಿಸಿತ್ತು. ಅದಾದ ಆರೇ ದಿನಕ್ಕೆ ಅಂದರೆ ಅ.22ರಂದು ಸಿಬಿಐ ಪ್ರಕರಣದಲ್ಲಿ ಚಿದಂಬರಂ ಅವರಿಗೆ ಜಾಮೀನು ಸಿಕ್ಕಿತ್ತು. ಇ.ಡಿ. ಪ್ರಕರಣದಲ್ಲಿ ಜಾಮೀನು ಲಭ್ಯವಾಗದ ಕಾರಣ ಅವರು ಜೈಲಿನಲ್ಲಿ ದಿನ ದೂಡುವಂತಾಗಿತ್ತು.

ದಾಳಿಯ ಬೆನ್ನಲ್ಲೇ ಕಾರ್ತಿ ಚಿದಂಬರಂ ಆಪ್ತ ಸ್ನೇಹಿತನನ್ನು ಬಂಧಿಸಿದ ಸಿಬಿಐ!

ಈ ಪ್ರಕರಣದ ಬಳಿಕ ಚೀನಿಯರಿಗೆ ಅಕ್ರಮ ವೀಸಾ ಪ್ರಕರಣದಲ್ಲಿ ಸಿಬಿಐ ದಾಳಿ ಮಾಡಿತ್ತು. ಕಾರ್ತಿ ಹಾಗೂ ಅವರ ಆಪ್ತ ಎಸ್‌. ಭಾಸ್ಕರರಾಮನ್‌ ಪಂಜಾಬಿನಲ್ಲಿ ವಿದ್ಯುತ್‌ ಶಕ್ತಿ ಘಟಕ ಸ್ಥಾಪಿಸಲು ಬಯಸುವ ಚೀನಾ ನೇತೃತ್ವದ ತಲ್ವಾಂಡಿ ಸಾಬೊ ಪವರ್‌ ಲಿಮಿಟೆಡ್‌ನಲ್ಲಿ ಕಾರ್ಯ ನಿರ್ವಹಿಸಲು 263 ಚೀನಿ ನಾಗರಿಕರಿಗೆ ಅಕ್ರಮವಾಗಿ ವೀಸಾ ಕೊಡಿಸಿದ್ದು, ಇದರ ಬದಲಾಗಿ ಕಂಪನಿಯಿಂದ 50 ಲಕ್ಷ ಸ್ವೀಕರಿಸಿದ್ದಾರೆ ಎಂದು ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಬಳಿಕ ತಮಿಳುನಾಡಿನಲ್ಲಿ 6 ಕಡೆ ದಾಳಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು