Asianet Suvarna News Asianet Suvarna News

'ಮೋದಿಜಿ ಬರೀ ವ್ಯಕ್ತಿಯಲ್ಲ; ದೊಡ್ಡ ಶಕ್ತಿ; ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಹರಿಕಾರ'

ಮೋದಿಜಿಯವರು ಎರಡನೇಯ ಅವಧಿಗೂ ಪ್ರಧಾನಿಗಳಾಗಿ ಯಶಸ್ವಿಯಾಗುತ್ತಿದ್ದಾರೆ ಎಂದಾಕ್ಷಣ ಅವರು ಸಾಗಿಬಂದ ಹಾದಿ ಬರೀ ಹೂವಿನ ಹಾಸಿಗೆಯಂತಿದೆ ಎಂದು ಭಾವಿಸಬಾರದು. ಕ್ಷಣಕ್ಷಣಕ್ಕೂ ಹೊಸಹೊಸ ಸವಾಲುಗಳು ಬೆನ್ನಹತ್ತುತ್ತಿದ್ದರೂ ತ್ರಿವಿಕ್ರಮನಂತೆ ಅವರು ಅಂಥ ಸವಾಲುಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡಿದ್ದು ಅವರ ವೈಶಿಷ್ಟ್ಯ. 

Interview with DCM Lakshman Savadi on PM Narendra Modi govt 2 completing year
Author
Bengaluru, First Published May 30, 2020, 1:07 PM IST

ಮೋದಿಯನ್ನು ಹತ್ತಿರದಿಂದ ಬಲ್ಲವರು ಲಕ್ಷ್ಮಣ್‌ ಸವದಿ. ಹಿಂದಿನ ಐದು ವರ್ಷದ ಆಡಳಿತ, ಎರಡನೇ ಅವಧಿಯ ಒಂದು ವರ್ಷದ ಸಾಧನೆಯನ್ನು ಮನಸಾರೆ ಮೆಚ್ಚಿಕೊಂಡಿರುವ ರಾಜ್ಯದ ಉಪಮುಖ್ಯಮಂತ್ರಿಗಳಾಗಿರುವ ಸವದಿ ಇಲ್ಲಿ ಮೋದಿ ಮತ್ತು ಕೇಂದ್ರ ಸರ್ಕಾರದ ಎರಡನೇ ಅವಧಿಯ ಒಂದು ವರ್ಷದ ಸಾಧನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ನಮ್ಮೆಲ್ಲರ ನೆಚ್ಚಿನ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಬಗ್ಗೆ ಹೇಳುವುದೆಂದರೆ ಸೂರ್ಯನಿಗೇ ಬೆಳಕು ತೋರಿದಂತೆ. ಏಕೆಂದರೆ ಮೋದಿಜಿಯವರ ವ್ಯಕ್ತಿತ್ವವನ್ನು ಶಬ್ದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಮೋದಿಯವರಿಗೆ ಮೋದಿಯವರೇ ಸರಿಸಾಟಿ ಅಷ್ಟೇ. ಒಂದು ಅರ್ಥದಲ್ಲಿ ಸನ್ಮಾನ್ಯ ಅಟಲ್‌ ಬಿಹಾರಿ ವಾಜಪೇಯಿಜಿ ಅವರ ಮುತ್ಸದ್ಧಿತನ ಮತ್ತು ಸನ್ಮಾನ್ಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ಜಿ ಅವರ ದಿಟ್ಟತನ ಇವೆರಡೂ ಗುಣಗಳ ಸಂಗಮದ ಮೂರ್ತರೂಪವೇ ಮೋದಿಜಿ ಎಂದರೆ ತಪ್ಪಾಗಲಿಕ್ಕಿಲ್ಲ.

ಈಗ ಟ್ರಂಪ್‌ ಕೂಡ ಮೋದಿ ಬಳಿ ನೆರವು ಕೇಳ್ತಾರೆ; ನಮೋ ಕೊಂಡಾಡಿದ ರಾಜಾಹುಲಿ

ನಮ್ಮ ದೇಶದ ಇತಿಹಾಸದಲ್ಲಿ ಅನೇಕ ಮಹನೀಯರುಗಳು ಪ್ರಧಾನಿಗಳಾಗಿದ್ದರು. ಅವರಲ್ಲಿ ಒಬ್ಬರಂತೂ ಯಾವುದೇ ರಾಜಕೀಯ, ಸಮಾಜಸೇವೆಗಳ ಲವಲೇಶದ ಅರಿವೂ ಇಲ್ಲದ ಪೈಲಟ್‌ ಆಗಿದ್ದು ಏಕಾಏಕಿ ಪ್ರಧಾನಿಗಳಾದ ವಿಪರ್ಯಾಸವೂ ಈ ಇತಿಹಾಸದಲ್ಲೇ ಸೇರಿಕೊಂಡಿದೆ. ಆದರೆ, ಮೋದಿಜಿಯವರು ಹಾಗಲ್ಲ.

ಆರ್‌ಎಸ್‌ಎಸ್‌ನಂಥ ಉದಾತ್ತ ಸಂಸ್ಥೆಗೆ ಹೆಗಲು ಕೊಟ್ಟು ದೇಶದ ಉದ್ದಗಲಕ್ಕೂ ಸುತ್ತಿ ಸಂಘಟನೆಯ, ಸಮಾಜ ಸೇವೆಯ ನೊಗಹೊತ್ತರು. ಅತ್ಯಂತ ಕಷ್ಟದ ದಿನಗಳಲ್ಲೂ ಬಿಜೆಪಿಯ ತೇರನ್ನು ಅವಿಶ್ರಾಂತವಾಗಿ ಎಳೆದು ನಾಯಕನ ಪಟ್ಟಕ್ಕೂ ತಲುಪಿದರು. ಗುಜರಾತಿನ ಮುಖ್ಯಮಂತ್ರಿಯಾಗಿ ಇಡೀ ದೇಶವೇ ಬೆರಗು ಹುಟ್ಟಿಸುವಂಥ ಆಡಳಿತ ನೀಡಿದ ಅವರು, ಎರಡನೇ ಬಾರಿಗೂ ನಮ್ಮ ರಾಷ್ಟ್ರದ ಪ್ರಧಾನಿಗಳಾಗಿ ಈಗ ವಿಶ್ವವೇ ಅಚ್ಚರಿಗೊಳ್ಳುವಂತೆ ಆಡಳಿತಕ್ಕೆ ಹೊಸ ಸ್ಪರ್ಶ, ಅಭಿವೃದ್ಧಿಯ ಹೊಸ ಭಾಷ್ಯ ಬರೆಯುತ್ತಿದ್ದಾರೆ.

ಪ್ರಧಾನಿಯಾದ ಮೊದಲ ದಿನದಿಂದ ಹಿಡಿದು ಇಂದಿನವರೆಗೂ ಅವರು ಒಂದು ದಿನವೂ ರಜೆ ತೆಗೆದುಕೊಳ್ಳಲಿಲ್ಲ ಅಥವಾ ಮೋಜು ಮಸ್ತಿಗೆಂದು ಎಲ್ಲಿಗೂ ವಿಹಾರಕ್ಕೆ ತೆರಳಲಿಲ್ಲ. ಅವರದ್ದು ಸದಾ ಒಂದೇ ಒಂದು ಮಂತ್ರ. ಅದು ಕೆಲಸ.. ಕೆಲಸ.. ಹೀಗಾಗಿ ದಿನದ 20 ಗಂಟೆ/ವರ್ಷದ 365 ದಿನಗಳ ಕಾಲವೂ ಒಬ್ಬ ಕಾಯಕ ಯೋಗಿಯಂತೆ ಅವರು ಕೆಲಸ ಮಾಡುವುದನ್ನು ಗಮನಿಸಿದರೆ ಅವರೊಬ್ಬ ಬರೀ ವ್ಯಕ್ತಿಯಲ್ಲ. ಬದಲಿಗೆ ಅವರೊಬ್ಬ ದೊಡ್ಡ ಶಕ್ತಿ ಎಂಬುದು ಸ್ಪಷ್ಟವಾಗುತ್ತದೆ.

ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ

ಒಬ್ಬ ಸಂತನಲ್ಲಿ ಇರುವಂಥ ಶ್ರದ್ಧೆ, ಅಮಿತ ಉತ್ಸಾಹ, ಸಾಧನೆಯ ಛಲ, ದೇಶ ಕಲ್ಯಾಣದ ಕನಸು. ಈ ಎಲ್ಲಾ ಆದರ್ಶಗಳೂ ಮೋದಿಯವರ ನಡೆ-ನುಡಿಗಳಲ್ಲಿ ಸದಾ ಸಂಪನ್ನಗೊಂಡಿರುವುದು ವಿಶೇಷ.

ನಾವು ಚಿಕ್ಕವರಿರುವಾಗಿನಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೂ ಅಮೆರಿಕಾ ಮಾದರಿಯನ್ನೇ ಹಲವು ಸಂದರ್ಭಗಳಲ್ಲಿ ಉಲ್ಲೇಖಿಸಲಾಗುತ್ತಿತ್ತು. ಅಮೆರಿಕಾದ ಅಧ್ಯಕ್ಷರನ್ನು ವಿಶ್ವದ ದೊಡ್ಡಣ್ಣನೆಂದೇ ಕರೆಯುವುದು ವಾಡಿಕೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಡೀ ವಿಶ್ವವೇ ಭಾರತವನ್ನು ಬೆರಗುಗಣ್ಣಿನಿಂದ ನೋಡುವಂತಾಗಿದೆ. ಆರೋಗ್ಯ, ಕೃಷಿ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಶಿಕ್ಷಣ ಈ ಮುಂತಾದ ಕ್ಷೇತ್ರಗಳಲ್ಲಿ ಭಾರತ ಶರವೇಗದಿಂದ ಮುನ್ನುಗ್ಗುತ್ತಿರುವುದನ್ನು ಮತ್ತು ಎಷ್ಟೋ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನೂ ಹಿಂದಿಕ್ಕುತ್ತಿರುವುದನ್ನು ಗಮನಿಸಿದರೆ ಮೋದಿಜೀ ಅವರು ಮಾಡಿದ ಮೋಡಿ ಅರ್ಥವಾಗುತ್ತದೆ.

ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ‘ಹೌಡಿ-ಮೋದಿ’ ಕಾರ್ಯಕ್ರಮದಲ್ಲಿ ಮೋದಿಜಿಯವರ ಸಾಧನೆಯನ್ನು ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್‌ ಟ್ರಂಪ್‌ ಅವರೇ ಮುಕ್ತಕಂಠದಿಂದ ಶ್ಲಾಘಿಸಿದ್ದನ್ನು ನೋಡಿದರೆ ಮೋದಿಜೀಯವರೇ ಪ್ರಸ್ತುತ ವಿಶ್ವದ ದೊಡ್ಡಣ್ಣನಾಗಿದ್ದಾರೆ ಎಂಬುದು ಸ್ಪಷ್ಟವಾಗುವಂತಿತ್ತು. ಭಾರತದ ಪ್ರಜೆಗಳಾದ ನಮಗೆ ಇದಕ್ಕಿಂತ ಹೆಚ್ಚಿನ ಖುಷಿ ಇನ್ನೇನಿದೆ?

ಮೋದಿಜಿಯವರು ಎರಡನೇಯ ಅವಧಿಗೂ ಪ್ರಧಾನಿಗಳಾಗಿ ಯಶಸ್ವಿಯಾಗುತ್ತಿದ್ದಾರೆ ಎಂದಾಕ್ಷಣ ಅವರು ಸಾಗಿಬಂದ ಹಾದಿ ಬರೀ ಹೂವಿನ ಹಾಸಿಗೆಯಂತಿದೆ ಎಂದು ಭಾವಿಸಬಾರದು. ಕ್ಷಣಕ್ಷಣಕ್ಕೂ ಹೊಸಹೊಸ ಸವಾಲುಗಳು ಬೆನ್ನಹತ್ತುತ್ತಿದ್ದರೂ ತ್ರಿವಿಕ್ರಮನಂತೆ ಅವರು ಅಂಥ ಸವಾಲುಗಳನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡಿದ್ದು ಅವರ ವೈಶಿಷ್ಟ್ಯ. ದೇಶದಲ್ಲಿದ್ದ ನೈರ್ಮಲ್ಯ ಸಮಸ್ಯೆಗೆ ಸ್ವಚ್ಛ ಭಾರತ, ಗಂಗಾ ನದಿ ಶುದ್ಧೀಕರಣಕ್ಕೆ ನಮಾಮಿ ಗಂಗೆ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೇಕ್‌ ಇನ್‌ ಇಂಡಿಯಾ, ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಕಿಸಾನ್‌ ಸಮ್ಮಾನ್‌, ಕೋವಿಡ್‌-19 ಆಘಾತ ತಡೆಗೆ ‘ಆತ್ಮ ನಿರ್ಭರತಾ’ ಗ್ರಾಮೀಣ ಜನತೆಯ ಕಣ್ಣೀರೊರೆಸಲು ಗರೀಬ್‌ ಕಲ್ಯಾಣ್‌ ಯೋಜನಾ, ಜನಸಾಮಾನ್ಯರ ವಹಿವಾಟುಗಳಿಗೆ ಜನ್‌ಧನ್‌ ಯೋಜನಾ, ನಗರಗಳ ಅಭಿವೃದ್ಧಿಗೆ ಸ್ಮಾರ್ಟ್‌ ಸಿಟಿ ಯೋಜನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾರಿತ್ರಿಕ ಚಾಲನೆ, ಕಾಶ್ಮೀರ ಸಮಸ್ಯೆಗೆ ಮುಕ್ತಿ... ಹೀಗೆ ಅನೇಕ ಜನಪರ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿ ನವ ಭಾರತದ ನವ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.

ಈಗ ಟ್ರಂಪ್‌ ಕೂಡ ಮೋದಿ ಬಳಿ ನೆರವು ಕೇಳ್ತಾರೆ; ನಮೋ ಕೊಂಡಾಡಿದ ರಾಜಾಹುಲಿ

ನನ್ನ ವೈಯಕ್ತಿಕ ಅನುಭವದಲ್ಲಿ ನಾನು ಅನೇಕ ಬಾರಿ ಮೋದಿಜಿ ಅವರನ್ನು ಭೇಟಿ ಮಾಡಿದ್ದೆ. ಅವರನ್ನು ಕಂಡಾಗ ಸಹಜವಾಗಿಯೇ ನನ್ನಲ್ಲಿ ಏನೋ ಒಂದು ರೀತಿಯ ಪುಳಕ, ಅಭಿಮಾನ, ಹೆಮ್ಮೆ, ಸಂತಸ. ಮಹಾನ್‌ ವ್ಯಕ್ತಿಗಳನ್ನು ಕಂಡಾಗಲೆಲ್ಲ ಈ ಭಾವ-ಅನುಭಾವಗಳನ್ನು ಮನಸ್ಸಿನಲ್ಲಿ ಮೈದಾಳುವಂತೆ ಮೋದಿಜಿಯವರನ್ನು ಕಂಡಾಗಲೂ ಹಾಗೇ ಅನ್ನಿಸುತ್ತದೆ. ಬಹುಶಃ ಇದು ಕೇವಲ ನನ್ನೊಬ್ಬನ ಅನುಭವ ಆಗಿರಲಾರದು. ಮೋದಿಜಿ ಅವರನ್ನು ಭೇಟಿ ಮಾಡುವ ಎಲ್ಲರ ಅನುಭವಗಳೂ ಹೀಗೇ ಇದ್ದಿರಲಿಕ್ಕೆ ಸಾಕು.

ಮತ್ತೊಂದು ಮಾತು. ಪ್ರತೀ ಬಾರಿಯೂ ‘ಕ್ಯಾ ಲಕ್ಷ್ಮಣ್‌ಜಿ..’ ಎಂದು ಅವರು ಹೆಸರು ಹೇಳಿ ಆತ್ಮೀಯತೆಯಿಂದ ಮಾತನಾಡುವ ಸೌಜನ್ಯವಂತೂ ಸದಾ ನನ್ನಲ್ಲಿ ಸ್ಮರಣೆಯಲ್ಲಿರುವ ಅವರ ದೊಡ್ಡಗುಣ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಹೇಳುತ್ತಾರಲ್ಲ.. ಹಾಗೆಯೇ ಮೋದಿಜಿ ಅವರ ನಡೆ-ನುಡಿ. ನಾವೆಲ್ಲ ಅವರಿಂದ ಕಲಿಯುವುದು ಬಹಳಷ್ಟಿದೆ.

ನಮ್ಮ ಪ್ರಧಾನಿಗಳು ಹಲವು ವಿಷಯಗಳಲ್ಲಿ ಹಲವು ಸಾಧನೆಗಳಲ್ಲಿ ನಮಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂಬುದು ನಮಗೆಲ್ಲ ಹಿಗ್ಗು. ಮೋದಿಯವರೆಂದರೆ ಬತ್ತದ ಚಿಲುಮೆ. ಸ್ಫೂರ್ತಿಯ ಒಲುಮೆ. ಅವರ ಮೇರು ವ್ಯಕ್ತಿತ್ವದ ಬಗ್ಗೆ ಹೇಳುತ್ತಾ ಹೋದರೆ ದೊಡ್ಡ ಗ್ರಂಥವೇ ಆದೀತು.

Follow Us:
Download App:
  • android
  • ios