ನವದೆಹಲಿ(ಜ.15): ಭಾರತ ವಿರರೋಧಿ ಖಲಿಸ್ತಾನ್ ಭಯೋತ್ಪಾದನೆಗೆ ಮರುಜೀವ ನೀಡಲು ಹವಣಿಸುತ್ತಿರುವ ಪಾಕಿಸ್ತಾನ, ಗಡಿ ಪ್ರದೇಶದಲ್ಲಿ ಖಲಿಸ್ತಾನಿ ಹೋರಾಟಗಾರರಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

70 ಹಾಗೂ 80ರ ದಶಕದಲ್ಲಿ ಭಾರತದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಖಲಿಸ್ತಾನಿ ಭಯೋತ್ಪಾದನೆಗೆ ಪಾಕಿಸ್ತಾನ ಇದೀಗ ಮತ್ತೆ ಜೀವ ತುಂಬುತ್ತಿದೆ. ಕಾಶ್ಮೀರದಲ್ಲಿ ಭಾರತದ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಲಿಸ್ತಾನ್ ಚಳವಳಿಗ ಕುಮ್ಮಕ್ಕು ನೀಡಿ ಮತ್ತೆ ಹಿಂಸಾಚಾರ ಭುಗಿಲೇಳುವಂತೆ ಮಾಡುವುದು ಪಾಕ್ ಯೋಜನೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಗುಪ್ತಚರ ಇಲಖೆ,  ಭಾರತದ ಗಡಿಯೊಳಗೆ ಪಾಕಿಸ್ತಾನ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ರವಾನಿಸುತ್ತಿದೆ ಎಂದು ಎಚ್ಚರಿಸಿದೆ. ಖಲಿಸ್ತಾನಿ ಚಳವಳಿಗೆ ಮರುಜೀವ ತುಂಬುವುದು ಪಾಕ್ ಹುನ್ನಾರವಾಗಿದೆ ಎಂದು ವರದಿ ತಿಳಿಸಿದೆ.

ಖಲಿಸ್ತಾನಿ ಉಗ್ರ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಹಾಗೂ ಖಲಿಸ್ತಾನ್ ಜಿಂದಾಬಾದ್ ಪೋರ್ಸ್ ಸಂಘಟನೆಗಳಿಗೆ ಸೇರಿದ ಹಿರಿಯ ಸದಸ್ಯರು ಇತ್ತಿಚೀಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನ ಉಗ್ರರಿಗೆ ತರಬೇತಿ ಶಿಬಿರ ತೆರೆದಿರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.  

ಈ ಕುರಿತು ಕೇಂದ್ರ ಗೃಹ ಇಲಾಖೆ ಪರಿಶೀಲನೆ ಆರಂಭಿಸಿದ್ದು, ಖಲಿಸ್ತಾನಿ ಉಗ್ರ ಸಂಘಟನೆಗಳ ಮೇಲೆ ನಿಗಾ ಇರಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.