ಮಮತಾ ವಿರುದ್ಧ ಜೈ ಶ್ರೀರಾಮ್‌ ಘೋಷಣೆ| ದಾಖಲೆ ಮತಗಳಿಂದ ಮಮತಾ ಸೋಲು: ಶಾ| ರಾಷ್ಟ್ರಗೀತೆ ವೇಳೆ ಕಾಲಿನ ಗಾಯ ಮರೆತು ಎದ್ದು ನಿಂತ ಮಮತಾ!

ನಂದಿಗ್ರಾಮ(ಮಾ.31): ಏ.1ರಂದು ಚುನಾವಣೆ ನಡೆಯಲಿರುವ ಪ.ಬಂಗಾಳದ ನಂದಿಗ್ರಾಮದಲ್ಲಿ ಮಂಗಳವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿತ್ತು. ಕೊನೆಯ ದಿನದ ಪ್ರಚಾರದ ಅಂತ್ಯದ ಸಂದರ್ಭದಲ್ಲಿ, ಕಾಲಿಗೆ ಗಾಯವಾಗಿ ಗಾಲಿಕುರ್ಚಿ ಮೇಲೆ ಕೂತಿದ್ದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಎದ್ದು ನಿಂತರು. ಇದು ಗಮನ ಸೆಳೆಯಿತು.

Scroll to load tweet…

ಮಮತಾ ವಿರುದ್ಧ ಜೈ ಶ್ರೀರಾಮ್‌ ಘೋಷಣೆ

ಗೃಹ ಸಚಿವ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಂಗಳವಾರ ರೋಡ್‌ ಶೋ ನಡೆಸುತ್ತಿದ್ದ ವೇಳೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಅದೇ ಮಾರ್ಗದ ಮೂಲಕ ಹಾದು ಹೋಗಿದ್ದು, ಈ ವೇಳೆ ಜೈ ರಾಮ್‌ ಘೋಷಣೆಯ ಬಿಸಿ ತಟ್ಟಿದೆ. ನಂದಿ ಗ್ರಾಮದಲ್ಲಿ ರಾರ‍ಯಲಿ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರ ಗುಂಪು ಮಮತಾ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಾರೆ. ಇದರಿಂದ ಮಮತಾ ಮುಜುಗರ ಅನುಭವಿಸುವಂತಾಯಿತು.

ದಾಖಲೆ ಮತಗಳಿಂದ ಮಮತಾ ಸೋಲು: ಶಾ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಸುವೇಂದು ಅಧಿಕಾರಿ ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ನಂದಿಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್‌ ಶಾ, ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಯಾವುದೇ ರಾಜಕಾರಣಿ ಕೂಡ ಸುಳ್ಳು ಭರವಸೆಗಳ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಆಗಬೇಕಾದರೆ ಮೊದಲು ಮಮತಾ ಬ್ಯಾನರ್ಜಿ ಅವರನ್ನು ನಂದಿ ಗ್ರಾಮದಲ್ಲಿ ಸೋಲಿಸಬೇಕು. ಉಳಿದ ಕಡೆ ಟಿಎಂಸಿ ತಾನಾಗಿಯೇ ಪತನ ಕಾಣಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.