ಪಟನಾ(ಜ.14): ಬಿಹಾರದಲ್ಲಿ ಇಂಡಿಗೋ ವಿಮಾನದ ಹಿರಿಯ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಗೃಹ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಪಕ್ಷಗಳು ಪಟ್ಟು ಹಿಡಿದಿವೆ. ಅಲ್ಲದೆ ಮೈತ್ರಿ ಸರ್ಕಾರದ ಭಾಗವಾಗಿರುವ ಕೆಲವು ಬಿಜೆಪಿ ನಾಯಕರು ಸಹ ನಿತೀಶ್‌ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.

ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಮ್ಯಾನೇಜರ್‌ ಆಗಿದ್ದ ರೂಪೇಶ್‌ ಕುಮಾರ್‌ ಸಿಂಗ್‌(44) ತಮ್ಮ ಎಸ್‌ಯುವಿ ಕಾರಿನಲ್ಲಿದ್ದಾಗಲೇ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮುಖ್ಯಮಂತ್ರಿ ನಿವಾಸ ಇರುವ 2 ಕಿ.ಮೀ ದೂರದಲ್ಲೇ ಈ ಘಟನೆ ನಡೆದಿದೆ. ಹಲವು ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಆಪ್ತರಾಗಿದ್ದ ಸಿಂಗ್‌ ಅವರು ಪ್ರಭಾವಿಯಾಗಿದ್ದರು ಎನ್ನಲಾಗಿದೆ.

ಈ ಘಟನೆಗೂ ಮುನ್ನ ರೂಪೇಶ್‌ ಅವರು ಕೊರೋನಾ ಲಸಿಕೆ ಆಗಮಿಸಿದ ಪಟನಾ ವಿಮಾನ ನಿಲ್ದಾಣದಲ್ಲಿದ್ದರು. ಹೀಗಾಗಿ ರೂಪೇಶ್‌ ಅವರನ್ನು ಕೊಲ್ಲಲು ದುಷ್ಕರ್ಮಿಗಳು ವಿಮಾನ ನಿಲ್ದಾಣದಿಂದಲೇ ಅಟ್ಟಿಸಿಕೊಂಡು ಬಂದಿರಬಹುದು ಎನ್ನಲಾಗಿದೆ.