ಚೆನ್ನೈನಿಂದ ಕೊಯಮತ್ತೂರಿಗೆ ಹೋಗುವ ಇಂಡಿಗೋ ವಿಮಾನದಲ್ಲಿ ಪೈಲಟ್ ಪ್ರದೀಪ್ ಕೃಷ್ಣನ್ ತಮ್ಮ ಅಜ್ಜ-ಅಜ್ಜಿ ಮತ್ತು ತಾಯಿಯೊಂದಿಗೆ ವಿಮಾನ ಹಾರಾಟ ನಡೆಸಿದ್ದಾರೆ. ಪ್ರಯಾಣಿಕರೊಂದಿಗೆ ಮಾತನಾಡಿ, ತಮ್ಮ ಕುಟುಂಬದೊಂದಿಗಿನ ಈ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಚೆನ್ನೈ (ಜೂ.03) ಇತ್ತೀಚೆಗೆ ಚೆನ್ನೈನಿಂದ ಕೊಯಮತ್ತೂರಿಗೆ ಹೋಗುವ ಇಂಡಿಗೋ ವಿಮಾನದಲ್ಲಿ ನಡೆದ ಒಂದು ಸಂತಸದಾಯಕ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇಂಡಿಗೋ ಪೈಲಟ್ ಪ್ರದೀಪ್ ಕೃಷ್ಣನ್ ತಮ್ಮ ಅಜ್ಜ-ಅಜ್ಜಿ ಮತ್ತು ತಾಯಿಯೊಂದಿಗೆ ವಿಮಾನ ಹಾರಾಟ ನಡೆಸಿದ ವಿಡಿಯೋ ವೈರಲ್ ಆಗಿದೆ.
ಪ್ರದೀಪ್ ಕೃಷ್ಣನ್ ಅವರೇ ಈ ದೃಶ್ಯಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ವಿಮಾನದ ಪೈಲ್ ವಿಮಾನ ಆರಂಭಕ್ಕೂ ಮುನ್ನವೇ ಪ್ರಯಾಣಿಕರೊಂದಿಗೆ ಮೈಕ್ ಹಿಡಿದುಕೊಂಡು ಮಾತನಾಡುವಾಗ, ವಿಮಾನದಲ್ಲಿ ತಮ್ಮ ಅಜ್ಜ-ಅಜ್ಜಿ ಮತ್ತು ತಾಯಿ ಇದ್ದಾರೆ ಎಂದು ಹೇಳುವ ಹಾಗೂ ಅವರ ಕುರಿತಾಗಿ ಒಂದಷ್ಟು ಬಾಲ್ಯದ ಘಟನೆಗಳನ್ನು ಹೇಳುತ್ತಿರುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ.
'ನನ್ನ ಕುಟುಂಬ ನನ್ನ ಜೊತೆ ಪ್ರಯಾಣಿಸುತ್ತಿದೆ ಎಂದು ಹೇಳಲು ತುಂಬಾ ಖುಷಿಯಾಗುತ್ತಿದೆ. ನನ್ನ ಅಜ್ಜಿ, ತಾತ ಮತ್ತು ಅಮ್ಮ 29ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ತಾತ ಇಂದು ಮೊದಲ ಬಾರಿಗೆ ನನ್ನ ಜೊತೆ ವಿಮಾನದಲ್ಲಿ ಹಾರುತ್ತಿದ್ದಾರೆ' ಎಂದು ಪ್ರದೀಪ್ ಹೇಳಿದರು. 'ನಾನು ಅವರ TVS50ಯ ಹಿಂದೆ ಎಷ್ಟೋ ಸಲ ಕೂತು ಪ್ರಯಾಣ ಮಾಡಿದ್ದೇನೆ. ಈಗ ಅವರಿಗೆ ಒಂದು ರೈಡ್ ಕೊಡುವ ನನ್ನ ಸರದಿ' ಎಂದು ಅವರು ಹೇಳಿದರು. ಹೀಗೆ ಪೈಲಟ್ ಮಾತನಾಡುವಾಗ ಅವರ ತಾಯಿ ಭಾವುಕರಾಗಿ ಕಣ್ಣೀರು ಹಾಕುವುದನ್ನೂ ವಿಡಿಯೋದಲ್ಲಿ ಕಾಣಬಹುದು.
ಪೈಲಟ್ ತಮ್ಮ ತಾತನಿಗೆ 'ಹಾಯ್' ಹೇಳಲು ಎಲ್ಲ ಪ್ರಯಾಣಿಕರನ್ನು ಕೇಳಿಕೊಂಡರು. ತಾತ ತಮ್ಮ ಸೀಟಿನಿಂದ ಎದ್ದು ನಿಂತು ಎಲ್ಲರಿಗೂ ಕೈ ಮುಗಿದು ನಮಸ್ಕರಿಸಿದರು. ಈ ಹೃದಯಸ್ಪರ್ಶಿ ಕ್ಷಣ ಕಂಡು ಎಲ್ಲ ಪ್ರಯಾಣಿಕರು ಚಪ್ಪಾಳೆ ತಟ್ಟಿದರು. 'ನನ್ನ ಅತ್ಯಂತ ಹೆಮ್ಮೆಯ ಕ್ಷಣ. ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಮಾನ ಹಾರಾಟ ನಡೆಸುವುದು ಪ್ರತಿಯೊಬ್ಬ ಪೈಲಟ್‌ನ ಕನಸು' ಎಂದು ಬರೆದು ಪ್ರದೀಪ್ ವಿಡಿಯೋ ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು 2018ರಲ್ಲಿ ಪ್ರದೀಪ್ ಕೃಷ್ಣನ್ ತಮ್ಮ ತಾಯಿ ಮತ್ತು ಅಜ್ಜಿ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್ ಆಗಿದ್ದರು. ಆಗಲೂ ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು. ಆಗ ವಿಮಾನದಲ್ಲಿ ಕುಳಿತಿದ್ದ ತಾಯಿ ಮತ್ತು ಅಜ್ಜಿಯ ಬಳಿ ಹೋಗಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಪ್ರಯಾಣ ಆರಂಭಿಸಿದ್ದರು. ಇಂತಹ ವಿಡಿಯೋಗಳನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ಇದು ಭಾರತೀಯ ಕುಟುಂಬ ಸಂಪ್ರದಾಯ ಮತ್ತು ಸಂಸ್ಕೃತಿಗೆ ಇರುವ ಶಕ್ತಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. 1.35 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಾಮೆಂಟ್ ಮಾಡಿ ಪೈಲಟ್‌ಗೆ ಶುಭಾಶಯವನ್ನು ತಿಳಿಸಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ಕ್ಷಣ, ನಿಮಗೆ ಶುಭವಾಗಲಿ ಎಂದು ಬಹುತೇಕರು ಹಾರೈಸಿದ್ದಾರೆ. ಮತ್ತೊಬ್ಬರು 'ಮಧ್ಯಮ ವರ್ಗದ ಕನಸುಗಳು ಮಕ್ಕಳು ಯಶಸ್ಸು ಆಗಿರುತ್ತದೆ. ನೀವು ಎಷ್ಟು ಚೆನ್ನಾಗಿ ಕಾಣುತ್ತೀರಿ ಅಣ್ಣಾ. ಇನ್ನು ಆ ಕ್ಷಣಗಳನ್ನು ಕೂಡ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ. ಇಲ್ಲಿ ನಿಮ್ಮ ತಾಯಿ ಹಾಕಿದ ಕಣ್ಣೀರು ನಿಮ್ಮ ಕುಟುಂಬಕ್ಕೆ ಹೆಮ್ಮೆ ತರುವಂತೆ ಮಾಡಿದ್ದೀರಿ, ಜೀವನದಲ್ಲಿ ಒಬ್ಬರು ಗಳಿಸಬಹುದಾದ ದೊಡ್ಡ ಬಹುಮಾನ ಇದು.. ಇನ್ನಷ್ಟು ಅದ್ಭುತಗಳಿಗೆ ನೀವು ಸಾಕ್ಷಿಯಾಗಿ ಚಿಯರ್ಸ್ ಅಣ್ಣಾ.. ಎಂದು ಮನವಿ ಮಾಡಿದ್ದಾರೆ.
