ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂದೂರದಲ್ಲಿ ಭಾರತ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳೇ ರಾರಾಜಿಸಿವೆ. ಈ ದಾಳಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಸ್ಕೈ ಸ್ಟ್ರೈಕರ್ ಡ್ರೋನ್, ಬರಾಕ್ 8 ಕ್ಷಿಪಣಿ ಸೇರಿದಂತೆ ಹಲವು ದೇಶೀಯ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸಿವೆ.

ನವದೆಹಲಿ: ಪಹಲ್ಲಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಗರ್ವ ಭಂಗ ಮಾಡಲು ದೇಶೀಯವಾಗಿ ಅಭಿವೃದ್ಧಿಪಡಿಸಿದ ಅನೇಕ ಶಸ್ತ್ರಾಸ್ತ್ರಗಳು ಭಾರತೀಯ ಸೇನೆಗೆ ನೆರವಾಗಿವೆ. ಈ ಮೂಲಕ ಭಾರತದ ಮಿಲಿಟರಿ ಶಕ್ತಿ, ಸಾಮರ್ಥ್ಯವನ್ನು ಹೊರಜಗತ್ತಿಗೂ ತೋರಿಸಿಕೊಟ್ಟಿವೆ. ಹೀಗಾಗಿಯೇ ಈ ಬಾರಿಯ ಪಾಕ್ ಮೇಲಿನ ದಾಳಿಯನ್ನು ಆತ್ಮನಿರ್ಭರ ಭಾರತದ ಶಕ್ತಿಯ ಅನಾವರಣ ಎಂದು ಬಣ್ಣಿಸಲಾಗಿದೆ. ಪಾಕಿಸ್ತಾನದ ಮಿಲಿಟರಿ ನೆಲೆ, ಉಗ್ರರ ನೆಲೆಗಳನ್ನು ನಾಶ ಮಾಡುವ ಜತೆಗೆ ಗಡಿಯಾಚೆಯಿಂದ ತೂರಿಬಂದ ಎಲ್ಲ ಕ್ಷಿಪಣಿಗಳು, ಡ್ರೋನ್ ಗಳನ್ನು ಹೊಡೆದುರುಳಿಸುವಲ್ಲಿ ಈ ದೇಶೀ ಶಸ್ತ್ರಾಸ್ತ್ರಗಳು ಮಹತ್ವದ ಪಾತ್ರವಹಿಸಿವೆ. ಬ್ರಹ್ಮಸ್ ಕ್ಷಿಪಣಿಗಳು, ಆಕಾಶ್ ವಾಯುರಕ್ಷಣಾ ವ್ಯವಸ್ಥೆಗಳು ಪಾಕ್ ಸೇನೆಯಲ್ಲಿ ನಡುಕ ಸೃಷ್ಟಿಸಿವೆ. 

ಸ್ಕೈ ಸ್ಟ್ರೈಕರ್ ಆತ್ಮಾಹುತಿ ಡ್ರೋನ್ ‌ 
ಉಕ್ರೇನ್ ಯುದ್ಧದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ರೀತಿಯ ಡ್ರೋನ್‌ಗಳನ್ನು ಭಾರತ ಬಳಸಿದ್ದು ಇದೇ ಮೊದಲು. ಸುಮಾರು 5ರಿಂದ 10 ಕೆ.ಜಿ. ತೂಕದ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಈ ಸ್ಕೈ ಸ್ಟ್ರೈಕರ್ ಆತ್ಮಾಹುತಿ ಈ ಡ್ರೋನ್‌ಗಳನ್ನು ಪಾಕಿಸ್ತಾನದ ಮೇಲಿನ ದಾಳಿಗೆ ಭಾರತ ಬಳಸಿಕೊಂಡಿತು. ಬೆಂಗಳೂರು ಮೂಲದ ಹಾಗೂ ಅದಾನಿ ಒಡೆತನದ ಅಲ್ಪಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್ಬಿಟ್ ಸೆಕ್ಯುಟರಿ ಸಿಸ್ಟಮ್ ಜಂಟಿಯಾಗಿ ಅಭಿವೃದಿಪಡಿಸಿದ ಡೋನ್ ಗಳನ್ನು ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿತ್ತು. ವಿಮಾನದ ರೀತಿ ಆಕಾಶದಲ್ಲಿ ಹಲವು ಗಂಟೆಗಳ ಕಾಲ ಹಾರಾಟ ನಡೆಸುವ ಈ ಡ್ರೋನ್‌ಗಳು ದಾಳಿಯನ್ನು ಗುರುತಿಸಿ, ಧ್ವಂಸ ಮಾಡುತ್ತವೆ. ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು ಇವು ನೆರವಾಗಿವೆ. 

ಡಿ4 ಆ್ಯಂಟಿ ಡ್ರೋನ್‌ ಸಿಸ್ಟಂ 
ಡ್ರೋನ್‌ಗಳನ್ನು ಪತ್ತೆಹಚ್ಚಿ, ತಡೆಯುವ ಮತ್ತು ನಾಶ ಮಾಡುವ ಈ ಡಿ ಆ್ಯಂಟಿ ಡೋನ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದ್ದು ಡಿಆ‌ರ್ ಡಿಒ. ಪಾಕಿಸ್ತಾನ ಹಾರಿಸಿದ ನೂರಾರು ಡ್ರೋನ್‌ಗಳನ್ನು ಗಡಿಯುದ್ದಕ್ಕೂ ಗುರುತಿಸಿ ನಾಶ ಮಾಡಿದ ಕೀರ್ತಿ ಡಿ ಆಂಟಿ ಡ್ರೋನ್‌ ಸಿಸಂಗೆ ಸಲ್ಲಬೇಕು. ಇದನ್ನು ಭಾರತದ ಐರನ್ ಡೋಮ್ ಎಂದೇ ಕರೆಯಲಾಗುತ್ತದೆ. 

ಆಕಾಶ್ ವಾಯುರಕ್ಷಣೆ ವ್ಯವಸ್ಥೆ 
ಅಡ್ವಾನ್ಸ್‌ಡ್ ಏರ್ ಡಿಫೆನ್ಸ್‌ ಕಂಟ್ರೋಲ್ ರಿಪೋರ್ಟಿಂಗ್ ಸಿಸ್ಟಂ (ಎಡಿಸಿಆ‌ರ್ಎಸ್) ಅಥವಾ ಆಕಾಶ್ ಕ್ಷಿಪಣಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಇದೊಂದು ಸಂಪೂರ್ಣವಾಗಿ ಆಟೋಮೇಟೆಡ್ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು, ಹಾರಿಬಿಡುವ ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಳಸಲಾಗುತ್ತದೆ. ಎಸ್-400 ಜತೆಗೇ ಇದನ್ನು ನಿಯೋಜಿಸಲಾಗಿದೆ. 

ಬರಾಕ್ 8 ಎಂಆರ್‌ಎಸ್‌ಎಎಂ 
ಈ ಮಧ್ಯಮ ದೂರ ವ್ಯಾಪ್ತಿಯ ನೆಲದಿಂದ ಆಗಸಕ್ಕೆ ಹಾರುವ ಕ್ಷಿಪಣಿಯನ್ನು ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಪಾಕಿಸ್ತಾನದ ಹೆಮ್ಮೆಯ ಫತೇ-2 ಕ್ಷಿಪಣಿಯನ್ನು ಇದೇ ಕ್ಷಿಪಣಿ ವ್ಯವಸ್ಥೆ ಹೊಡೆದುರುಳಿಸಿದೆ. 

ಬ್ರಹ್ಮೋಸ್‌ ಕ್ಷಿಪಣಿ 
ಪಾಕಿಸ್ತಾನದ ನೂರ್ ಖಾನ್ ಸೇರಿ ಹಲವು ಏರ್‌ಬೇಸ್‌ಗಳ ಮೇಲೆ ದಾಳಿ ನಡೆಸಲು ಈ ನಿರ್ಮಿತ ಬ್ರಹ್ಮೋಸ್‌ ಕ್ಷಿಪಣಿ ಬಳಸಲಾಗಿದೆ ಎಂದು ಹೇಳಲಾಗಿದೆ. ರಷ್ಯಾ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಕ್ಷಿಪಣಿ ಕಂಡರೆ ಪಾಕಿಸ್ತಾನಕ್ಕೆ ಭಯ. ಈ ಸೂಪರ್‌ಸಾನಿಕ್ ಕ್ರೂಸ್ ಮಿಸ್ಸೆಲ್ ಹಾರಿಬರುವ ವೇಳೆ ಅದನ್ನು ಪತ್ತೆ ಹಚ್ಚುವ ರಾಡಾರ್ ಮತ್ತು ಅದರ ದಾಳಿ ತಡೆಯುವ ಶಕ್ತಿಯಂತು ಸದ್ಯಕ್ಕೆ ಪಾಕಿಸ್ತಾನ ಸೇರಿದಂತೆ ವಿಶ್ವದ ಯಾವುದೇ ದೇಶಗಳ ಬಳಿಯೂ ಇಲ್ಲ. 

ಎಲ್-70 ಆ್ಯಂಟಿ ಏರ್‌ಕ್ರಾಫ್ಟ್‌ ಗನ್ 
ಇದನ್ನು ಮೊದಲು ಅಭಿವೃದ್ಧಿಪಡಿಸಿದ್ದು ಸ್ವೀಡನ್ ಮೂಲದ ಬೋಫೋರ್ಸ್ ಕಂಪನಿ. ಸದ್ಯ ಈ ಏರ್‌ಕ್ರಾಫ್ಟ್ ಗನ್ ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಈ ಗನ್‌ಗೆ ರೇಡಾ‌ರ್, ಎಲೆಕ್ಟೋ-ಆಪ್ಟಿಕಲ್ ಸೆನ್ಸರ್ಸ್ ಮತ್ತು ತನ್ನಿಂತಾನೆ ಅಪಾಯವನ್ನು ಗುರುತಿಸುವ ವ್ಯವಸ್ಥೆಯನ್ನು ಅಳವಡಿಸಿ ಮೇಲ್ದರ್ಜೆಗೇರಿಸಲಾಗಿದೆ. ಪಾಕಿಸ್ತಾನ ಹಾರಿಬಿಟ್ಟ ಹಲವು ಟರ್ಕಿ ಮೂಲದ ಡ್ರೋನ್‌ಗಳನ್ನು ಈ ಏರ್‌ ಕ್ರಾಫ್ಟ್‌ ಗನ್ ಹೊಡೆದುರುಳಿಸಿದೆ. 

ಪ್ರಿಸಿಷನ್ ಸ್ಟ್ರೈಕ್ ವೆಪನ್ ಸಿಸ್ಟಂ 
ಆಪರೇಷನ್ ಸಿಂದೂರದ ಯಶಸ್ಸಿನಲ್ಲಿ ಪಿಎಸ್‌ಡಬ್ಲ್ಯು ಎಸ್ ವ್ಯವಸ್ಥೆ ಮಹತ್ವದ ಪಾತ್ರವಹಿಸಿತ್ತು. ಶತ್ರುಗಳ ನೆಲೆಯ ಮೇಲೆ ನಿಖರವಾಗಿ ದಾಳಿ ನಡೆಸಲು ಈ ಮಿಲಿಟರಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಉದ್ದೇಶಿತ ಗುರಿ ಹೊರತುಪಡಿಸಿ ಅಕ್ಕಪಕ್ಕದ ಪ್ರದೇಶಕ್ಕೆ ಕನಿಷ್ಠ ಹಾನಿಯಾಗುವಂತೆ ಇದು ನೋಡಿಕೊಳ್ಳುತ್ತದೆ. ಜಿಪಿಎಸ್, ಇನ್ನಾರೆಡ್, ರೇಡಾರ್ ಮತ್ತು ಲೇಸರ್ ಆಧರಿತ ಮಾರ್ಗದರ್ಶನ ವ್ಯವಸ್ಥೆ ಬಳಸಿಕೊಂಡು ಇದು ಕಾರ್ಯ ನಿರ್ವಹಿಸುತ್ತದೆ. 

ಎಸ್‌ಎಎಡಬ್ಲ್ಯು ಕ್ಷಿಪಣಿ ವ್ಯವಸ್ಥೆ 
ಎಸ್ಎಎಡಬ್ಲ್ಯು, ವ್ಯವಸ್ಥೆಯು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಸ್ವದೇಶಿ ಅಸ್ತವಾಗಿದೆ. ಡ್ರೋನ್‌ನಂತೆ ಕಾಣುವ ಆದರೆ ಬಹುದೂರದ ಗುರಿಯನ್ನೂ ಹೊಡೆದುರುಳಿಸಬಲ್ಲ ಈ ಕ್ಷಿಪಣಿಯನ್ನು ವಿಮಾನದ ಮೂಲಕ ಉಡಾಯಿಸಲಾಗುತ್ತದೆ. ಆಕಾಶದಿಂದ ನೆಲದ ಮೇಲಿನ ಗುರಿಗಳನ್ನು ನಿಖರವಾಗಿ ನಾಶ ಮಾಡುತ್ತದೆ. ಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಈ ಅಸ್ತ್ರ ಬಳಸಲಾಗಿದೆ.