ನವದೆಹಲಿ(ಅ.09): ದೇಶಕ್ಕೆ ಕೊರೋನಾ ಕಾಲಿಟ್ಟು ಅನಾಮತ್ತು ಏಳು ತಿಂಗಳ ನಂತರ ಇದೇ ಮೊದಲ ಬಾರಿ ವೈರಸ್‌ ಸೋಂಕು ಇಳಿಮುಖವಾಗುತ್ತಿರುವುದು ಖಚಿತವಾಗಿದೆ. ಇದು ದೇಶದಲ್ಲಿ ಮೊದಲ ಕೊರೋನಾ ಅಲೆಯ ಇಳಿಕೆ ಎಂದು ತಜ್ಞರು ಗುರುತಿಸಿದ್ದಾರೆ.

ಆದರೆ, ಹಬ್ಬಗಳು ಸಮೀಪಿಸುತ್ತಿರುವುದರಿಂದ ಜನರು ಮೈಮರೆತರೆ ಮತ್ತೆ ಸೋಂಕಿನ ಪ್ರಮಾಣ ಹೆಚ್ಚಳವಾಗಬಹುದು ಎಂಬ ಆತಂಕವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಕೇರಳದಲ್ಲಿ ಓಣಂ ಹಬ್ಬದಿಂದಾಗಿ ಸೆಪ್ಟೆಂಬರ್‌ ಕೊನೆಯಿಂದ ಏರಲು ಆರಂಭವಾದ ಸೋಂಕು ಇದೀಗ ದೇಶದಲ್ಲೇ ಅತಿಹೆಚ್ಚಿನ ಏರಿಕೆಯ ಪ್ರಮಾಣವನ್ನು ದಾಖಲಿಸುತ್ತಿದೆ. ಹೀಗಾಗಿ ಅ.25ರ ದಸರಾ, ಅ.28-29ರ ಈದ್‌ ಮಿಲಾದ್‌, ನ.14ರ ದೀಪಾವಳಿ ಹಾಗೂ ನ.20ರ ಛತ್‌ ಪೂಜೆಯ ವಿಷಯದಲ್ಲಿ ಜನರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇಸು ದುಪ್ಪಟ್ಟಾಗಲು 60 ದಿನ:

ದೇಶದಲ್ಲಿ ನಿರಂತರ ಮೂರು ವಾರಗಳಿಂದ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಸೆ.16ರ ಸಮಯದಲ್ಲಿ ಪ್ರತಿದಿನ ಸರಾಸರಿ 93,617ರಷ್ಟು ಹೊಸ ಸೋಂಕು (ಒಂದು ವಾರದ ಸರಾಸರಿ) ದಾಖಲಾಗುತ್ತಿದ್ದಾಗಲೇ ದೇಶದಲ್ಲಿ ಸೋಂಕಿನ ಪ್ರಮಾಣ ಗರಿಷ್ಠಕ್ಕೆ ತಲುಪಿತ್ತು. ಅಲ್ಲಿಂದ ನಂತರದ ಮೂರು ವಾರಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಾ ಬಂದು, ಈಗ ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಸೋಂಕಿನ ಪ್ರಮಾಣ ಸರಾಸರಿ 74,623ಕ್ಕೆ ತಲುಪಿದೆ. ಅಂದರೆ ಸೋಂಕಿನ ಪ್ರಮಾಣ ಶೇ.20ರಷ್ಟುಇಳಿಕೆಯಾಗಿದೆ. ಸೆ.7ಕ್ಕೆ ದೇಶದಲ್ಲಿ ಸೋಂಕು ದುಪ್ಪಟ್ಟಾಗಲು 32.6 ದಿನ ತೆಗೆದುಕೊಳ್ಳುತ್ತಿತ್ತು. ಆದರೆ, ಅ.7ಕ್ಕೆ ಅದು 60 ದಿನ ತೆಗೆದುಕೊಳ್ಳುತ್ತಿದೆ. ಇದು ಗಮನಾರ್ಹ ಸುಧಾರಣೆ ಎಂದು ತಜ್ಞರು ಹೇಳಿದ್ದಾರೆ.

ಸಾವಿನ ಪ್ರಮಾಣವೂ ಇಳಿಕೆ:

ದೇಶದಲ್ಲಿ ಕೊರೋನಾದಿಂದ ಸಂಭವಿಸುವ ನಿತ್ಯದ ಸಾವಿನ ಪ್ರಮಾಣ ಸೆ.15ರ ವೇಳೆಗೆ 1,169ಕ್ಕೆ ತಲುಪಿತ್ತು (ಒಂದು ವಾರದ ಸರಾಸರಿ). ಅದೇ ಗರಿಷ್ಠವೆಂದು ಗುರುತಿಸಲಾಗಿದ್ದು, ಅಲ್ಲಿಂದ ನಂತರ ಇಳಿಕೆಯಾಗುತ್ತಾ ಬಂದು, ಬುಧವಾರದ ವೇಳೆಗೆ ನಿತ್ಯದ ಸಾವಿನ ಸರಾಸರಿ ಸಂಖ್ಯೆ 977ಕ್ಕೆ ತಲುಪಿದೆ. ಇದು ಗರಿಷ್ಠ ಸಾವಿನ ಸಂಖ್ಯೆಯಿಂದ ಶೇ.16ರಷ್ಟುಕುಸಿದಿದೆ. ಹೊಸ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ನಿರಂತರ ಇಳಿತ ದಾಖಲಾಗುತ್ತಿರುವುದು ದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾದ ನಂತರ ಇದೇ ಮೊದಲು.

ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ: ಬುಧವಾರ ದಾಖಲೆ ಪ್ರಮಾಣದಲ್ಲಿ ಸೋಂಕಿತರು ಪತ್ತೆ

2, 3ನೇ ಅಲೆಯ ಭೀತಿ ಇದೆ, ಎಚ್ಚರ:

ಜಾಗತಿಕವಾಗಿ ಕೊರೋನಾ ವೈರಸ್‌ ವರ್ತಿಸುತ್ತಿರುವ ರೀತಿಯನ್ನು ಗಮನಿಸಿದರೆ ಭಾರತದಲ್ಲಿ ಈಗ ಮೊದಲ ಅಲೆ ಇಳಿಕೆಯಾಗುತ್ತಿದ್ದರೂ ಇದೇ ಟ್ರೆಂಡ್‌ ಮುಂದುವರೆಯುತ್ತದೆ ಎಂದು ಹೇಳಲಾಗದು. ಉದಾಹರಣೆಗೆ, ಅಮೆರಿಕದಲ್ಲಿ ಎರಡು ಬಾರಿ ಕೊರೋನಾ ಅಲೆ ಇಳಿಕೆಯಾಗಿ, ಮತ್ತೆ ಏರಿ ಈಗ ಮೂರನೇ ಅಲೆ ನಡೆಯುತ್ತಿದೆ. ಭಾರತದಲ್ಲಿ ಈಗ ಮೊದಲ ಅಲೆ ಇಳಿಮುಖವಾಗುತ್ತಿದೆ. ಜನರು ಮೈಮರೆತರೆ ಇಲ್ಲೂ ಎರಡು ಹಾಗೂ ಮೂರನೇ ಅಲೆಗಳು ಕಾಣಿಸಿಕೊಳ್ಳಬಹುದು.

ಈಗಲೂ ದೇಶದಲ್ಲಿ ನಿತ್ಯ 75,000 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದೇನೂ ಸಣ್ಣ ಸಂಖ್ಯೆಯಲ್ಲ. ಇನ್ನು, ಒಟ್ಟಾರೆ ಸೋಂಕಿತರ ಪ್ರಮಾಣ ನಿತ್ಯ ಇಳಿಕೆಯಾಗುತ್ತಿರುವುದಕ್ಕೆ ಸೋಂಕಿನ ಪರೀಕ್ಷೆಯ ಪ್ರಮಾಣ ಇಳಿಕೆಯಾಗಿರುವುದು ಕಾರಣವಾಗಿರಬಾರದು. ಪರೀಕ್ಷೆ ಈ ಹಿಂದಿನಷ್ಟೇ ಈಗಲೂ ನಡೆಯುತ್ತಿದ್ದು, ಸೋಂಕಿತರ ಪತ್ತೆ ಪ್ರಮಾಣ ಇಳಿಕೆಯಾಗುತ್ತಾ ಹೋಗಿದ್ದರೆ ಈಗಿನದು ಉತ್ತಮ ಬೆಳವಣಿಗೆ ತಜ್ಞರು ಹೇಳಿದ್ದಾರೆ.

ಕರ್ನಾಟಕ, ಕೇರಳದಲ್ಲಿ ಏರಿಕೆ

ದೇಶದಲ್ಲಿ ಕೊರೋನಾ ಸೋಂಕು ಇಳಿಮುಖವಾಗಲು ಮುಖ್ಯ ಕಾರಣ ಅತಿಹೆಚ್ಚು ಸೋಂಕು ಪತ್ತೆಯಾಗುತ್ತಿದ್ದ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸೆಪ್ಟೆಂಬರ್‌ ನಂತರ ಸೋಂಕು ಇಳಿಕೆಯಾಗುತ್ತಿರುವುದು. ಆದರೆ, ಕರ್ನಾಟಕ ಹಾಗೂ ಕೇರಳದಲ್ಲಿ ಈಗಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಸೋಂಕಿನ ಪ್ರಮಾಣ ಏರಿಕೆಯೂ ಆಗುತ್ತಿದೆ. ಇದು ಕೇಂದ್ರ ಸರ್ಕಾರದ ಚಿಂತೆಗೆ ಕಾರಣವಾಗಿದೆ.