ರೈಲಿನಲ್ಲಿ ರಾತ್ರಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಹತ್ವದ ಸೂಚನೆ ನೀಡಿದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳನ್ನು ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಬೇಕು ಎಂದು ರೈಲ್ವೆ ಮಂಡಳಿ ತನ್ನ ಎಲ್ಲಾ ವಲಯಗಳಿಗೆ ನಿರ್ದೇಶನ ನೀಡಿದೆ.
ರೈಲಿನಲ್ಲಿ ರಾತ್ರಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ರಾತ್ರಿ 11 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ರೈಲುಗಳಲ್ಲಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳನ್ನು ಕಡ್ಡಾಯವಾಗಿ ಸ್ವಿಚ್ ಆಫ್ ಮಾಡಬೇಕು ಎಂದು ರೈಲ್ವೆ ಮಂಡಳಿ ತನ್ನ ಎಲ್ಲಾ ವಲಯಗಳಿಗೆ ನಿರ್ದೇಶನ ನೀಡಿದೆ. ರೈಲಿನಲ್ಲಿ ಚಾರ್ಜ್ಗೆ ಹಾಕಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡ ಘಟನೆ ಬಳಿಕ ಈ ಸುರಕ್ಷತಾ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತೊಮ್ಮೆ ಆದೇಶಿಸಲಾಗಿದೆ.
ಪವರ್ ಬ್ಯಾಂಕ್ ಸ್ಫೋಟದ ಬಳಿಕ ರೈಲ್ವೆ ಮಂಡಳಿ ಅಲರ್ಟ್
ವರದಿಯ ಪ್ರಕಾರ, ಮುಂಬೈನಲ್ಲಿ ದಾದರ್ನಿಂದ ಬದ್ಲಾಪುರದತ್ತ ತೆರಳುತ್ತಿದ್ದ ಲೋಕಲ್ ರೈಲಿನಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಚಾರ್ಜ್ಗೆ ಹಾಕಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡಿತ್ತು. ಇದರಿಂದ ರೈಲಿನ ಬೋಗಿಯೊಳಗೆ ದಟ್ಟ ಹೊಗೆ ಆವರಿಸಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಮಂಡಳಿ, ರೈಲುಗಳಲ್ಲಿನ ಚಾರ್ಜಿಂಗ್ ಪಾಯಿಂಟ್ಗಳನ್ನು ರಾತ್ರಿ ನಿಗದಿತ ಸಮಯದಲ್ಲಿ ಸ್ಥಗಿತಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಅಕ್ಟೋಬರ್ 26ರಂದು ಹೊರಡಿಸಲಾದ ಪತ್ರದಲ್ಲಿ ಈ ನಿಯಮ ಪಾಲನೆಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಿಯಮ ಪಾಲಿಸದ ಸಿಬ್ಬಂದಿಗೆ ಎಚ್ಚರಿಕೆ
ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ವಿಚ್ ಆಫ್ ಮಾಡುವಲ್ಲಿ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದನ್ನು ಮಂಡಳಿ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಹೀಗಾಗಿ ಎಲ್ಲಾ ವಲಯಗಳ ರೈಲ್ವೆ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಬೇಕು, ನಿಯಮದ ಬಗ್ಗೆ ಅರಿವು ಮೂಡಿಸಬೇಕು ಮತ್ತು ಅಗತ್ಯ ತರಬೇತಿ ಒದಗಿಸಬೇಕು ಎಂದು ತಿಳಿಸಲಾಗಿದೆ.
ಅಷ್ಟೇ ಅಲ್ಲ, ಚಾರ್ಜಿಂಗ್ ಪಾಯಿಂಟ್ಗಳು ಸರಿಯಾದ ಸಮಯಕ್ಕೆ ಸ್ಥಗಿತಗೊಳ್ಳುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಸುರಕ್ಷತಾ ಕ್ರಮ ಜಾರಿಗೊಳಿಸುವಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬರಬಾರದು ಎಂದು ಎಚ್ಚರಿಸಲಾಗಿದೆ.
2014ರಿಂದಲೇ ಜಾರಿಯಲ್ಲಿದೆ ಈ ನಿಯಮ
ರೈಲುಗಳಲ್ಲಿ ರಾತ್ರಿ ವೇಳೆ ಮೊಬೈಲ್ ಚಾರ್ಜಿಂಗ್ ನಿಷೇಧಿಸುವ ನಿಯಮ ಹೊಸದೇನಲ್ಲ. 2014ರ ಜೂನ್ 19ರಿಂದಲೇ ಈ ನಿರ್ಬಂಧ ಜಾರಿಯಲ್ಲಿದೆ. ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್ಪ್ರೆಸ್ನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ನಂತರ 2021ರ ಮಾರ್ಚ್ನಲ್ಲಿಯೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಲ್ವೆ ಇಲಾಖೆ ಒತ್ತಿಹೇಳಿತ್ತು. ಪಶ್ಚಿಮ ರೈಲ್ವೆ 2021ರ ಮಾರ್ಚ್ 16ರಿಂದ ನಿಗದಿತ ರಾತ್ರಿ ಅವಧಿಯಲ್ಲಿ ಚಾರ್ಜಿಂಗ್ ಪಾಯಿಂಟ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕ್ರಮ ಆರಂಭಿಸಿತ್ತು.
ರಾತ್ರಿ ಪ್ರಯಾಣಿಸುವವರು ಏನು ಮಾಡಬೇಕು?
ರಾತ್ರಿ ರೈಲು ಪ್ರಯಾಣ ಕೈಗೊಳ್ಳುವವರು ತಮ್ಮ ಮೊಬೈಲ್ ಫೋನ್, ಪವರ್ ಬ್ಯಾಂಕ್ ಮತ್ತು ಇತರ ಅಗತ್ಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪ್ರಯಾಣ ಆರಂಭಿಸುವ ಮೊದಲು ಚಾರ್ಜ್ ಮಾಡಿಕೊಳ್ಳುವುದು ಉತ್ತಮ. ರಾತ್ರಿ 11ರಿಂದ ಬೆಳಗಿನ 5ರವರೆಗೆ ರೈಲಿನ ಚಾರ್ಜಿಂಗ್ ಪಾಯಿಂಟ್ಗಳು ಲಭ್ಯವಿರುವುದಿಲ್ಲ ಎಂಬುದನ್ನು ಪ್ರಯಾಣಿಕರು ಗಮನದಲ್ಲಿಟ್ಟುಕೊಳ್ಳಬೇಕು.
ಈ ಕ್ರಮದ ಮುಖ್ಯ ಉದ್ದೇಶ ರೈಲುಗಳಲ್ಲಿ ಬೆಂಕಿ ಅವಘಡಗಳ ಅಪಾಯವನ್ನು ತಗ್ಗಿಸುವುದು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವುದಾಗಿದೆ. ಆದ್ದರಿಂದ ಪ್ರಯಾಣಿಕರು ನಿಯಮವನ್ನು ಪಾಲಿಸುವುದರ ಜೊತೆಗೆ ಚಾರ್ಜಿಂಗ್ಗೆ ಸಂಬಂಧಿಸಿದ ಸುರಕ್ಷತಾ ಮುನ್ನೆಚ್ಚರಿಕೆಗಳನ್ನೂ ಅನುಸರಿಸಬೇಕು.




