ರೈಲ್ವೇ ಪ್ರಯಾಣಿಕರಿಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಆರ್‌ಎಸಿ ಟಿಕೆಟ್ ನಿಯಮದಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ನಿರಾಳಾಗಿದ್ದಾರೆ. ಏನಿದು ಹೊಸ ಟಿಕೆಟ್ ನಿಯಮ

ನವದೆಹಲಿ (ನ.15) ಭಾರತೀಯ ರೈಲ್ವೇಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸೌಕರ್ಯಗಳು ಹೈಟೆಕ್ ಆಗಿದೆ. ಪ್ರಯಾಣ ಮತ್ತಷ್ಟು ಆರಾಮವಾಗಿದೆ. ಟಿಕೆಟ್ ಬುಕಿಂಗ್ ಮಾಡಿದ ಬಳಿಕ ಸ್ಟೇಟಸ್ ತಲೆನೋವಿನ ವಿಚಾರ. ಕಾರಣ RAC ಆಗಿದ್ದರೆ ಸೀಟು ಖಚಿತ, ಆದರೆ ಸ್ಲೀಪಿಂಗ್ ಬರ್ತ್ ಸಿಗುತ್ತೋ ಅಥವಾ ಮತ್ತೊಬ್ಬ ಪ್ರಯಾಣಿಕನ ಜೊತೆ ಸೀಟು ಹಂಚಿಕೊಳ್ಳಬೇಕಾ ಅನ್ನೋದು ಗೊಂದಲದ ಗೂಡಾಗಿರುತ್ತದೆ. ಸ್ಲೀಪಿಂಗ್ ಟಿಕೆಟ್ ದರ ಪಾವತಿಸಿದರೂ ಸ್ಲೀಪಿಂಗ್ ಬರ್ತ್ ಸಿಗುವ ಕುರಿತು ಯಾವುದೇ ಖಚಿತತೆ ಇರುವುದಿಲ್ಲ. ಈ ನಿಯಮ ಬದಲಾಗುತ್ತಿದೆ. ಪ್ರಯಾಣಿಕರಿಗೆ ಸ್ಲೀಪಿಂಗ್ ಬರ್ತ್ ಸಿಗದಿದ್ದರೂ ಅವರಿಂದ ಫುಲ್ ಟಿಕೆಟ್ ದರ ವಸೂಲಿ ನಿಯಮದಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತಿದೆ.

RAC ಟಿಕೆಟ್‌ನಲ್ಲಿ ಸ್ಲೀಪಿಂಗ್ ಬರ್ತ್ ಸಿಗುವ ಯಾವುದೇ ಖಚಿತತೆ ಇರುವುದಿಲ್ಲ. ಒಂದು ವೇಳೆ ಬೇರೆ ಬರ್ತ್ ಖಾಲಿಯಾಗದಿದ್ದರೆ, ಇಬ್ಬರು ಅಪರಿಚಿತ ಪ್ರಯಾಣಿಕರು ಒಂದೇ ಬರ್ತ್ ಹಂಚಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದಶಕಗಳಿಂದ ನಡೆದುಕೊಂಡು ಬಂದಿರುವ ಈ ವ್ಯವಸ್ಥೆಗೆ ಇದೀಗ ದೊಡ್ಡ ಮಟ್ಟದ ಬದಲಾವಣೆ ತರಲು ಭಾರತೀಯ ರೈಲ್ವೆ ಮುಂದಾಗಿದೆ.

RAC ಟಿಕೆಟ್ ವ್ಯವಸ್ಥೆಯಲ್ಲಿ ಹೊಸ ನೀತಿ

RAC ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕೇ ಅಥವಾ ಹೊಸದಾಗಿ ವಿನ್ಯಾಸಗೊಳಿಸಬೇಕೇ ಅನ್ನೋ ಕುರಿತು ಭಾರತೀಯ ರೈಲ್ವೇ ಚರ್ಚಿಸುತ್ತಿದೆ. ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಮಲಗಲು ಪೂರ್ತಿ ಬರ್ತ್ ಸಿಗದಿದ್ದರೂ, ಅವರಿಂದ ಪೂರ್ಣ ಪ್ರಮಾಣದ ಟಿಕೆಟ್ ಶುಲ್ಕವನ್ನು ಪಡೆಯುತ್ತಿರುವ ಪದ್ಧತಿಗೆ ಬ್ರೇಕ್ ಹಾಕಲು ಮುಂದಾಗಿದೆ.

ಪ್ರಯಾಣಿಕರಿಗೆ ಮಲಗಲು ಪೂರ್ತಿ ಜಾಗ ಸಿಗದಿದ್ದಾಗ ಅವರಿಂದ ಪೂರ್ತಿ ಟಿಕೆಟ್ ದರ ವಸೂಲಿ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೇರೆ ಖಾಲಿ ಬರ್ತ್‌ಗಳು ಲಭ್ಯವಿಲ್ಲದಿದ್ದಾಗ ಇಬ್ಬರು ಅಪರಿಚಿತ ಪ್ರಯಾಣಿಕರು ಒಂದೇ ಸೀಟನ್ನು ಹಂಚಿಕೊಳ್ಳಬೇಕಾದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮಾತ್ರವಲ್ಲದೆ, ಟಿಕೆಟ್ ಪರೀಕ್ಷಕರಿಗೂ (TTE) ಸಾಕಷ್ಟು ತೊಂದರೆಯಾಗುತ್ತಿದೆ ಎಂದು ರೈಲ್ವೇ ಅಧಿಕಾರಿ ಹೇಳಿದ್ದಾರೆ. ಹೀಗಾಗಿ ಈ ನಿಯಮದಲ್ಲಿ ಬದಲಾವಣೆ ಪ್ರಯಾಣಿಕರು ಹಾಗೂ ರೈಲ್ವೇ ಸಿಬ್ಬಂದಿಗಳಿಗೆ ಅನೂಕೂಲವಾಗಲಿದೆ.

ಸಂಸದೀಯ ಸಮಿತಿಯಿಂದಲೂ ಆಕ್ಷೇಪ

ಫೆಬ್ರವರಿ 2026ರಲ್ಲಿ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಲ್ಲಿಸಿದ್ದ ವರದಿಯಲ್ಲೂ ಫುಲ್ ಬರ್ತ್ ದರ ವಸೂಲಿ ಕುರಿತು ಅಕ್ಷೇಪ ವ್ಯಕ್ತವಾಗಿತ್ತು. ರೈಲು ಹತ್ತುವ ಸಮಯದಲ್ಲಿ ಪೂರ್ತಿ ಹಣ ಪಾವತಿಸಿ, ನಂತರ ಪೂರ್ಣ ಬರ್ತ್ ಪಡೆಯಲು ಸಾಧ್ಯವಾಗದ ಪ್ರಯಾಣಿಕರಿಗೆ ಟಿಕೆಟ್ ದರದ ಒಂದು ಭಾಗವನ್ನು ಮರುಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.