ಭಾರತೀಯ ರೈಲ್ವೇ ಗುಡ್ ನ್ಯೂಸ್; ಬೆಳಗಾವಿ, ಮಂಗಳೂರು ರೈಲು ವಿಸ್ತರಣೆ ಸೇರಿ ಹಲವು ಕೊಡುಗೆ!
ಕನ್ನಡಿಗರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಬೆಳಗಾವಿ ರೈಲು ಸೇವೆ ವಿಸ್ತರಣೆ ಮಾಡಿದರೆ, ಬಿರೂರಿನಲ್ಲಿ ನಿಲುಗಡೆಗೆ ಅವಕಾಶ ಮಾಡಿದೆ. ಸೌತ್ ವೆಸ್ಟರ್ನ್ ರೈಲ್ವೇ ಮಾಡಿದ ಮಹತ್ವದ ಘೋಷಣೆಗಳೇನು?
ನವದೆಹಲಿ(ಜ.02) ಭಾರತೀಯ ರೈಲ್ವೇ ಅಧುನೀಕರಣೆಗೊಂಡಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಹಲವು ಬದಲಾವಣೆ ಮಾಡಲಾಗಿದೆ. ವಂದೇ ಭಾರತ್ ಸೇರಿದಂತೆ ಹಲವು ಹೊಸ ರೈಲು ಸೇವೆ ಆರಂಭಿಸಲಾಗಿದೆ. ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚುವರಿ ರೈಲು ಸೇವೆ ನೀಡಲಾಗುತ್ತಿದೆ. ಇದೀಗ ಕರ್ನಾಟಕದ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಕೆಲ ರೈಲು ಸೇವೆಯನ್ನು ವಿಸ್ತರಿಸಿದ್ದರೆ, ಮತ್ತೆ ಕೆಲ ರೈಲುಗಳ ನಿಲುಗಡೆಗೂ ಅವಕಾಶ ಮಾಡಿದೆ. ಸೌತ್ ವೆಸ್ಟರ್ನ್ ರೈಲ್ವೇ ನಿರ್ಧಾರ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.
ಬೆಳಗಾವಿ ರೈಲು ಸೇವೆ ವಿಸ್ತರಣೆ
ಬೆಳಗಾವಿ ಹಾಗೂ ಮೀರಜ್ ನಡುವೆ ಎರಡು ಹೆಚ್ಚುವರಿ ರೈಲುಗಳು ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರ ಅನುಕೂಲ ವಿಶೇಷ ಸಂದರ್ಭಗಳಲ್ಲಿ ಹೆಚ್ಚಾಗುವ ಜನಸಂದಣಿ ತಪ್ಪಿಸಲು ರೈಲ್ವೇ ಇಲಾಖೆ ಬೆಳಗಾವಿ-ಮೀರಜ್ ನಡುವೆ ಎರಡು 07301/07302 ಹಾಗೂ 07303/07304 ಹೆಚ್ಚುವರಿ ರೈಲು ಸೇವೆ ನೀಡಿತ್ತು. ಮೊದಲು ಘೋಷಿಸಿದಂತೆ ಈ ರೈಲು ಸೇವೆ ಡಿಸೆಂಬರ್ 31, 2024ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ ಈ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಇದೀಗ ಈ ಸೇವೆ ಜನವರಿ 31, 2025ರ ವರೆಗೆ ಮುಂದುವರಿಯಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಹೇಳಿದೆ. ಇನ್ನು ಈ ರೈಲು ಹೊರಡುವ ಸಮಯ, ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ 2 ರೈಲುಗಳ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಸೇವೆಯನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸಲಾಗುತ್ತಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಹೇಳಿದೆ.
ಹೊಸ ವರ್ಷದ ಆರಂಭದಲ್ಲೇ 5 ಹೊಸ ರೈಲು ಸೇವೆ ಆರಂಭ, ಯಾವ ಮಾರ್ಗದಲ್ಲಿ ಸಂಚಾರ?
ಬೀರೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ
ಬೆಳಗಾವಿ ಮೀರಜ್ ರೈಲು ಸೇವೆ ವಿಸ್ತರಣೆ ಮಾಡಲಾಗಿದ್ದರೆ, ಮತ್ತೊಂದೆಡೆ ಚಿಕ್ಕಮಗಳೂರಿನ ಬೀರೂರಿನಲ್ಲಿ ರೈಲು ನಿಲುಗಡೆಗೆ ಅವಕಾಶ ನೀಡಲಾಗಿದೆ. ಯಶವಂತಪುರ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು 16587/16588 ಕಡೂರು ತಾಲೂಕಿನ ಬೀರೂರಿನಲ್ಲಿ ನಿಲುಗಡೆ ಮಾಡಲು ಸೂಚಿಸಲಾಗಿದೆ. ಬೀರೂರು ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ಒಂದು ನಿಮಿಷ ನಿಲಗಡೆಯಾಗಲಿದೆ. ಜನವರಿ 1, 2025ರಿಂದಲೇ ಈ ಹೊಸ ನಿಲುಗಡೆ ಸೂಚನೆ ಜಾರಿಯಾಗಲಿದೆ.
ವಿಜಯಪುರ ಮಂಗಳೂರು ರೈಲು ವಿಸ್ತರಣೆ
ವಿಜಪುರ-ಮಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು ಸೇವೆ ಕೂಡ ವಿಸ್ತರಣೆಯಾಗಿದೆ. ಇದೇ ರೀತಿ ಮಂಗಳೂರು-ವಿಜಯಪುರ ರೈಲು ಕೂಡ ವಿಸ್ತರಣೆಯಾಗುತ್ತಿದೆ. ಮೊದಲ ಘೋಷಣೆಯಂತೆ ಈ 07377 ಹಾಗೂ 07378 ರೈಲು ಸಂಖ್ಯೆಯ ರೈಲು ಸೇವೆಗಳು ಡಿಸೆಂಬರ್ 31, 2024ರಂದು ಅಂತ್ಯಗೊಳ್ಳುತ್ತಿತ್ತು. ಆದರೆ ಇದೀಗ ಈ ಎರಡು ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07377 ಹಾಗೂ 07378 ಸೇವೆಯನ್ನು ಜೂನ್ 30, 2025ರ ವರೆಗೆ ವಿಸ್ತರಿಸಲಾಗಿದೆ.
ವಿಜಯಪುರ-ಮಂಗಳೂರು ರೈಲು ಸೇವೆ ವಿಸ್ತರಣೆ ಮಾತ್ರವಲ್ಲ, ಸಮಯದಲ್ಲೂ ಕೆಲ ಬದಲಾವಣೆಗಳು ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ರೈಲು ಟಿಕೆಟ್ ಬುಕ್ ಮಾಡುವ ಮುನ್ನ, ಪ್ರಯಾಣಕ್ಕೂ ಮುನ್ನ ಹೊಸ ಪರಿಷ್ಕೃತ ವೇಳಾಪಟ್ಟಿ ಪಪರಿಶೀಲಿಸಲು ರೈಲ್ವೇ ಇಲಾಖೆ ಮನವಿ ಮಾಡಿದೆ.
ಕೇವಲ 45 ಪೈಸೆಗೆ 10 ಲಕ್ಷ ರೂಪಾಯಿ ವಿಮೆ, ಇದು ಭಾರತದ ಅತ್ಯಂತ ಅಗ್ಗದ ಇನ್ಶೂರೆನ್ಸ್!
ಭಾರತೀಯ ರೈಲ್ವೇ ಹೊಸ ವರ್ಷದಿಂದ ಹಲವು ಹೊಸ ರೈಲು ಸೇವೆ ಆರಂಭಿಸಿದೆ. ಜನವರಿ 2025ರ ಆರಂಭಿಕ ದಿನಗಳಲ್ಲಿ ದೆಹಲಿ ಹಾಗೂ ಜಮ್ಮು ಕಾಶ್ಮೀರ ನಡುವೆ 5 ಹೊಸ ರೈಲು ಸೇವೆ ಆರಂಭಿಸುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಜನವರಿ ಮೊದಲ ವಾರದಲ್ಲೇ ಹೊಸ ರೈಲು ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಹೊಸ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಕಾಶ್ಮೀರದ ಸಾರಿಗೆ ಸಂಪರ್ಕ ಮತ್ತಷ್ಟು ಗಟ್ಟಿಗೊಳಿಸಲಿದೆ. ಇಷ್ಟೇ ಅಲ್ಲ ಕಾಶ್ಮೀರ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.