ಊರಿಗೆ ಮರಳಲು ವಲಸಿಗರಿಗೆ ಸಮ್ಮತಿ| ವಿವಿಧೆಡೆ ಸಿಲುಕಿರುವ ಪ್ರವಾಸಿಗರು, ವಿದ್ಯಾರ್ಥಿಗಳಿಗೂ ಅನುಕೂಲ| ಕ್ವಾರಂಟೈನ್ ಕಡ್ಡಾಯ
ನವದೆಹಲಿ(ಏ.30): ಲಾಕ್‌ಡೌನ್‌ನಿಂದಾಗಿ ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಯಿಂದ ಎಚ್ಚೆತ್ತ ಕೇಂದ್ರ ಸರ್ಕಾರ, ಅವರಿಗೆ ತಮ್ಮ ಊರುಗಳಿಗೆ ಮರಳಲು ಅನುಮತಿ ನೀಡಿದೆ. ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಇತರರು ತಮ್ಮ ಊರುಗಳಿಗೆ ಮರಳಲು ಇಚ್ಛಿಸಿದರೆ ಅವರನ್ನು ಬಸ್‌ಗಳ ಮೂಲಕ ಕಳಿಸಿಕೊಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸುತ್ತೋಲೆ ಹೊರಡಿಸಿದ್ದಾರೆ.
ಆದರೆ, ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಬೇರೆ ಬೇರೆ ಕಡೆ ಸಿಲುಕಿರುವವರನ್ನು ಊರುಗಳಿಗೆ ತಲುಪಿಸಲೆಂದೇ ರಾಜ್ಯಗಳು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಅವರು ಸಂಕಷ್ಟಕ್ಕೆ ಸಿಲುಕಿರುವವರ ಪಟ್ಟಿತಯಾರಿಸಬೇಕು. ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುವಾಗ ಬಸ್‌ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿರಬೇಕು. ಪ್ರಯಾಣಿಕರನ್ನು ತಪಾಸಣೆ ಮಾಡಿ ಕೊರೋನಾ ಸೋಂಕಿನ ಲಕ್ಷಣಗಳಿಲ್ಲದವರನ್ನು ಮಾತ್ರ ಕರೆದೊಯ್ಯಬೇಕು.
ಚೀನಾದಲ್ಲಿನ ಅಮೆರಿಕ ಕಂಪನಿಗಳು ಭಾರತಕ್ಕೆ?
ಬಸ್‌ಗಳಲ್ಲಿ ಕುಳಿತುಕೊಳ್ಳುವಾಗ ಸಾಮಾಜಿಕ ಅಂತರ ಪಾಲಿಸಬೇಕು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕರೆದೊಯ್ಯುವುದಾದರೆ ಆ ರಾಜ್ಯದ ಜೊತೆ ಮೊದಲೇ ಮಾತನಾಡಿ ವ್ಯವಸ್ಥೆ ಮಾಡಿಕೊಂಡಿರಬೇಕು. ಪ್ರಯಾಣಿಕರು ತಮ್ಮ ಗಮ್ಯ ತಲುಪಿದ ಮೇಲೆ ಕಡ್ಡಾಯವಾಗಿ ಅವರನ್ನು ಕ್ವಾರಂಟೈನ್‌ಗೆ ಕಳುಹಿಸಬೇಕು. ಹೀಗೆ ಪ್ರಯಾಣಿಸುವ ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳಬೇಕು ಎಂದು ಸರ್ಕಾರ ತಾಕೀತು ಮಾಡಿದೆ. ಆದರೆ, ಒಂದು ಕುಟುಂಬ ಅಥವಾ ಕೆಲ ಜನರು ಖಾಸಗಿ ವಾಹನದಲ್ಲಿ ಹೀಗೆ ತೆರಳಬಹುದೇ ಎಂಬ ಬಗ್ಗೆ ಏನನ್ನೂ ಹೇಳಿಲ್ಲ.
ಕೇಂದ್ರ ಸರ್ಕಾರದ ಈ ನಿರ್ಧಾರವು ಲಾಕ್‌ಡೌನ್ ಮುಗಿಯುವ ಮೇ 3ರವರೆಗೆ ಅನ್ವಯಿಸುತ್ತದೆ. ಇದರಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಪಂಜಾಬ್, ಅಸ್ಸಾಂ, ಛತ್ತೀಸ್‌ಗಢ, ರಾಜಸ್ಥಾನ ಮುಂತಾದ ರಾಜ್ಯಗಳು ಸಾವಿರಾರು ಜನರನ್ನು ದೇಶದ ಬೇರೆ ಬೇರೆ ಭಾಗಗಳಿಂದ ಬಸ್‌ನಲ್ಲಿ ಕರೆಸಿಕೊಂಡಿವೆ. ಆದರೂ ಲಕ್ಷಾಂತರ ಜನರು ಇನ್ನೂ ವಿವಿಧೆಡೆ ಸಿಲುಕಿದ್ದಾರೆ.
ಈ ದೇಶದ ಆಸ್ಪತ್ರೆಯ ಬಾತ್‌ರೂಂಗಳಲ್ಲಿ ಶವದ ರಾಶಿ!
ಷರತ್ತುಗಳು
- ಜನರನ್ನು ಕರೆದೊಯ್ಯಲು ಸ್ಯಾನಿಟೈಸ್ ಮಾಡಿದ ಬಸ್‌ಗಳನ್ನು ಬಳಸಬೇಕು
- ತಪಾಸಣೆ ಮಾಡಿ ಕೊರೋನಾ ಇಲ್ಲದವರನ್ನು ಮಾತ್ರ ಕರೆದೊಯ್ಯಬೇಕು
- ಬಸ್‌ನಲ್ಲಿ ಅಂತರ ಪಾಲಿಸಬೇಕು, ಆರೋಗ್ಯ ಸೇತು ಇನ್‌ಸ್ಟಾಲ್ ಮಾಡಿಸಬೇಕು
- ಇನ್ನೊಂದು ರಾಜ್ಯಕ್ಕೆ ಕರೆದೊಯ್ಯುವ ಮುನ್ನ ಆ ರಾಜ್ಯದ ಜತೆ ಚರ್ಚಿಸಬೇಕು
- ಗಮ್ಯ ತಲುಪಿದ ಮೇಲೆ ವಲಸಿಗರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು
