ಸೇನಾ ಘಟಕಗಳಿಗಾಗಿ ಎಲೆಕ್ಟ್ರಿಕ್‌ ವಾಹನ ಖರೀದಿಗೆ ನಿರ್ಧಾರ ಮಾಡಲಾಗಿದ್ದು, ಶೇ.25 ಲಘು ವಾಹನ, ಶೇ.38 ಬಸ್‌, ಶೇ.48 ಬೈಕ್‌ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಲು ಪ್ಲ್ಯಾನ್ ಮಾಡಲಾಗಿದೆ. ಕಾರ್ಬನ್‌ ಹೊರಸೂಸುವಿಕೆ ತಗ್ಗಿಸಲು ಈ ಕ್ರಮ ಮಾಡಲಾಗಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್‌ ವಾಹನ ಖರೀದಿಗೆ ಟೆಂಡರ್‌ ಹಾಕಲಾಗಿದೆ.

ನವದೆಹಲಿ: ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಜಾರಿಗೊಳಿಸಲು ನಾನಾ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಈಗ ಸೇನೆಯಲ್ಲೂ ‘ವಿದ್ಯುತ್‌ ಚಾಲಿತ ವಾಹನ’ಗಳ ಮಂತ್ರ ಪಠಿಸಲು ನಿರ್ಧರಿಸಿದೆ. ಆಯ್ದ ಸೇನಾ ಘಟಕಗಳಿಗಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಆಯ್ದ ಸೇನಾ ಘಟಕಗಳಲ್ಲಿ ಹಾಲಿ ಇರುವ ಶೇ. 25 ರಷ್ಟು ಲಘು ವಾಹನಗಳು, ಶೇ. 38 ರಷ್ಟು ಬಸ್‌ ಹಾಗೂ ಶೇ. 48 ರಷ್ಟು ಮೋಟಾರು ಸೈಕಲ್‌ಗಳನ್ನು ಎಲೆಕ್ಟ್ರಿಕ್‌ ವಾಹನಗಳೊಂದಿಗೆ ಬದಲಾಯಿಸುವ ಯೋಜನೆಯಿದೆ.

ಇಂಗಾಲಕ್ಕೆ ಕಡಿವಾಣ:
‘ಫಾಸಿಲ್‌ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಕಾರ್ಬನ್‌ ಹೊರಸೂಸುವಿಕೆಯನ್ನು ತಗ್ಗಿಸುವ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿ ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಸೇರ್ಪಡೆ ಮಾಡುವ ಮಾರ್ಗಸೂಚಿಯನ್ನು ಸೇನೆ ರೂಪಿಸಿದೆ. ಎಲೆಕ್ಟ್ರಿಕ್‌ ವಾಹನಗಳನ್ನು ಸೇನೆಯಲ್ಲಿ ಪರಿಚಯಿಸುವ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಭಾರತೀಯ ಸೇನೆಯ ಉದ್ಯೋಗಶೀಲತೆ, ದುರ್ಗಮ ಸ್ಥಳದಲ್ಲಿ ಕಾರ್ಯನಿರ್ವಹಣೆ ಹಾಗೂ ಕಾರ್ಯಾಚರಣೆಯ ಬದ್ಧತೆ ಮೊದಲಾದ ವಿವಿಧ ವಿಷಯಗಳನ್ನು ಪರಿಗಣಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: 2025ಕ್ಕೆ ದೇಶದ ಎಲ್ಲ ರೈಲು ಎಂಜಿನ್‌ಗಳು ಎಲೆಕ್ಟ್ರಿಕ್‌: Railway ನೀತಿ

ಚಾರ್ಜಿಂಗ್‌ ಸೌಲಭ್ಯ:
‘ಸೇನಾ ಘಟಕಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಅದನ್ನು ಬೆಂಬಲಿಸುವ ಇವಿ ಚಾರ್ಜಿಂಗ್‌ ಪಾಯಿಂಟ್‌ಗಳು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲಾಗುವುದು. ಪ್ರತಿ ಇವಿ ಚಾರ್ಜಿಂಗ್‌ ನಿಲ್ದಾಣದಲ್ಲಿ ಕನಿಷ್ಠ ಒಂದು ಫಾಸ್ಟ್‌ ಚಾರ್ಜರ್‌ ಹಾಗೂ 2-3 ನಿಧಾನ ಚಾರ್ಜರ್‌ಗಳಿರಲಿವೆ. ಇದಲ್ಲದೇ ಎಲೆಕ್ಟ್ರಿಕ್‌ ಸರ್ಕ್ಯೂಟ್‌ ಕೇಬಲ್‌ ಹಾಗೂ ಸಮರ್ಪಕ ಲೋಡ್‌ ಹೊರುವ ಸಾಮರ್ಥ್ಯವುಳ್ಳ ಟ್ರಾನ್ಸ್‌ಫಾರ್ಮರ್‌ಗಳನ್ನು ಇವಿ ಚಾರ್ಜಿಂಗ್‌ ನಿಲ್ದಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಎಂದು ಹೇಳಿದ್ದಾರೆ.

ಇದಲ್ಲದೆ ಸೇನೆಯು ಸೌರ ಪ್ಯಾನೆಲ್‌ ಚಾರ್ಜಿಂಗ್‌ ಘಟಕಗಳನ್ನು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ. ಸದ್ಯದ ಯೋಜನೆಯ ಪ್ರಕಾರ ಸೇನೆಯಲ್ಲಿರುವ ಬಸ್‌ಗಳ ಕೊರತೆಯನ್ನು ನೀಗಿಸಲು ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವೇ 60 ಬಸ್‌ಗಳು ಹಾಗೂ 24 ಫಾಸ್ಟ್‌ ಚಾರ್ಜರ್‌ಗಳ ಖರೀದಿಯ ಟೆಂಡರ್‌ ಆಹ್ವಾನಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಸಂಪೂರ್ಣ ಎಲೆಕ್ಟ್ರಿಕ್ ಮಯ, 921 ಟಾಟಾ ಎಲೆಕ್ಟ್ರಿಕ್ ಬಸ್‌ಗೆ ರಾಜ್ಯ ಸರ್ಕಾರ ಆರ್ಡರ್!

ಸರ್ಕಾರದ ಹಸಿರು ಉಪಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಸೇನೆಯು ಲಭ್ಯವಿರುವ ಎಲೆಕ್ಟ್ರಿಕ್‌ ವಾಹನಗಳ ಪ್ರದರ್ಶನವನ್ನು ನಡೆಸಿತ್ತು. ಇದರಲ್ಲಿ ಎಲೆಕ್ಟ್ರಿಕ್‌ ವಾಹನಗಳ ಉತ್ಪಾದಕರಾದ ಟಾಟಾ ಮೋಟರ್ಸ್‌, ಪರ್ಫೆಕ್ಟ್ ಮೆಟಲ್‌ ಇಂಡಸ್ಟ್ರೀಸ್‌, ರಿವೋಲ್ಟ್‌ ಮೋಟ​ರ್ಸ್‌ ಮೊದಲಾದ ಕಂಪನಿಗಳು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ತಮ್ಮ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದರು.