ನವದೆಹಲಿ(ಸೆ.21): ಪ್ಯಾಂಗಾಂಗ್‌ ಸರೋವರದಲ್ಲಿ ಸಂಘರ್ಷದ ವಾತಾವರಣ ಮುಂದುವರಿದಿರುವಾಗಲೇ ಅದರ ಆಸುಪಾಸಿನ 20ಕ್ಕೂ ಹೆಚ್ಚು ಬೆಟ್ಟಪ್ರದೇಶಗಳಲ್ಲಿ ಭಾರತೀಯ ಸೇನೆ ಸಂಪೂರ್ಣ ಹಿಡಿತ ಸಾಧಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ಯಾಂಗಾಂಗ್‌ನ ಉತ್ತರ ಹಾಗೂ ದಕ್ಷಿಣ ದಂಡೆಯ ಬೆಟ್ಟಗಳು ಸೇರಿದಂತೆ, ಚೂಶುಲ್‌ ಪ್ರದೇಶದ ಎತ್ತರದ ಪ್ರದೇಶಗಳನ್ನೂ ಭಾರತೀಯ ಸೇನೆ ಆಕ್ರಮಿಸಿಕೊಂಡಿದೆ. ಈ ಪ್ರದೇಶದಲ್ಲಿ ಇದೀಗ ಭಾರಿ ಚಳಿಯ ವಾತಾವರಣ ಕಂಡುಬರುತ್ತಿದೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ, ಸಂಘರ್ಷದ ಪ್ರದೇಶಗಳಲ್ಲಿ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ವಾಯುಪಡೆ ತನ್ನ ಬತ್ತಳಿಕೆಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ರಫೇಲ್‌ ಯುದ್ಧ ವಿಮಾನಗಳನ್ನು ಲಡಾಖ್‌ನಲ್ಲಿ ಹಾರಾಟ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಸೋಮವಾರ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಧ್ಯೆ ಮಾತುಕತೆ ನಿಗದಿಯಾಗಿದೆ.

ಆ.29ರಿಂದ ಸೆಪ್ಟೆಂಬರ್‌ 2ನೇ ವಾರದ ಅವಧಿಯಲ್ಲಿ ಭಾರತೀಯ ಯೋಧರು ಮಗರ್‌, ಗುರುಂಗ್‌, ರೆಸೆಹೆನ್‌ ಲಾ, ರೆಜಾಂಗ್‌ ಲಾ, ಮೋಖ್‌ಪರಿ ಬೆಟ್ಟಗಳ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬೆಟ್ಟಗಳು ಸದ್ಯ ಚೀನಾ ಯೋಧರ ವಶದಲ್ಲಿರುವ ಫಿಂಗರ್‌ 4 ಎಂದು ಕರೆಯಲಾಗುವ ಬೆಟ್ಟಗಳಿಗೆ ಹೊಂದಿಕೊಂಡಂತೆ ಇವೆ.

ಈ ಬೆಟ್ಟಗಳು ಹಲವು ವರ್ಷಗಳಿಂದ ಖಾಲಿ (ಪಹರೆ ಮುಕ್ತ) ಇದ್ದು, ಅವುಗಳನ್ನು ಚೀನಾ ಯೋಧರು ಆಕ್ರಮಿಸಿಕೊಳ್ಳುವ ಮೊದಲೇ ಭಾರತೀಯ ಯೋಧರು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಪ್ರದೇಶಗಳು ಎಲ್‌ಎಸಿಯಿಂದ ಒಳಗೆ ಅಂದರೆ, ಭಾರತದ ಭೂಭಾಗದಲ್ಲೇ ಇವೆ.

ಶಸ್ತ್ರ ಬಳಕೆ:

ನಿಶ್ಯಸ್ತ್ರ ಬಳಕೆ ಪ್ರದೇಶಗಳಲ್ಲಿ ಶಸ್ತಾ್ರಸ್ತ್ರ ಬಳಸದೇ ಇರುವ ನಿಯಮವನ್ನು ಚೀನಾ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಭಾರತೀಯ ಯೋಧರು ಕೂಡ ಶಸ್ತ್ರ ಬಳಕೆ ಮಾಡಲು ನಿರ್ಧರಿಸುವ ಮೂಲಕ ತಮ್ಮ ಕಾರ್ಯತಂತ್ರ ಬದಲಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಗುಂಡಿನ ಚಕಮಕಿ:

ಈ ಆಯಕಟ್ಟಿನ ಪ್ರದೇಶಗಳು ಭಾರತದ ಕೈವಶವಾಗುವುದನ್ನು ತಡೆಯಲು ಚೀನಾ ಯೋಧರು ವಿಫಲಗೊಳಿಸುವ ಸಲವಾಗಿ ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯ ಪ್ರದೇಶದಿಂದ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕುವ ಯತ್ನವನ್ನೂ ಮಾಡಿದ್ದರು. ಆದರೆ ಆ ಯತ್ನಗಳನ್ನು ಭಾರತೀಯ ಯೋಧರು ವಿಫಲಗೊಳಿಸಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹೈಅಲರ್ಟ್‌:

6 ಬೆಟ್ಟಗಳು ಭಾರತದ ಕೈವಶವಾದ ಬೆನ್ನಲ್ಲೇ ರೆಜಾಂಗ್‌ ಲಾ ಮತ್ತು ರೆಚೆನ್‌ ಲಾ ಪ್ರದೇಶ ಸಮೀಪ ಚೀನಾ ಹೆಚ್ಚುವರಿಯಾಗಿ 3000 ಯೋಧರ ನಿಯೋಜನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕೂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌, ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ತನ್ನ ಕಾರ್ಯತಂತ್ರವನ್ನು ರೂಪಿಸಿದೆ.