ನವದೆಹಲಿ(ಜ.03): ಪಾಕಿಸ್ತಾನದ ಗುಪ್ತಚರರು ‘ನಾನು ನಿಮ್ಮ ಮೇಲಧಿಕಾರಿ’ ಎಂದು ಹೇಳಿಕೊಂಡು ಭಾರತದ ಯೋಧರಿಗೆ ಫೋನ್‌ ಕರೆ ಮಾಡಿ ರಹಸ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಭಾರತದ ಗುಪ್ತಚರ ದಳ ಇದನ್ನು ಪತ್ತೆಹಚ್ಚಿದ್ದು, ಸೇನಾಪಡೆಗಳ ಎಲ್ಲಾ ವಿಭಾಗಗಳಿಗೆ ಈ ಕುರಿತು ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಹಾಗೂ ಗುಪ್ತಚರರು ಭಾರತೀಯ ಸೇನೆಯ ಕಂಟ್ರೋಲ್‌ ರೂಮ್‌ಗಳಿಗೆ ಕರೆ ಮಾಡಿ ಸೈನಿಕರ ಚಲನವಲನ, ವಿವಿಐಪಿ ಸಂಚಾರ, ಪ್ರಮುಖ ಸೆಕ್ಯುರಿಟಿ ಪೋಸ್ಟ್‌ಗಳು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಇವರು ತಮ್ಮನ್ನು ಸದರಿ ಯೋಧರು ಕೆಲಸ ಮಾಡುತ್ತಿರುವ ಘಟಕದ ಹಿರಿಯ ಅಧಿಕಾರಿಯೆಂದು ಪರಿಚಯಿಸಿಕೊಳ್ಳುತ್ತಾರೆ. ಇದು ಪಾಕಿಸ್ತಾನದ ಗುಪ್ತಚರರು ಇತ್ತೀಚೆಗೆ ನಡೆಸುತ್ತಿರುವ ಹೊಸ ರೀತಿಯ ಕಾರ್ಯಾಚರಣೆಯಾಗಿದೆ ಎಂದು ಸೇನಾಪಡೆಗೆ ಎಚ್ಚರಿಕೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಇಂತಹ ಕರೆಗಳಿಗೆ ಉತ್ತರಿಸುವಾಗ ಕರೆ ಮಾಡಿದವರು ಯಾರು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಯಾವ್ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸೈನಿಕರಿಗೆ ತಿಳಿಸಲಾಗಿದೆ. ಅಲ್ಲದೆ ಪಾಕಿಸ್ತಾನದ ಈ ಕಳ್ಳಾಟಕ್ಕೆ ತಡೆಯೊಡ್ಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಸೇನಾಪಡೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಫೇಸ್‌ಬುಕ್ಕಲ್ಲಿ ಫ್ರೆಂಡ್‌ ರಿಕ್ವೆಸ್ಟ್‌:

ಹಿರಿಯ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡುವುದಲ್ಲದೆ ಪಾಕಿಸ್ತಾನದ ಗುಪ್ತಚರರು ಭಾರತೀಯ ಸೈನಿಕರಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿ ರಹಸ್ಯ ಮಾಹಿತಿಗಳನ್ನು ತಿಳಿದುಕೊಳ್ಳುವ ಯತ್ನವನ್ನೂ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಫೇಕ್‌ ಅಕೌಂಟ್‌ಗಳ ಮೂಲಕ ಪಾಕಿಗಳು ಇದನ್ನು ಮಾಡುತ್ತಾರೆ. ಹೀಗಾಗಿ ಈ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಗುಪ್ತಚರ ದಳ ಭಾರತೀಯ ಸೇನಾಪಡೆಗೆ ತಿಳಿಸಿದೆ.