ಚೀನಾ ಮೇಲೆ ನಿಗಾ ಎಂದ ಸೇನಾ ಮುಖ್ಯಸ್ಥ: ನಾರವಾನೆ ಮಾತಿಗೆ ಡ್ರ್ಯಾಗನ್ ಅಸ್ವಸ್ಥ!
ಚೀನಾ ಗಡಿಯತ್ತ ಹೆಚ್ಚಿನ ಗಮನ ಎಂದ ನೂತನ ಸೇನಾ ಮುಖ್ಯಸ್ಥ| 'ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ'| ಉತ್ತರ ಗಡಿಗಳಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ ಜನರಲ್ ಮುಕುಂದ್ ನಾರವಾನೆ ಒತ್ತು| 'ಚೀನಾದೊಂದಿಗಿನ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ'| ದೇಶದ ರಕ್ಷಣೆಗೆ ಭೂಸೇನೆ ಸರ್ವ ಸನ್ನದ್ಧವಾಗಿದೆ ಎಂದ ಜನರಲ್ ಮುಕುಂದ್ ನಾರವಾನೆ|
ನವದೆಹಲಿ(ಜ.01): ಚೀನಾ ಗಡಿಯತ್ತ ಭಾರತ ಹೆಚ್ಚಿನ ಗಮನಹರಿಸಬೇಕಿದ್ದು, ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನಾರವಾನೆ ಹೇಳಿದ್ದಾರೆ.
ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗ ಮಾತನಾಡಿರುವ ಮುಕುಂದ್ ನಾರವಾನೆ, ಈ ಹಿಂದೆ ನಾವು ಪಶ್ಚಿಮ ಭಾಗಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇವು. ಇದೀಗ ಉತ್ತರ ಭಾಗದತ್ತ ಕೂಡ ಗಮನ ಹರಿಸಬೇಕಿದೆ ಎಂದು ಪರೋಕ್ಷವಾಗಿ ಚೀನಾ ಗಡಿಯನ್ನು ಉಲ್ಲೇಖಿಸಿದರು.
ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕಾರ!
ದೇಶದ ಈಶಾನ್ಯ ಭಾಗವನ್ನು ಒಳಗೊಂಡಿರುವ ಉತ್ತರ ಗಡಿಗಳಲ್ಲಿಯೂ ನಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಚೀನಾದೊಂದಿಗೆ ಗಡಿ ವಿವಾದವಿದ್ದು, ಗಡಿಯಲ್ಲಿ ಶಾಂತಿ ಕಾಪಾಡುವುದರಿಂದ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ನಾರವಾನೆ ಭರವಸೆ ವ್ಯಕ್ತಪಡಿಸಿದರು.
ಗಡಿಯಲ್ಲಿ ಶಾಂತಿ ಕಾಪಾಡುವಲ್ಲಿ ಭಾರತ ಮೇಲುಗೈ ಸಾಧಿಸಲಿದ್ದು, ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ನೂತನ ಸೇನಾ ಮುಖ್ಯಸ್ಥರು ಭರವಸೆ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳಿಗೆ, ಭದ್ರತಾ ಜಾಗೃತಿಗೆ ಸೇನೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಿದೆ ಎಂದ ನಾರವಾನೆ, ದೇಶದ ರಕ್ಷಣೆಗೆ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳು ಸದಾಕಾಲ ಸಿದ್ಧವಾಗಿರುತ್ತವೆ ಎಂದು ಭರವಸೆ ನೀಡಿದರು.