ನವದೆಹಲಿ(ಜ.10): ಭಾರತ ಹಾಗೂ ಚೀನಾ ನಡುವೆ ತ್ವೇಷಮಯ ಪರಿಸ್ಥಿತಿ ಮುಂದುವರಿದಿರುವ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಯೋಧನೊಬ್ಬ ಭಾರತದೊಳಕ್ಕೆ ಪ್ರವೇಶಿಸಿದ ಘಟನೆ ನಡೆದಿದೆ. ಆ ಸೈನಿಕನನ್ನು ಭಾರತೀಯ ಯೋಧರು ಸೆರೆ ಹಿಡಿದಿದ್ದಾರೆ. ಚೀನಾ ಸೈನಿಕನೊಬ್ಬ ಭಾರತದೊಳಕ್ಕೆ ನುಗ್ಗಿರುವುದು ಮೂರು ತಿಂಗಳಲ್ಲಿ ಇದು ಎರಡನೇ ಬಾರಿ.

ಪ್ಯಾಂಗೋಂಗ್‌ ದಕ್ಷಿಣ ದಂಡೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಚೀನಾ ಸೈನಿಕ ಪತ್ತೆಯಾಗಿದ್ದಾನೆ. ಆತನನ್ನು ಸ್ಥಳದಲ್ಲಿದ್ದ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಅವನು ಹೇಗೆ, ಏಕೆ ಒಳಗೆ ಬಂದ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅ.19ರಂದು ಚೀನಾದ ಯೋಧ ವಾಂಗ್‌ ಯಾ ಲಾಂಗ್‌ ಎಂಬಾತ ಗಡಿಯೊಳಕ್ಕೆ ಬಂದಿದ್ದ. ಆತನನ್ನು ಲಡಾಖ್‌ನ ಡೆಮ್ಚೋಕ್‌ ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಬಳಿಕ ಚೀನಾಕ್ಕೆ ಹಸ್ತಾಂತರಿಸಲಾಗಿತ್ತು.

ಭಾರತ- ಚೀನಾ ಗಡಿಯಲ್ಲಿ ಕಳೆದ ಮೇನಿಂದ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತ 50 ಸಾವಿರ ಯೋಧರನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಿಸಿದೆ.