ನವದೆಹಲಿ(ಸೆ.08): ಫ್ರಾನ್ಸ್‌ನಿಂದ ಭಾರತ ಖರೀದಿಸಿರುವ ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳು ಸೆ.10ರ ಗುರುವಾರ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. 

ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲಿ ಆಗಮಿಸುತ್ತಿದ್ದಾರೆ. ಅವರ ಜೊತೆಗೆ ಫ್ರಾನ್ಸ್‌ನ ರಕ್ಷಣಾ ಅಧಿಕಾರಿಗಳು ಹಾಗೂ ರಕ್ಷಣಾ ಉದ್ದಿಮೆಗಳ ನಿಯೋಗ ಕೂಡ ಭಾರತಕ್ಕೆ ಬರಲಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ಗಡಿಯಲ್ಲಿ ಚೀನಾ ಉದ್ಧಟತನ ತೋರುತ್ತಿರುವುದರ ನಡುವೆಯೇ ಅತ್ಯಾಧುನಿಕ ಯುದ್ಧವಿಮಾನಗಳನ್ನು ವಾಯುಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮ ನಡೆಯುತ್ತಿರುವುದು ಮಹತ್ವ ಪಡೆದಿದೆ.

ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ!

ಕಳೆದ ಜುಲೈ ತಿಂಗಳಿನಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿ 36 ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ಮೊದಲ ಕಂತಿನ 5 ರಫೇಲ್‌ ವಿಮಾನಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಅವು ಆಗಿನಿಂದಲೇ ಸೇನೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಈಗ ಅಧಿಕೃತವಾಗಿ ಸೇರ್ಪಡೆ ಸಮಾರಂಭ ನಡೆಯುತ್ತಿದೆ. ಜುಲೈ 29ರಂದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಾಗ ಭಾರತೀಯ ವಾಯುಸೇನೆಯ ಮಖ್ಯಸ್ಥರಾದ ಏರ್‌ ಚೀಫ್ ಮಾರ್ಷಲ್ ಆರ್‌.ಕೆ.ಎಸ್. ಬದೌರಿಯಾ ಹಾಗೂ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಮಾಸಾಂತ್ಯಕ್ಕೆ ಮೋದಿ ಸಮ್ಮುಖ ವಾಯುಪಡೆಗೆ ರಫೇಲ್‌ ಸೇರ್ಪಡೆ?

ಭಾರತ-ಚೀನಾ ಗಡಿಯಲ್ಲಿ ಯುದ್ಧದ ಭೀತಿ ಏರ್ಪಟ್ಟ ಸಂದರ್ಭದಲ್ಲೇ ರಫೇಲ್ ಯುದ್ಧ ವಿಮಾನಗಳು ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿಳಿದಿರುವುದು ಸಾಕಷ್ಟು ಕಾಕತಾಳೀಯವೆನಿಸಿದೆ.