ಆಂತರಿಕ ವಿಷಯದಲ್ಲಿ ಕೆನಡಾ ದೂತರ ಹಸ್ತಕ್ಷೇಪ: ಕೆನಡಾ ಜತೆ ಸಂಬಂಧ ಸುಧಾರಣೆಗೆ ಜೈಶಂಕರ್ ಷರತ್ತು ಹೀಗಿದೆ..
‘ರಾಜತಾಂತ್ರಿಕ ಸಿಬ್ಬಂದಿಯ ಕಡಿತಕ್ಕೆ ಸಂಬಂಧಿಸಿದಂತೆ ನಾವು ವಿಯೆನ್ನಾ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ ಕ್ರಮ ಕೈಗೊಂಡಿದ್ದೇವೆ. ಇನ್ನು, ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಪ್ರಗತಿ ಕಾಣಿಸಿದರೆ ಕೆನಡಿಯನ್ನರಿಗೆ ಭಾರತದ ವೀಸಾ ನೀಡುವುದನ್ನೂ ಆರಂಭಿಸುತ್ತೇವೆ’ ಎಂದು ಜೈಶಂಕರ್ ಹೇಳಿದರು.
ನವದೆಹಲಿ (ಅಕ್ಟೋಬರ್ 23, 2023): ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಸಿಬ್ಬಂದಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಪ್ರಗತಿ ಕಾಣಿಸಿದರೆ ಕೆನಡಿಯನ್ನರಿಗೆ ಭಾರತದ ವೀಸಾ ವಿತರಣೆ ಆರಂಭಿಸುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಈ ಮೂಲಕ ಕೆನಡಾ ಜತೆ ಸಂಬಂಧ ಸುಧಾರಣೆಗೆ ಭಾರತ ಷರತ್ತು ವಿಧಿಸಿದಂತಾಗಿದೆ.
ಖಲಿಸ್ತಾನಿ ಉಗ್ರ ಹರದೀಪ್ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕಳೆದ ತಿಂಗಳು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ ನಂತರ ಭಾರತ ಸರ್ಕಾರ ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿತ್ತು. ಅಲ್ಲದೆ, ಭಾರತದಲ್ಲಿರುವ ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯ ಸಂಖ್ಯೆಯನ್ನು ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕ ಸಿಬ್ಬಂದಿಯ ಸಂಖ್ಯೆಗೆ ಸಮನಾಗಿ ಕಡಿತಗೊಳಿಸಲು ಸೂಚಿಸಿತ್ತು. ಅದರಂತೆ ಕೆನಡಾದ 41 ಸಿಬ್ಬಂದಿ ಕೆಲ ದಿನಗಳ ಹಿಂದೆ ಭಾರತ ತೊರೆದಿದ್ದಾರೆ.
ಇದನ್ನು ಓದಿ: ಪ್ರಧಾನಿಯಾಗಲು ಏನ್ ಮಾಡ್ಬೇಕು ಅಂತ ಕೇಳಿದ ಯುವತಿಗೆ ಜೈಶಂಕರ್ ಹೇಳಿದ್ದೇನು? ವಿಡಿಯೋ ವೈರಲ್
ಈ ಹಿನ್ನೆಲೆಯಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ‘ರಾಜತಾಂತ್ರಿಕ ಸಿಬ್ಬಂದಿಯ ಕಡಿತಕ್ಕೆ ಸಂಬಂಧಿಸಿದಂತೆ ನಾವು ವಿಯೆನ್ನಾ ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ ಕ್ರಮ ಕೈಗೊಂಡಿದ್ದೇವೆ. ಇನ್ನು, ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಪ್ರಗತಿ ಕಾಣಿಸಿದರೆ ಕೆನಡಿಯನ್ನರಿಗೆ ಭಾರತದ ವೀಸಾ ನೀಡುವುದನ್ನೂ ಆರಂಭಿಸುತ್ತೇವೆ’ ಎಂದು ಹೇಳಿದರು.
ಅಲ್ಲದೆ, ಭಾರತದಲ್ಲಿನ ಕೆನಡಾ ರಾಜತಾಂತ್ರಿಕರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಭಾರತದ ಆಂತರಿಕ ವ್ಯವಹಾರಗಳಲ್ಲಿ ಈ ರಾಜತಾಂತ್ರಿಕರು ಹಸ್ತಕ್ಷೇಪ ಮಾಡುತ್ತಿದ್ದರು. ಇದು ನಮಗೆ ಅಸಹನೀಯವಾಗಿತ್ತು ಎಂದರು.
ಇದನ್ನೂ ಓದಿ: ಅಮೆರಿಕದ ಭಾರತೀಯ ದೂತಾವಾಸ ಕಚೇರಿಗೆ ಖಲಿಸ್ತಾನಿ ಉಗ್ರರಿಂದ ಬೆಂಕಿ: ಕೆನಡಾದಲ್ಲಿ ರಾಜತಾಂತ್ರಿಕರು ಟಾರ್ಗೆಟ್
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಬಹಿರಂಗ ಆರೋಪ ಮಾಡಿದ ಬಳಿಕ ಹಲವು ಬಾರಿ, ಇದೊಂದು ಕಳವಳಕಾರಿ ಬೆಳವಣಿಗೆ. ಈ ಕುರಿತು ತನಿಖೆಗೆ ಸಹಕರಿಸುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ ಎಂದು ಅಮೆರಿಕ ಹೇಳಿಕೊಂಡೇ ಬಂದಿತ್ತು.
ಅದರ ಬೆನ್ನಲ್ಲೇ ನಡೆದ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವೆ ನಡೆದ ಭೇಟಿಯ ವೇಳೆ ಅಮೆರಿಕ ಮತ್ತೆ ಅಂಥದ್ದೇ ಒತ್ತಾಯ ಮಾಡಿದೆ ಎಂದು ವರದಿಯಾಗಿದೆ. ಆದರೆ ಭೇಟಿ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಕೆನಡಾ ವಿಷಯ ಪ್ರಸ್ತಾಪಿಸಿದ ಮಾಹಿತಿ ನೀಡಿಲ್ಲ. ಮತ್ತೊಂದೆಡೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಮತ್ತು ಶೀಘ್ರವೇ ನಡೆಯಲಿರುವ 2*2 ನಾಯಕರ ಸಭೆ ಕುರಿತಂತೆ ಚರ್ಚೆ ನಡೆಸಲಾಯಿತು ಎಂದು ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ ನೀಡಿದ್ದಾರೆ.