ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 50% ಸುಂಕ ವಿಧಿಸುವ ನಿರ್ಧಾರವನ್ನು 'ಆರ್ಥಿಕ ಬ್ಲ್ಯಾಕ್‌ಮೇಲ್' ಎಂದು ರಾಹುಲ್ ಗಾಂಧಿ ಖಂಡಿಸಿದ್ದಾರೆ. ಟ್ರಂಪ್ ಭಾರತದ ಮೇಲೆ ಅನ್ಯಾಯದ ವ್ಯಾಪಾರ ಒಪ್ಪಂದಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನವದೆಹಲಿ (ಆ.6): ಭಾರತದ ಮೇಲೆ 50% ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ಒಂದು ರೀತಿಯ 'ಆರ್ಥಿಕ ಬ್ಲ್ಯಾಕ್‌ಮೇಲ್'ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದರು.
ಭಾರತದ ಮೇಲೆ 50% ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಸಂಬಂಧ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ಟ್ರಂಪ್ ಭಾರತದ ಮೇಲೆ ತಪ್ಪು ಮತ್ತು ಅನ್ಯಾಯದ ವ್ಯಾಪಾರ ಒಪ್ಪಂದಕ್ಕೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ:
ಪ್ರಧಾನಿ ಮೋದಿ ತಮ್ಮ ದೌರ್ಬಲ್ಯವನ್ನು ಭಾರತೀಯರ ಹಿತಾಸಕ್ತಿಗಿಂತ ಮೇಲೆ ಇಡಬಾರದು ಎಂದು ಟ್ವಿಟರ್‌ನಲ್ಲಿ ಟೀಕಿಸಿದ ರಾಹುಲ್ ಗಾಂಧಿ ಅವರು , ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದರು. ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ತನಿಖೆ ನಡೆಯುತ್ತಿರುವುದರಿಂದ ಅಮೆರಿಕ ಅಧ್ಯಕ್ಷರ ಬೆದರಿಕೆಗಳ ಹೊರತಾಗಿಯೂ ಪ್ರಧಾನಿ ಮೋದಿ ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಭಾರತೀಯರು ದಯವಿಟ್ಟು ಅರ್ಥಮಾಡಿಕೊಳ್ಳಿ, ಪ್ರಧಾನಿ ಮೋದಿ ಪದೇ ಪದೇ ಬೆದರಿಕೆ ಹಾಕುತ್ತಿದ್ದರೂ ಅಧ್ಯಕ್ಷ ಟ್ರಂಪ್ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಕಾರಣ ಅದಾನಿ ವಿರುದ್ಧ ನಡೆಯುತ್ತಿರುವ ಅಮೆರಿಕ ತನಿಖೆ. ಮೋದಿ ಅವರ ಕೈಗಳು ಕಟ್ಟಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ಟ್ವಿಟರ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ರಷ್ಯಾದ ತೈಲ ಖರೀದಿಗೆ ಹೆಚ್ಚುವರಿ 25% ಸುಂಕ: ಟ್ರಂಪ್ ಭಾರತದ ರಷ್ಯಾದ ಕಚ್ಚಾ ತೈಲ ಖರೀದಿಯ ಮೇಲೆ ಈಗಿರುವ 25% ಸುಂಕಕ್ಕೆ ಹೆಚ್ಚುವರಿಯಾಗಿ 25% ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಸುಂಕ ಮುಂದಿನ ಮೂರು ವಾರಗಳಲ್ಲಿ ಜಾರಿಗೆ ಬರಲಿದೆ.
