ನವದೆಹಲಿ(ಮೇ.27): ಲಡಾಖ್‌ ಮತ್ತು ಸಿಕ್ಕಿಂ ಗಡಿಯಲ್ಲಿ ಚೀನಾ ಕ್ಯಾತೆ ಹೆಚ್ಚಳವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಮೂರು ಸೇನಾ ಪಡೆ(ಸಿಡಿಎಸ್‌)ಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಮೂರು ಸೇನಾ ಪಡೆಗಳ ಮುಖ್ಯಸ್ಥರು ಭಾಗವಹಿಸಿದದರು. ಸಭೆಯಲ್ಲಿ ಲಡಾಖ್‌ ಮತ್ತು ಸಿಕ್ಕಿಂ ಗಡಿಯಲ್ಲಿನ ಪ್ರಸಕ್ತ ಸ್ಥಿತಿಗತಿ ಮತ್ತು ಯಾವುದೇ ಬಾಹ್ಯ ಸವಾಲನ್ನು ಎದುರಿಸಲು ದೇಶದ ಸನ್ನದ್ಧ ಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಲಾಯ್ತು ಎನ್ನಲಾಗಿದೆ.

ಇದಕ್ಕೂ ಮುನ್ನ ಸಿಡಿಎಸ್‌ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, 3 ಸೇನಾ ಪಡೆಗಳ ಮುಖ್ಯಸ್ಥರಾದ ಮುಕುಂದ್‌ ಮನೋಜ್‌ ನರವಣೆ, ಏರ್‌ಚೀಫ್‌ ಮಾರ್ಷಲ್‌ ಬೀರೆಂದರ್‌ ಸಿಂಗ್‌ ಧನುವಾ ಹಾಗೂ ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ, ಗಡಿಯಲ್ಲಿ ಭಾರತೀಯ ಸೇನೆ ಮೇಲೆ ಚೀನಾ ಯೋಧರು ನಡೆಸುತ್ತಿರುವ ಆಟಾಟೋಪಗಳ ಬಗ್ಗೆ ಮಾಹಿತಿ ನೀಡಿದರು.