* ಭಯೋತ್ಪಾದಕರಿಂದ ಯಾವ ಸವಾಲು ಎದುರಾದರೂ ಯಶಸ್ವಿಯಾಗಿ ಮಟ್ಟಹಾಕಲು ನಮ್ಮ ದೇಶ ಸನ್ನದ್ಧ* ಭಾರತದಲ್ಲೂ ತಾಲಿಬಾನ್ ಮನಸ್ಥಿತಿ ಜೀವಂತ
-ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಗ್ರಾಮ ಪಂಚಾಯತಿಯು ‘ಸ್ವಾತಂತ್ರ್ಯ ರಥ’ದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಹಾಕಿ ಮೆರವಣಿಗೆ ನಡೆಸುವ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಅದಕ್ಕೆ ತಡೆ ಹಾಕಿದ್ದನ್ನು ರಾಜ್ಯವೇ ನೋಡಿದೆ. ಅವರು ಅಡ್ಡಿಪಡಿಸಿದ ಉದ್ದೇಶ ಸ್ಪಷ್ಟವಾಗಿತ್ತು. ರಥದಲ್ಲಿದ್ದ ವೀರ ಸಾವರ್ಕರ್ ಫೋಟೋ ತೆಗೆದು ಟಿಪ್ಪುವಿನ ಫೋಟೋ ಹಾಕಬೇಕು ಎಂಬುದು ಅವರ ಆಗ್ರಹ. ಸ್ವಾತಂತ್ರ್ಯ ಪಡೆಯುವ ಹೋರಾಟದಲ್ಲಿ ಸಾಮ, ದಂಡ, ಭೇದ ಎಲ್ಲವನ್ನು ಪ್ರಯೋಗಿಸಿ ಜಯಗಳಿಸಬೇಕು ಎನ್ನುವುದು ಸಾವರ್ಕರ್ ನಿಲುವಾಗಿತ್ತು. ಅದಕ್ಕಾಗಿ ಅವರು ಬ್ರಿಟಿಷರ ಸಂಚಿಗೆ ರಣತಂತ್ರವನ್ನು ರೂಪಿಸುತ್ತಾ ಹೋಗುತ್ತಿದ್ದರು. ಕಾಲಾಪಾನಿಯಂತಹ ಕಠಿಣ ಶಿಕ್ಷೆಯನ್ನು ಎರಡೆರಡು ಬಾರಿ ಅನುಭವಿಸಿ ಅವರು ಹೊರಗೆ ಬಂದು ಅದೇ ದೃಢ ಮನಸ್ಥಿತಿಯಿಂದ ಹೋರಾಡಿದ್ದರು ಎಂದರೆ ಅವರ ಚಿತ್ತ ಎಷ್ಟುಗಟ್ಟಿಯಾಗಿತ್ತು ಎನ್ನುವುದು ಸ್ಪಷ್ಟ. ಆದರೆ ಟಿಪ್ಪು ಯಾರು? ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ಟಿಪ್ಪು ತಮ್ಮ ಸಾಮ್ರಾಜ್ಯ ವಿಸ್ತರಿಸುವುದಕ್ಕಾಗಿ ಮಾಡಿದ ಯುದ್ಧಗಳನ್ನು ಸ್ವಾತಂತ್ರ್ಯ ಹೋರಾಟದ ತಕ್ಕಡಿಯಲ್ಲಿ ಇಟ್ಟು ನೋಡುವುದು ಹಾಸ್ಯಾಸ್ಪದ. ಮತಾಂತರ ಮಾಡುವುದನ್ನು ಗುರಿಯಾಗಿರಿಸಿಕೊಂಡಿದ್ದ ಟಿಪ್ಪು ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ದಕ್ಕೆ ಹಲವು ದೃಷ್ಟಾಂತಗಳಿವೆ. ಅಂತಹ ವಿವಾದಿತ ರಾಜನನ್ನು ಎಸ್‌ಡಿಪಿಐ ವೈಭವೀಕರಿಸುವುದು ಮತ್ತು ಕಾಂಗ್ರೆಸ್ ಪಕ್ಷ ಅದಕ್ಕೆ ಬೆಂಬಲಿಸುವುದನ್ನು ಬಿಜೆಪಿ ವಿರೋಧಿಸುತ್ತಾ ಬಂದಿದೆ.
ಆಂತರಿಕ ಕ್ಷೋಭೆಗೆ ಯತ್ನ
ಅತ್ತ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಂಡ ಮೇಲೆ ಕಾಶ್ಮೀರದಲ್ಲಿರುವ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರಿಗೆ ತುಂಬಾ ಖುಷಿಯಾದಂತೆ ಕಾಣುತ್ತಿದೆ. ಅದಕ್ಕಾಗಿ ಅವರು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮತ್ತೆ ಹಿಂತಿರುಗಿಸಲು ಮಾತುಕತೆ ಆರಂಭಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಲ್ಲದೇ ಹೋದರೆ ಅಫ್ಘಾನಿಸ್ತಾನಕ್ಕೆ ಆದ ಗತಿ ಕಾಶ್ಮೀರಕ್ಕೂ ಆಗಬಹುದು ಎನ್ನುವ ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಾಶ್ಮೀರವನ್ನು ಅಭಿವೃದ್ಧಿ ಮಾಡುವ ಪಣ ತೊಟ್ಟಿರುವ ಕೇಂದ್ರ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಪಿಡಿಪಿಯ ಇಂತಹ ಹೇಳಿಕೆಗಳು ದೇಶದೊಳಗೆ ಆಂತರಿಕ ಕ್ಷೋಭೆ ತರುವ ದ್ವೇಷದ ರಾಜಕೀಯ ಬಿಟ್ಟರೆ ಬೇರೆನೂ ಅಲ್ಲ. ಪಿಡಿಪಿ ನಮ್ಮ ದೇಶವನ್ನು ಇಬ್ಭಾಗಿಸಲು ಏನೇ ಪ್ರಯತ್ನಪಟ್ಟರೂ ಜಮ್ಮು-ಕಾಶ್ಮೀರದ ಜನತೆ ಈ ದೇಶವನ್ನು ಪ್ರೀತಿಸುತ್ತಾರೆ. ಭಾರತದ ಧ್ವಜವನ್ನು ಕಾಶ್ಮೀರದಲ್ಲಿ ಹಾರಿಸಿರುವುದೇ ಇದಕ್ಕೆ ಸಾಕ್ಷಿ. ಅಲ್ಲಿನ ಪೊಲೀಸರು, ಸೈನ್ಯ ಮತ್ತು ಅರೆಸೇನಾಪಡೆಯ ಯೋಧರು ತಮ್ಮ ರಕ್ಷಣೆಗೆ ಇರುವವರು ಮತ್ತು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಕಾಶ್ಮೀರದ ಜನತೆ ಭಾರತದ ಜೊತೆ ಇದ್ದೇ ಇದ್ದಾರೆ.
ಭಾರತ ಸರ್ವಶಕ್ತವಾಗಿದೆ
ಅದು ತಾಲಿಬಾನ್ ಇರಲಿ, ಅಲ್‌ಖೈದಾ, ಎಲ್‌ಇಟಿ, ಜೆಇಎಂ ಅಥವಾ ಹಿಜ್ಬುಲ್ ಯಾವುದೇ ಭಯೋತ್ಪಾದನಾ ಸಂಘಟನೆ ಇರಲಿ, ಭಾರತದ ವಿರುದ್ಧ ಯಾವುದೇ ಷಡ್ಯಂತ್ರ ರೂಪಿಸಿದರೂ ಅದನ್ನು ಎದುರಿಸಲು ಮತ್ತು ಈ ಉಗ್ರಗಾಮಿ ಸಂಘಟನೆಗಳನ್ನು ನಾಶ ಮಾಡಲು ಭಾರತ ಸರ್ವಶಕ್ತವಾಗಿದೆ. ಇನ್ನು ಸಮಾಜವಾದಿ ಪಾರ್ಟಿಯ ಸಂಸದ ಶಫಿಖರ್ ರೆಹಮಾನ್ ಬಖ್‌ರ್ ಎನ್ನುವ ವ್ಯಕ್ತಿ ತಾಲಿಬಾನ್ ಅನ್ನು ಹೊಗಳಿದ್ದಾನೆ. ಆತ ತಾಲಿಬಾನ್ ಉಗ್ರಗಾಮಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾನೆ. ಉತ್ತರ ಪ್ರದೇಶದ ಸಾಂಬಾಲ್‌ನಿಂದ ಸಂಸದರಾಗಿರುವ ಬಖ್‌ರ್ ಪ್ರಕಾರ ತಾಲಿಬಾನಿಗಳು ತಮ್ಮದೇ ನೆಲವನ್ನು 20 ವರ್ಷಗಳ ಬಳಿಕ ಮತ್ತೆ ಸ್ವಾಧೀನಪಡಿಸಿಕೊಂಡಿದ್ದಾರೆ. ಅದರಲ್ಲಿ ಏನು ತಪ್ಪು ಎನ್ನುತ್ತಿದ್ದಾನೆ. ಆತನ ಪ್ರಕಾರ ತಾಲಿಬಾನಿಗಳು ಜಾಗತಿಕವಾಗಿ ಬಲಯುತವಾಗಿರುವ ಅಮೆರಿಕ ಹಾಗೂ ರಷ್ಯಾವನ್ನೂ ತಮ್ಮ ದೇಶದಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದ್ಯಾವ ರೀತಿಯ ಮನಸ್ಥಿತಿ ಎನ್ನುವುದನ್ನು ಅವರದೇ ಪಕ್ಷದ ಮುಖಂಡರು ಹೇಳಬೇಕು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸೆಯೇ ಮೂಲ ತತ್ವವಾಗಿತ್ತು. ಬ್ರಿಟಿಷರ ವಿರುದ್ಧದ ನಮ್ಮ ಹೋರಾಟದ ನಂತರ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ದೇಶದ ಮಹಿಳೆಯರು ಯಾವತ್ತೂ ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ನಮಗೆ ಸ್ವಾತಂತ್ರ್ಯ ದೊರಕಿದ ಬಳಿಕ ಹೆಣ್ಣುಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ನಾವು ನಿಷೇಧಿಸಿಲ್ಲ. ಅದರ ಬದಲಿಗೆ ಹೆಣ್ಣುಮಕ್ಕಳು ಹೆಚ್ಚೆಚ್ಚು ವಿದ್ಯಾಭ್ಯಾಸ ಪಡೆಯಬೇಕೆಂಬ ನಿಟ್ಟಿನಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿನಿ ವೇತನ ನೀಡಿ ಪ್ರೋತ್ಸಾಹಿಸಲಾಗಿದೆ. ಭಾರತದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮೀಸಲಾತಿ ಇದೆ. ಮಹಿಳೆಯರಿಗೆ ಚುನಾವಣೆಗೆ ನಿಲ್ಲಲು ಅವಕಾಶ ಕೊಡುತ್ತೀರಾ ಎನ್ನುವ ಪ್ರಶ್ನೆಗೆ ತಾಲಿಬಾನಿಗಳು ಉಢಾಪೆಯ ನಗುವನ್ನು ಹೊರಗೆ ಹಾಕುತ್ತಾರೆ. ಅಲ್ಲಿ ಮಹಿಳೆಯರು ಉದ್ಯೋಗಕ್ಕೆ ಹೋಗುವುದು ಬಿಡಿ, ಉದ್ಯೋಗ ಮಾಡುತ್ತಿದ್ದ ಪತ್ರಕರ್ತೆ, ಲೇಡಿ ಪೈಲಟ್‌ಗಳನ್ನು ಕಲ್ಲು ಬಿಸಾಡಿ ಹತ್ಯೆ ಮಾಡಲಾಗಿದೆ. ಆದ್ದರಿಂದ ಸಮಾಜವಾದಿ ಸಂಸದನ ಹೋಲಿಕೆ ಈ ದೇಶದ ಪ್ರಜ್ಞಾವಂತ ನಾಗರಿಕ ಒಪ್ಪಲು ಸಾಧ್ಯವೇ ಇಲ್ಲ.
ತಾಲಿಬಾನ್ ಪರ ವ್ಯಕ್ತಿಗಳು!
ಭಾರತದಲ್ಲಿ ಕೂಡ ತಾಲಿಬಾನ್ ಪರ ಇರುವ ವ್ಯಕ್ತಿಗಳು ಇದ್ದರು ಮತ್ತು ಈಗಲೂ ಇದ್ದಾರೆ. ಈ ವರ್ಷದ ಜೂನ್‌ನಲ್ಲಿ ಉತ್ತರ ಪ್ರದೇಶದಲ್ಲಿ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಒಬ್ಬ ಆಫ್ಘನ್ ದೇಶದ ಪ್ರಜೆ ಅಕ್ರಮವಾಗಿ ವಾಸಿಸುತ್ತಿದ್ದಾನೆ ಎನ್ನುವ ಮಾಹಿತಿ ಅಲ್ಲಿನ ಪೊಲೀಸರಿಗೆ ಸಿಕ್ಕಿತ್ತು. ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ವೀಸಾ ಮುಗಿದ ಬಳಿಕವೂ ಅಕ್ರಮವಾಗಿ ವಾಸಿಸುತ್ತಿರುವುದು ಸಾಬೀತಾಗಿ ಅಲ್ಲಿಂದ ಅವನ ದೇಶಕ್ಕೆ ಗಡೀಪಾರು ಮಾಡಲಾಗಿತ್ತು. ಈಗ ಅದೇ ವ್ಯಕ್ತಿ ಕೈಯಲ್ಲಿ ಗನ್ ಹಿಡಿದು ತಾಲಿಬಾನ್ ಪರ ಕೆಲಸ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ಈ ನೂರ್ ಮೊಹಮ್ಮದ್ ಇಝಾದ್ ಎನ್ನುವ ವ್ಯಕ್ತಿ ಕಳೆದ ಹತ್ತು ವರ್ಷಗಳಿಂದ ನಾಗಪುರದ ದಿಗೋರಿ ಎನ್ನುವ ನಗರದಲ್ಲಿಯೇ ಇದ್ದ. ಆತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕಕ್ಕೆ ಅರ್ಜಿ ಹಾಕಿ ತನ್ನನ್ನು ನಿರಾಶ್ರಿತನನ್ನಾಗಿ ಪರಿಗಣಿಸಿ ಭಾರತದಲ್ಲಿಯೇ ವಾಸಿಸಲು ಅನುವು ಮಾಡಿಕೊಡಲು ಕೇಳಿಕೊಂಡಿದ್ದ. ಆದರೆ ಅವನ ಮನವಿಯನ್ನು ಪುರಸ್ಕರಿಸಲಾಗಿರಲಿಲ್ಲ. ಆದರೂ ಅವನು ಅಫ್ಘಾನಿಸ್ತಾನಕ್ಕೆ ಹಿಂತಿರುಗಿರಲಿಲ್ಲ. ಒಂದು ಮಾಹಿತಿಯ ಪ್ರಕಾರ ನೂರ್ ಮೊಹಮ್ಮದ್ ನಿಜವಾದ ಹೆಸರು ಅಬ್ದುಲ್ ಹಕ್ ಆಗಿದ್ದು, ಈತನ ಸಹೋದರ ತಾಲಿಬಾನ್ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಗುಪ್ತಚರ ವರದಿ ಇದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇತ್ತೀಚೆಗೆ ಉಳ್ಳಾಲದ ಮಾಜಿ ಕಾಂಗ್ರೆಸ್ ಶಾಸಕ ಇದಿನಬ್ಬನವರ ಮಗನ ಮನೆಗೆ ದಾಳಿ ಮಾಡಿದ್ದರು. ಅಲ್ಲಿ ಬಾಷಾ ಅವರ ಮಗನನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ. ಬಾಷಾ ಅವರ ಮೊಮ್ಮೊಗಳು 2016ರಲ್ಲಿ ಐಸಿಸ್‌ಗೆ ಸೇರಿದ್ದಾರೆ ಎಂದು ಐಎನ್‌ಎ ಬಳಿ ದಾಖಲೆಗಳಿವೆ. ಆಕೆಯ ಪತಿ ಕಾಸರಗೋಡು ಜಿಲ್ಲೆಯವರಾಗಿದ್ದು ಅವರಿಗೆ ಐಸಿಸ್ ಜೊತೆ ಸಂಪರ್ಕ ಇತ್ತು ಎಂದು ಹೇಳಲಾಗುತ್ತಿದೆ. ಕಾಸರಗೋಡಿನ ಪದಣ ಎನ್ನುವ ಪ್ರದೇಶದಿಂದ 12 ಜನ 2016ರಲ್ಲಿ ನಾಪತ್ತೆಯಾಗಿದ್ದು, ಅವರಲ್ಲಿ ಈ ದಂಪತಿಗಳು ಕೂಡ ಸೇರಿದ್ದಾರೆ ಎನ್ನುವುದು ಐಎನ್‌ಎ ಬಳಿ ಇರುವ ಮಾಹಿತಿ. ಇಂತಹ ಪ್ರಕರಣಗಳು ಭಾರತದಲ್ಲಿ ಎಷ್ಟೋ ಸಿಗಬಹುದು.
ಭಾರತಕ್ಕಿರುವ ಸವಾಲೇನು?
ಒಂದು ಕಡೆ ನಮ್ಮ ದೇಶದೊಳಗೆ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಕಟ್ಟರ್ ಮೂಲಭೂತವಾದಿಗಳು ತಮ್ಮ ಅಸ್ತಿತ್ವ ತೋರಿಸಲು ಮಾಡುವ ಷಡ್ಯಂತ್ರದಂತೆ ಕಂಡುಬರುತ್ತಿದ್ದರೆ, ದೇಶದ ಪಕ್ಕದಲ್ಲಿಯೇ ಹೆಚ್ಚೆಂದರೆ 900 ಕಿಲೋಮೀಟರ್ ಅಂತರದಲ್ಲಿ ಇಸ್ಲಾಂ ಮೂಲಭೂತವಾದಿಗಳು ಒಂದು ದೇಶವನ್ನು ಸ್ವಾಧೀನಪಡಿಸಿ ಕುಳಿತುಕೊಳ್ಳುವುದು ಮತ್ತೊಂದು ರೀತಿಯ ಸವಾಲನ್ನು ಭಾರತಕ್ಕೆ ತಂದೊಡ್ಡಿದೆ. ತಾಲಿಬಾನಿಗಳು ಅಫ್ಘಾನಿಸ್ತಾನದ ಮೇಲೆ ಹಿಡಿತ ಬಿಗಿಗೊಳಿಸುವುದರಿಂದ ಜಾಗತಿಕವಾಗಿ ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯುವ ಅಗತ್ಯ ಬರಲಿದೆ. ಎಲ್ಲಕ್ಕಿಂತ ಮೊದಲು ಅಫ್ಘಾನಿಸ್ತಾನದ ಸಂಬಂಧ ಪಾಕಿಸ್ತಾನದೊಂದಿಗೆ ಹೇಗೆ ಇರಲಿದೆ ಎನ್ನುವುದರ ಮೇಲೆ ಮುಂದಿನ ಸ್ಥಿತಿ ಗೊತ್ತಾಗಲಿದೆ. ಆ ಬಳಿಕವೇ ಕಾಶ್ಮೀರದ ವಿಷಯದಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಜಂಟಿಯಾಗಿ ಹೊಸ ಆಟ ಶುರು ಮಾಡಬಹುದು ಎನ್ನುವುದು ತಜ್ಞರ ಲೆಕ್ಕಾಚಾರ.
ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ಅಫ್ಘಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ ನಾಗರಿಕರಿಗೆ ಇಲ್ಲಿ ವಲಸೆ ಬಂದು ಇಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಅಲ್ಲಿಂದ ಬರುವವರಿಗಾಗಿ ಎಮೆರ್ಜೆನ್ಸಿ ವೀಸಾ ಪರಿಚಯಿಸಿದೆ.
ಭಾರತ-ಆಫ್ಘನ್ ಸಂಬಂಧ
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನ ಮಾಡುವ ತನಕ ಅಲ್ಲಿನ ಸರ್ಕಾರದೊಂದಿಗೆ ನಮ್ಮ ದೇಶದ ಸಂಬಂಧ ಚೆನ್ನಾಗಿಯೇ ಇತ್ತು. 2017ರಲ್ಲಿ ಭಾರತ 3 ಬಿಲಿಯನ್ ಆರ್ಥಿಕ ನೆರವನ್ನು ನೀಡಿತ್ತು. ಅಫ್ಘಾನಿಸ್ತಾನದಲ್ಲಿ ಸುಮಾರು 200 ಶಾಲೆಗಳನ್ನು ಭಾರತ ನಿರ್ಮಿಸಿದೆ. 1000 ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು 16000 ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನೋಡಿಕೊಂಡಿದೆ.
ಪಾಕಿಸ್ತಾನ ಅಫ್ಘಾನಿಸ್ತಾನದೊಂದಿಗೆ ನಿಕಟ ಗಡಿರೇಖೆಯನ್ನು ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಆಟ ಆಡಲು ತಯಾರಾಗಿ ನಿಂತಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಅದರೊಂದಿಗೆ ಚೀನಾದ ವಿದೇಶಾಂಗ ಸಚಿವರಾದ ವಾಂಗ್ ಯೀ ಅವರು ತಿಂಗಳ ಮೊದಲೇ ತಾಲಿಬಾನ್ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ. ಈಗ ಪಾಕಿಸ್ತಾನ, ರಷ್ಯಾ, ಇರಾನ್ ಮತ್ತು ಚೀನಾ ಜಂಟಿಯಾಗಿ ಯಾವ ರೀತಿಯ ರಣತಂತ್ರ ರೂಪಿಸಲಿವೆ ಎನ್ನುವುದನ್ನು ಪ್ರಪಂಚ ನೋಡಲಿದೆ. ಮೇಲ್ನೋಟಕ್ಕೆ ಇದು ಭಾರತದ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸುವ ಅಗತ್ಯ ಎಂದು ಅನಿಸಿದರೂ ತಾಲಿಬಾನ್ ಸಂಘಟನೆ ಪಾಕಿಸ್ತಾನಕ್ಕೆ ಮೊದಲು ಹೊರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಅಪಘಾನಿಸ್ತಾನದಲ್ಲಿರುವ ತಾಲಿಬಾನಿಗಳು ಯಾವತ್ತೂ ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಯನ್ನು ಮಾನ್ಯ ಮಾಡಲೇ ಇಲ್ಲ.
ವಲಸೆ ಬಗ್ಗೆ ಭಾರತ ಧೋರಣೆ
ಈಗ ಪ್ರಸ್ತುತ ಭಾರತ ಸರ್ಕಾರ ಅಫ್ಘಾನಿಸ್ತಾನದ ಆಂತರಿಕ ಕ್ಷೋಭೆಯ ಬಗ್ಗೆ ತೆಗೆದುಕೊಳ್ಳಬೇಕಾದ ಮೂರು ನಿರ್ಧಾರಗಳ ಬಗ್ಗೆ ನೋಡಬಹುದು. ಮೊದಲನೆಯದಾಗಿ ಅಫ್ಘಾನಿಸ್ತಾನದಲ್ಲಿ ಈಗ ಇರುವ ಕಟ್ಟಕಡೆಯ ಭಾರತೀಯನನ್ನೂ ಯಾವುದೇ ತೊಂದರೆಯಾಗದಂತೆ ಭಾರತಕ್ಕೆ ಕರೆಸಿಕೊಳ್ಳುವುದು. ಎರಡನೆಯದಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಕರೆಸಿಕೊಳ್ಳಿ ಎಂದು ಅಸಂಖ್ಯಾತ ನಾಗರಿಕರು ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಅನೇಕರಿಗೆ ಭಾರತದೊಂದಿಗೆ ವಿವಿಧ ರೀತಿಯ ಬಾಂಧವ್ಯವಿದೆ. ಆದರೆ ಸದ್ಯ ಹಿಂದು ಮತ್ತು ಸಿಖ್ ಧರ್ಮದವರಿಗೆ ಮಾತ್ರ ಅವಕಾಶ ಎಂದು ಹೇಳಿರುವ ಕೇಂದ್ರ ಸರ್ಕಾರ ಉಳಿದವರ ಕುರಿತು ಮೃದು ಧೋರಣೆ ತಳೆದು ಎಲ್ಲಾ ವಲಸಿಗರನ್ನು ಕರೆಸಿಕೊಂಡರೆ ಅದರಿಂದ ಇಲ್ಲಿ ಪುನರ್‌ವಸತಿಗೆ ಎಷ್ಟರ ಮಟ್ಟಿಗೆ ಸನ್ನದ್ಧರಾಗಿರಬೇಕಾಗುತ್ತದೆ ಎನ್ನುವುದು ಇನ್ನೊಂದು ವಿಷಯ. ಮೂರನೆಯ ವಿಚಾರ ಏನೆಂದರೆ ಅಫ್ಘಾನಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನಿಗಳ ಸರ್ಕಾರವನ್ನು ಭಾರತ ಮಾನ್ಯ ಮಾಡುತ್ತದೆಯೇ ಎನ್ನುವುದು. ಈಗಾಗಲೇ ಭಾರತ, ವಿಶ್ವಸಂಸ್ಥೆಯ ಪ್ರತಿನಿಧಿಗಳು ಹಾಗೂ ಆಫ್ಘನ್ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಒಂಭತ್ತು ಅಂಶಗಳನ್ನು ಎತ್ತಿಹಿಡಿದಿದೆ. ಅದರಲ್ಲಿ ಆಯುಧಗಳೊಂದಿಗೆ, ಮಿಲಿಟರಿ ಶಕ್ತಿಗಳೊಂದಿಗೆ ಬಲವಂತವಾಗಿ ಅಧಿಕಾರ ಪಡೆಯುವುದನ್ನು ಒಪ್ಪತಕ್ಕಂತಹ ಮಾತೇ ಇಲ್ಲ ಎನ್ನುವುದು ಮೊದಲ ವಿಷಯ. ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತುತ ಅಧ್ಯಕ್ಷತೆ ವಹಿಸಿರುವ ಭಾರತ ತಾಲಿಬಾನಿನ ಪರಿಸ್ಥಿತಿಯ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿದೆ.
