ನವೆಂಬರ್‌ನಲ್ಲಿ ಕೊರೋನಾ ತಾರಕಕ್ಕೆ!| ಜುಲೈ, ಆಗಸ್ಟ್‌ ಅಲ್ಲ, ಸೆಪ್ಟೆಂಬರ್‌, ಅಕ್ಟೋಬರ್‌ ಕೂಡ ಅಲ್ಲ| ಲಾಕ್‌ಡೌನ್‌ ಎಫೆಕ್ಟ್| ಸೋಂಕು ಹೆಚ್ಚಳ 2.5 ತಿಂಗಳು ವಿಳಂಬ| ಸೋಂಕು ಶೇ.97ರಷ್ಟುನಿಯಂತ್ರಣ|  ನವೆಂಬರ್‌ಗೆ ತೀವ್ರ ಏರಿಕೆ| ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ: ಐಸಿಎಂಆರ್‌ ತಂಡ ವರದಿ

ನವದೆಹಲಿ(ಜೂ.15): ನವೆಂಬರ್‌ ಮಧ್ಯ ಭಾಗದ ವೇಳೆಗೆ ದೇಶದಲ್ಲಿ ಕೊರೋನಾ ವೈರಸ್‌ ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಚಿಸಿದ್ದ ಅಧ್ಯಯನ ತಂಡ ವರದಿ ನೀಡಿದೆ. ದೇಶದಲ್ಲಿ ಈಗಾಗಲೇ ನಿತ್ಯ ಸರಾಸರಿ 10 ಸಾವಿರ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ವೈರಸ್‌ ಹಾವಳಿ ಇನ್ನಷ್ಟುಹೆಚ್ಚಾಗಲಿದೆ, ನವೆಂಬರ್‌ವರೆಗೂ ಮುಂದುವರಿಯಲಿದೆ ಎಂಬ ಸಾರ ಇರುವ ಈ ವರದಿ ಆತಂಕ ಹೆಚ್ಚಲು ಕಾರಣವಾಗಿದೆ.

ಕೇಂದ್ರ ಸರ್ಕಾರದ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೊರೋನಾ ಕುರಿತು ಅಧ್ಯಯನಕ್ಕೆ ಸಂಶೋಧಕರ ತಂಡವೊಂದನ್ನು ರಚನೆ ಮಾಡಿತ್ತು. ಅದು ನೀಡಿರುವ ವರದಿ ಪ್ರಕಾರ, ಕೊರೋನಾ ವೈರಸ್‌ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಲಾಕ್‌ಡೌನ್‌ ಹಾಗೂ ಆರೋಗ್ಯ ವ್ಯವಸ್ಥೆ ಬಲಪಡಿಸುವ ಕ್ರಮಗಳಿಂದಾಗಿ ಕೊರೋನಾ ತನ್ನ ಗರಿಷ್ಠ ಮಟ್ಟಕ್ಕೆ ತಲುಪುವುದು ವಿಳಂಬವಾಗಿದೆ. ಆದರೆ ಆ ಸನ್ನಿವೇಶ ನವೆಂಬರ್‌ ಮಧ್ಯಭಾಗದ ವೇಳೆಗೆ ಬರಲಿದೆ. ಆಗ ಐಸೋಲೇಷನ್‌ ಮತ್ತು ಐಸಿಯು ಬೆಡ್‌ಗಳು ಹಾಗೂ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿ ಬಾಧಿಸುವ ಸಂಭವವಿದೆ ಎಂದು ಹೇಳಿದೆ.

ಮಾಸ್ಕ್‌ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂ. ದಂಡ!

8 ವಾರಗಳ ಕೊರೋನಾ ಲಾಕ್‌ಡೌನ್‌ನಿಂದಾಗಿ ವೈರಸ್‌ ತುತ್ತತುದಿಗೆ ಹೋಗುವುದು 34ರಿಂದ 76 ದಿನಗಳಷ್ಟುಮುಂದಕ್ಕೆ ಹೋಗಿದೆ. ಅಲ್ಲದೆ ಲಾಕ್‌ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಶೇ.69ರಿಂದ ಶೇ.97ರಷ್ಟುಕಡಿಮೆಯಾಗಿದೆ. ಜತೆಗೆ ಆರೋಗ್ಯ ಸಂಪನ್ಮೂಲ ಹಾಗೂ ಮೂಲಸೌಕರ್ಯ ಗಳಿಸಿಕೊಳ್ಳಲು ಸಮಯಾವಕಾಶ ನೀಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಲಾಕ್‌ಡೌನ್‌ ವೇಳೆ ತೆಗೆದುಕೊಳ್ಳಲಾಗಿರುವ ಸಾರ್ವಜನಿಕ ಆರೋಗ್ಯ ಕ್ರಮಗಳು ಶೇ.60ರಷ್ಟುಪರಿಣಾಮಕಾರಿಯಾಗಿದ್ದರೂ, ನವೆಂಬರ್‌ ಮೊದಲ ಭಾಗದವರೆಗೆ ಕೊರೋನಾ ಸೋಂಕಿನ ಬೇಡಿಕೆಯನ್ನು ನೀಗಿಸಬಹುದು. ಆನಂತರ 5.4 ತಿಂಗಳ ಕಾಲ ಐಸೋಲೇಷನ್‌ ಬೆಡ್‌, 4.6 ತಿಂಗಳ ಕಾಲ ಐಸಿಯು ಬೆಡ್‌ ಹಾಗೂ 3.9 ತಿಂಗಳ ಕಾಲ ವೆಂಟಿಲೇಟರ್‌ಗಳ ಸಮಸ್ಯೆ ಕಾಡಲಿದೆ ಎಂದು ಹೇಳಿದೆ.

ಕೊರೋನಾದಿಂದಾಗಿ ಆರೋಗ್ಯ ವ್ಯವಸ್ಥೆ ಮೇಲಿನ ಒಟ್ಟಾರೆ ಆರ್ಥಿಕ ವೆಚ್ಚ ಜಿಡಿಪಿಯ ಶೇ.6.2ರಷ್ಟಿರಲಿದೆ ಎಂದು ತಿಳಿಸಿದೆ. ದೇಶದ ಜಿಡಿಪಿ 200 ಲಕ್ಷ ಕೋಟಿ ರು. ಇದ್ದು, ಅದರಲ್ಲಿ ಶೇ.6.2ರಷ್ಟುಎಂದರೆ 12 ಲಕ್ಷ ಕೋಟಿ ರು. ಆಗುತ್ತದೆ.

ಕೊರೋನಾ ಅವಾಂತರ, ಸಾವಿನಲ್ಲಿ ಭಾರತಕ್ಕೆ ವಿಶ್ವದಲ್ಲಿ 9ನೇ ಸ್ಥಾನ!

ವರದಿಯಲ್ಲೇನಿದೆ?

- 8 ವಾರ ಲಾಕ್‌ಡೌನ್‌ನಿಂದಾಗಿ ಸೋಂಕು ಹೆಚ್ಚಳ 34ರಿಂದ 76 ದಿನ ಮುಂದಕ್ಕೆ

- ಕೊರೋನಾ ಸೋಂಕಿತರ ಸಂಖ್ಯೆಯೂ ಶೇ.69ರಿಂದ ಶೇ.97ರಷ್ಟುನಿಯಂತ್ರಣ

- ಅಲ್ಲದೆ, ಆರೋಗ್ಯ ಸಂಪನ್ಮೂಲ, ಮೂಲಸೌಕರ್ಯ ಸಿದ್ಧಪಡಿಸಲು ಕಾಲಾವಕಾಶ

- ಆದರೆ, ಈಗಿರುವ ಚಿಕಿತ್ಸಾ ವ್ಯವಸ್ಥೆ ನವೆಂಬರ್‌ವರೆಗೆ ಇರುವ ಬೇಡಿಕೆಗೆ ಸಾಕಾಗುತ್ತದೆ

- ನವೆಂಬರ್‌ ಮಧ್ಯಭಾಗದ ವೇಳೆಗೆ ದೇಶದಲ್ಲಿ ಸೋಂಕಿತರ ಪ್ರಮಾಣ ಗರಿಷ್ಠ ಮಟ್ಟಕ್ಕೆ

- ನಂತರ ಐಸೋಲೇಷನ್‌ ಬೆಡ್‌, ಐಸಿಯು, ವೆಂಟಿಲೇಟರ್‌ ಸಮಸ್ಯೆ ಕಾಡಲಿದೆ