ಮಣಿಪುರ ಭುಗಿಲೆದ್ದ ಜನಾಂಗೀಯ ಹಿಂಸಾಚಾರ; ಪರಿಸ್ಥಿತಿ ನಿಯಂತ್ರಿಸಲು 5000 ಸೈನಿಕರ ರವಾನೆ!
ಜನಾಂಗೀಯ ಗಲಭೆಪೀಡಿತ ಮಣಿಪುರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇನ್ನೂ 5000 ಯೋಧರನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಕ್ಷಣದಿಂದಲೇ ಹೆಚ್ಚುವರಿ ಪಡೆಗಳ ನಿಯೋಜನೆ ಆರಂಭವಾಗಲಿದೆ.
ನವದೆಹಲಿ (ನ.19): ಜನಾಂಗೀಯ ಗಲಭೆಪೀಡಿತ ಮಣಿಪುರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಇನ್ನೂ 5000 ಯೋಧರನ್ನು ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಕ್ಷಣದಿಂದಲೇ ಹೆಚ್ಚುವರಿ ಪಡೆಗಳ ನಿಯೋಜನೆ ಆರಂಭವಾಗಲಿದೆ.
ಈಗಾಗಲೇ ಮಣಿಪುರದಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಸುಮಾರು 21000 ಯೋಧರು ಇದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇನ್ನೂ 50 ಸಿಎಪಿಎಫ್ ಕಂಪನಿಗಳನ್ನು (ಸುಮಾರು 5000 ಯೋಧರು) ಕಳುಹಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
ಮಣಿಪುರದ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸತತ 2ನೇ ದಿನವಾದ ಸೋಮವಾರ ಕೂಡ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ನಡೆಸಿದರು ಹಾಗೂ ಮಣಿಪುರಕ್ಕೆ ಹೆಚ್ಚು ಪಡೆಗಳನ್ನು ಕಳಿಸಿ ಪರಿಸ್ಥಿತಿಯನ್ನು ಆದಷ್ಟು ಬೇಗ ನಿಯಂತ್ರಣಕ್ಕೆ ತರಬೇಕು ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ. ಅವರ ಸಭೆಯ ಫಲಶೃತಿ ಎಂಬಂತೆ 5000 ಯೋಧರನ್ನು ಮಣಿಪುರಕ್ಕೆ ಕಳಿಸುವ ನಿರ್ಧಾರ ಹೊರಬಿದ್ದಿದೆ.
ಮಣಿಪುರದಲ್ಲಿ ಮತ್ತೆ ಸಂಘರ್ಷ ತಾರಕಕ್ಕೆ ಬಿಜೆಪಿಗೆ ನೀಡಿದ ಬೆಂಬಲ ವಾಪಸ್ ಪಡೆದ ಎನ್‌ಪಿಪಿ!
ಕಳೆದ ವರ್ಷದ ಮೇ ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕೆಲ ದಿನ ತಣ್ಣಗಾಗಿದ್ದ ಪರಿಸ್ಥಿತಿ ಇತ್ತೀಚೆಗೆ 10 ಕುಕಿ/ಮಿಜೋ ಉಗ್ರರ ಹತ್ಯೆ ಹಾಗೂ ಉಗ್ರರಿಂದ ಅಪಹರಣಗೊಂಡಿದ್ದ 6 ಮೈತೇಯಿಗಳ ಹತ್ಯೆ ಬಳಿಕ ಮತ್ತೆ ಉಲ್ಬಣಿಸಿದೆ. ಸಿಎಂ, ಸಚಿವರು ಸೇರಿ 13 ಶಾಸಕರ ಮನೆಗಳು ಉದ್ರಿಕ್ತರ ದಾಳಿಗೆ ತುತ್ತಾಗಿವೆ.
ಅಮಿತ್ ಶಾ, ಬೀರೇನ್ ಸಿಂಗ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ಮಣಿಪುರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕು ಎಂದೂ ಒತ್ತಾಯಿಸಿದೆ.
ಸೋಮವಾರ ಮಣಿಪುರದ ಕಾಂಗ್ರೆಸ್ ನಾಯಕರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಮಣಿಪುರದಲ್ಲಿ ಡಬಲ್ ಎಂಜಿನ್ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಮಹತ್ವದ ಬೆಳವಣಿಗೆ, ಎಲ್ಲಾ ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದೆಹಲಿಗೆ ಮರಳಿದ ಅಮಿತ್ ಶಾ!
ಒಂದೂವರೆ ವರ್ಷದಿಂದ ಈಶಾನ್ಯ ರಾಜ್ಯ ಹೊತ್ತಿ ಉರಿಯುತ್ತಿದೆ. ಪ್ರಧಾನಿ ನಾನಾ ದೇಶ ಸುತ್ತಾಡಿ ಪ್ರವಚನಗಳನ್ನು ನೀಡುತ್ತಾರಾದರೂ, ಮಣಿಪುರಕ್ಕೆ ಹೋಗಲು ಅವರಿಗೆ ಸಮಯವಿಲ್ಲ. ಬಿಡುವು ಮಾಡಿಕೊಂಡು ಅವರು ಮಣಿಪುರಕ್ಕೆ ತೆರಳಿ ಅಲ್ಲಿನ ಜನರು, ರಾಜಕೀಯ ಪಕ್ಷಗಳು ಹಾಗೂ ನಿರಾಶ್ರಿತರ ಶಿಬಿರಗಳಲ್ಲಿ ಇರುವವರನ್ನು ಭೇಟಿ ಮಾಡಬೇಕು. ಸಂಸತ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದು ಮಣಿಪುರದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದರು.