ಮೊದಲ ಹಂತದ ಕೊರೋನಾ ಲಸಿಕೆ ಅಭಿಯಾನ ಶನಿವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಉತ್ಪಾದನಾ ಕೇಂದ್ರಗಳಿಂದ ಕೊರೋನಾ ಲಸಿಕೆಯನ್ನು ಹೇಗೆ ವಿತರಣೆ ಮಾಡಲಾಗುತ್ತಿದೆ. ಅದನ್ನು ಎಲ್ಲಿ ಶೇಖರಿಸಿ ಇಡಲಾಗುತ್ತದೆ. ಲಸಿಕೆ ವಿತರಣೆ ಕೇಂದ್ರಗಳಿಗೆ ಅದನ್ನು ಹೇಗೆ ಸಾಗಿಸಲಾಗುತ್ತದೆ ಎಂಬುದರ ವಿವರ ಇಲ್ಲಿದೆ.

"

ಮೊದಲ ಲಸಿಕೆ ಬಂದಿದ್ದು ಹೇಗೆ?

ಕೇಂದ್ರ ಸರ್ಕಾರ ತುರ್ತು ಬಳಕೆಗಾಗಿ 1.65 ಕೋಟಿ ಡೋಸ್‌ ಕೊರೋನಾ ಲಸಿಕೆ ಖರೀದಿಸಿದೆ. ಈ ಪೈಕಿ 1.10 ಕೋಟಿ ಡೋಸ್‌ ಕೋವಿಶೀಲ್ಡ್‌ ಹಾಗೂ 55 ಲಕ್ಷ ಡೋಸ್‌ ಕೋವಾಕ್ಸಿನ್‌ ಲಸಿಕೆ ಸೇರಿದೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಪುಣೆಯ ಸೀರಂ ಸಂಸ್ಥೆಯು ದೆಹಲಿ, ಚೆನ್ನೈ, ಕೋಲ್ಕತಾ, ಗುವಾಹಟಿ, ಶಿಲ್ಲಾಂಗ್‌, ಅಹಮದಾಬಾದ್‌, ಹೈದರಾಬಾದ್‌, ವಿಜಯವಾಡ, ಭುವನೇಶ್ವರ, ಪಟನಾ, ಬೆಂಗಳೂರು, ಲಖನೌ ಮತ್ತು ಚಂಡೀಗಢಕ್ಕೆ ಲಸಿಕೆ ಕಳುಹಿಸಿಕೊಟ್ಟಿದೆ. ಅದೇ ರೀತಿ ಭಾರತ್‌ ಬಯೋಟೆಕ್‌ ಮೊದಲ ಕಂತಿನ ಲಸಿಕೆಯ ಪೊಟ್ಟಣಗಳನ್ನು ಗಾನಾವರಂ, ಗುವಾಹಟಿ, ಪಟನಾ, ದೆಹಲಿ, ಕುರುಕ್ಷೇತ್ರ, ಬೆಂಗಳೂರು, ಪುಣೆ, ಭುವನೇಶ್ವರ, ಜೈಪುರ, ಚೆನ್ನೈ ಮತ್ತು ಲಖನೌಗಳಿಗೆ ರವಾನಿಸಿದೆ. ಎರಡೂ ಸಂಸ್ಥೆಗಳು ಜ.12ರಿಂದ 2 ದಿನಗಳ ಅವಧಿಯಲ್ಲಿ ವಿಮಾನಗಳ ಮೂಲಕ ಲಸಿಕೆ ಕಳುಹಿಸಿಕೊಟ್ಟಿವೆ.

ಉತ್ಪಾದನೆ ಕೇಂದ್ರಗಳಿಂದ ಲಸಿಕೆ ಸಾಗಣೆ ಹೇಗೆ?

ಉತ್ಪಾದನಾ ಕೇಂದ್ರಗಳಲ್ಲಿ ತಯಾರಾದ ಲಸಿಕೆಯನ್ನು ಉಗ್ರಾಣ ಕೇಂದ್ರಗಳಿಗೆ ಸಾಗಣೆ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಮೇಲ್ವಿಚಾರಣೆ ನಡೆಸುತ್ತಿವೆ. ಉತ್ಪಾದನೆ ಆದ ಲಸಿಕೆಗಳನ್ನು ಮೊದಲು ಕರ್ನಲ್‌, ಮುಂಬೈ, ಚೆನ್ನೈ ಮತ್ತು ಕೋಲ್ಕತಾದಲ್ಲಿ ಇರುವ ಸರ್ಕಾರಿ ವೈದ್ಯಕೀಯ ದಾಸ್ತಾನು ಕೇಂದ್ರ ಮತ್ತು ವಿವಿಧ ರಾಜ್ಯಗಳ 37 ಲಸಿಕೆ ಸಂಗ್ರಹಣಾ ಕೇಂದ್ರಗಳಿಗೆ ಶೀತಲೀಕರಣ ವ್ಯವಸ್ಥೆ ಇರುವ ವಾಹನಗಳಲ್ಲಿ ರವಾನಿಸಲಾಗಿದೆ. ಇದು ಲಸಿಕೆ ರವಾನೆಯ ಮೊದಲ ಹಂತ.

ರಾಜ್ಯಗಳಿಗೆ ಬಂದ ಲಸಿಕೆ ಸಾಗಣೆ ಹೇಗೆ?

ರಾಜ್ಯಗಳಲ್ಲಿರುವ ಸಂಗ್ರಹಣಾ ಕೇಂದ್ರಗಳಿಗೆ ಲಸಿಕೆಯ ಬಾಕ್ಸ್‌ ಬಂದ ಬಳಿಕ, ಲಸಿಕೆ ವಿತರಣೆ ಕೇಂದ್ರಗಳಿಗೆ ಸರಕ್ಷಿತವಾಗಿ ಲಸಿಕೆಗಳು ತಲುಪುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ ಆಗಿದೆ. ರಾಜ್ಯ ಉಗ್ರಾಣಗಳಿಂದ ಲಸಿಕೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಕೇಂದ್ರಗಳಿಗೆ ವಿಶೇಷ ವಾಹನಗಳ ಮೂಲಕ ರವಾನಿಸಲಾಗುತ್ತದೆ. ಇಲ್ಲಿಯೂ ಸಂಗ್ರಹಾಗಾರಗಳಲ್ಲಿಯೂ ಲಸಿಕೆ ಕೆಡದಂತೆ ಕಾಪಾಡಲು ಶೀತಲೀಕರಣ ವ್ಯವಸ್ಥೆ ಕಲ್ಪಿಸಲಾಗಿದೆ.

"

ಎಲ್ಲಾ ರಾಜ್ಯಗಳಲ್ಲಿ ವ್ಯವಸ್ಥೆ ಇದೆಯೇ?

ಎಲ್ಲಾ ರಾಜ್ಯಗಳು ಕೊರೋನಾ ಲಸಿಕೆ ಸಂಗ್ರಹಿಸಲು ಕನಿಷ್ಠ ಒಂದಾದರೂ ಪ್ರಾದೇಶಿಕ ಲಸಿಕೆ ಸಂಗ್ರಹಣಾ ಕೇಂದ್ರಗಳನ್ನು ಹೊಂದಿವೆ. ಉದಾರಹರಣೆಗೆ ಉತ್ತರ ಪ್ರದೇಶ 9 ಲಸಿಕೆ ಸಂಗ್ರಹ ಕೇಂದ್ರಗಳನ್ನು ಹೊಂದಿದ್ದರೆ, ಮಧ್ಯಪ್ರದೇಶ, ಗುಜರಾತಿನಲ್ಲಿ 4, ಕೇರಳ- 3, ಜಮ್ಮು- ಕಾಶ್ಮೀರ, ಕರ್ನಾಟಕ ಮತ್ತು ರಾಜಸ್ಥಾನಗಳು ತಲಾ 2 ಲಸಿಕೆ ಸಂಗ್ರಹ ಕೇಂದ್ರ ಹೊಂದಿವೆ.

ಲಸಿಕೆ ವಿತರಣೆ ಕೇಂದ್ರಕ್ಕೆ ಸಾಗಣೆ ಹೇಗೆ?

ಲಸಿಕೆ ಸಂಗ್ರಹ ಕೇಂದ್ರಗಳಿಂದ ಲಸಿಕೆ ವಿತರಣೆ ಕೇಂದ್ರಗಳಿಗೆ ರವಾನಿಸುವುದು ಲಸಿಕೆ ಸಾಗಣೆಯ ಕೊನೆಯ ಹಂತ. ಇದಕ್ಕೆ ವ್ಯಾಕ್ಸಿನ್‌ ಕ್ಯಾರಿಯರ್‌ ಅಥವಾ ಐಸ್‌ ಬಾಕ್ಸ್‌ಗಳನ್ನು ಬಳಕೆ ಮಾಡಲಾಗುತ್ತದೆ. ಈ ಐಸ್‌ ಬಾಕ್ಸ್‌ಗಳಲ್ಲಿ ಲಸಿಕೆ ತುಂಬುವುದಕ್ಕೂ ಮುನ್ನ ಅವುಗಳ ತಾಪಮಾನ ಸರಿಯಾಗಿದೆಯೇ ಎಂಬುದನ್ನು ತಪಾಸಣೆ ಮಾಡಲಾಗುತ್ತದೆ. ಇವುಗಳಿಗೆ ವಿದ್ಯುತ್‌ ಪೂರೈಕೆಯ ಅಗತ್ಯ ಇರುವುದಿಲ್ಲ. ಈವರೆಗಿನ ಪ್ರಕ್ರಿಯೆಯಲ್ಲಿ ಶೀತಲೀಕರಣಕ್ಕೆ ವಿದ್ಯುತ್‌ ಅಥವಾ ಸೌರಶಕ್ತಿಯನ್ನು ಬಳಕೆ ಮಾಡಲಾಗುತ್ತಿತ್ತು.

ಲಸಿಕೆ ವಿತರಣೆ ಕೇಂದ್ರದಲ್ಲಿ ಏನಾಗುತ್ತದೆ?

ಈಗಾಗಲೇ ನಿಗದಿಪಡಿಸಿದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಲಸಿಕೆ ನೀಡುವ ಕೊಠಡಿಯಲ್ಲಿ ವೈದ್ಯಕೀಯ ಅಧಿಕಾರಿಗಳು ಹಾಗೂ ವೈದ್ಯರು ಕಡ್ಡಾಯವಾಗಿ ಹಾಜರಿರಬೇಕು. ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರ, ಲಸಿಕೆ ಪಡೆಯಲು ಬಂದವರಿಗೆ ಆಸನ ವ್ಯವಸ್ಥೆ ಇರುವ ಕೊಠಡಿಯನ್ನು ಲಸಿಕೆ ನೀಡಲು ಆಯ್ಕೆ ಮಾಡಿಕೊಳ್ಳಬೇಕು.

ಲಸಿಕೆ ನೀಡುವ ತಂಡದಲ್ಲಿ ಯಾರಾರ‍ಯರು ಇರುತ್ತಾರೆ?

ಲಸಿಕೆ ನೀಡುವ ತಂಡದಲ್ಲಿ ಐದು ಮಂದಿ ಸದಸ್ಯರು ಇರುತ್ತಾರೆ. ಇದರಲ್ಲಿ ಮೊದಲ ಅಧಿಕಾರಿ ಭದ್ರತೆಗೆ ಸಂಬಂಧಿಸಿದ ಸಂಗತಿಗಳನ್ನು ನೋಡಿಕೊಳ್ಳುತ್ತಾರೆ. ಎರಡನೇ ಅಧಿಕಾರಿ ಫಲಾನುಭವಿಗಳ ನೋಂದಣಿ ಹಾಗೂ ದಾಖಲೆಗಳನ್ನು ಪರೀಶೀಲಿಸುತ್ತಾರೆ. ಮೂರನೇ ಅಧಿಕಾರಿ ಲಸಿಕೆ ನೀಡುವ ವ್ಯಕ್ತಿ ಆಗಿರುತ್ತಾರೆ. ಒಂದು ವೇಳೆ ಲಸಿಕೆ ಪಡೆಯುವ ವ್ಯಕ್ತಿ ಮಹಿಳೆ ಆಗಿದ್ದು, ಲಸಿಕೆ ನೀಡುವ ವ್ಯಕ್ತಿ ಪುರುಷ ಆಗಿದ್ದರೆ ಲಸಿಕೆಯನ್ನು ನೀಡುವ ವೇಳೆ ಓರ್ವ ಮಹಿಳಾ ಸಿಬ್ಬಂದಿ ಹಾಜರಿರಬೇಕು. ಉಳಿದ ಇಬ್ಬರು ಸಿಬ್ಬಂದಿ ವೀಕ್ಷಣಾ ಕೊಠಡಿಯಲ್ಲಿ ಇರತಕ್ಕದ್ದು. ಲಸಿಕೆ ಪಡೆದ ವ್ಯಕ್ತಿಯ ಆರೋಗ್ಯದ ಮೇಲೆ 30 ನಿಮಿಷಗಳ ಕಾಲ ಅವರು ನಿಗಾ ವಹಿಸಲಿದ್ದಾರೆ.