ನವದೆಹಲಿ(ಡಿ.17): ಭಾರತದಲ್ಲಿ ಮೊದಲ ಹಂತದ ಕೊರೋನಾ ಲಸಿಕೆ ಅಭಿಯಾನಕ್ಕೆ 10 ಸಾವಿರದಿಂದ 13 ಸಾವಿರ ಕೋಟಿ ರು.ಗಳಷ್ಟುಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಭಾರತ ಮುಂದಿನ 6ರಿಂದ 8 ತಿಂಗಳಿನಲ್ಲಿ 30 ಕೋಟಿ ಜನರಿಗೆ ಕೊರೋನಾ ಲಸಿಕೆಯನ್ನು ವಿತರಿಸುವ ಗುರಿಯನ್ನು ಹೊಂದಿದ್ದು, ಅಸ್ಟ್ರಾಜೆನಿಕಾ, ರಷ್ಯಾದ ಸ್ಪುಟ್ನಿಕ್‌, ಝೈಡಸ್‌ ಕ್ಯಾಡಿಲಾ ಮತ್ತು ಭಾರತದ ಭಾರತ್‌ ಬಯೋಟೆಕ್‌ ಲಸಿಕೆಗಳು ಬಳಕೆಗೆ ಲಭ್ಯವಾಗುವ ನಿರೀಕ್ಷೆ ಮೂಡಿಸಿವೆ.

ಜಾಗತಿಕ ಕೊರೋನಾ ಲಸಿಕೆ ಹಂಚಿಕೆ ಯೋಜನೆ ಕೋವ್ಯಾಕ್ಸ್‌ನಿಂದ ಭಾರತಕ್ಕೆ ನೆರವು ದೊರೆತ ಹೊರತಾಗಿಯೂ ಲಸಿಕೆ ವಿತರಣೆಗೆ ಭಾರಿ ಮೊತ್ತದ ಹಣದ ಅವಶ್ಯಕತೆ ಬೀಳಲಿದೆ. ಒಂದು ವೇಳೆ ಕೋವ್ಯಾಕ್ಸ್‌ ಸೌಲಭ್ಯದ ಅಡಿಯಲ್ಲಿ ಭಾರತಕ್ಕೆ 19ರಿಂದ 25 ಕೋಟಿ ಡೋಸ್‌ ಲಸಿಕೆಗಳು ಲಭ್ಯವಾದರೂ ಸರ್ಕಾರಕ್ಕೆ ಮೊದಲ ಹಂತದ ಕೊರೋನಾ ಲಸಿಕೆಯನ್ನು ನೀಡಲು ಸುಮಾರು 10 ಸಾವಿರ ಕೋಟಿಯಷ್ಟುಹಣದ ಅಗತ್ಯ ಬೀಳಲಿದೆ. ಒಂದು ವೇಳೆ ಭಾರತಕ್ಕೆ 9.5 ಕೋಟಿಯಿಂದ 12.5 ಕೋಟಿ ಡೋಸ್‌ ಲಸಿಕೆಯಷ್ಟೇ ದೊರಕಿದರೆ ಭಾರತ ಲಸಿಕೆ ವಿತರಣೆಗೆ 13 ಸಾವಿರ ಕೋಟಿ ರು.ಗಳಷ್ಟುಹಣವನ್ನು ವ್ಯಯಿಸಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ.