ನವದೆಹಲಿ(ಫೆ.23): ಲಡಾಖ್‌ ಗಡಿಯಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟು ಶಮನಗೊಳ್ಳುತ್ತಿರುವ ಬೆನ್ನಲ್ಲೇ, ಚೀನಾ ಮೂಲದ ಕಂಪನಿಗಳ 45 ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರದ ಮುಂದಾಗಿದೆ.

ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಅನುಮತಿ ಕೋರಿ ಚೀನಾದ 150 ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ಪೈಕಿ ಮೊದಲ ಹಂತದಲ್ಲಿ ಉತ್ಪಾದನಾ ವಲಯ ಸೇರಿದಂತೆ ಕೆಲ ವಲಯಗಳ 45 ಪ್ರಸ್ತಾಪಗಳಿಗೆ ಅನುಮೋದನೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮತ್ತಷ್ಟು ಪ್ರದೇಶಗಳಿಂದ ಚೀನಾ ಸೇನೆ ಹಿಂತೆಗೆತ!

ಕಳೆದ ಮೇ ತಿಂಗಳಿನಲ್ಲಿ ಚೀನಾ ಲಡಾಖ್‌ನಲ್ಲಿ ಕ್ಯಾತೆ ತೆಗೆದ ಬೆನ್ನಲ್ಲೇ, ಆ ದೇಶಕ್ಕೆ ಭಾರತ ಸರ್ಕಾರ ನಾನಾ ರೀತಿಯಲ್ಲಿ ಬಿಸಿಮುಟ್ಟಿಸುವ ಕೆಲಸ ಮಾಡಿತ್ತು. ಚೀನಾ ಮೂಲದ ಆ್ಯಪ್‌ಗಳ ಮೇಲೆ ನಿಷೇಧ, ಚೀನಾ ಉತ್ಪನ್ನಗಳ ಆಮದಿಗೆ ಕಡಿವಾಣ ಮತ್ತು ಚೀನಾ ಕಂಪನಿಗಳ ಹೂಡಿಕೆಗೆ ಅನುಮತಿ ನೀಡದೇ ಇರುವುದು ಅದರ ಭಾಗವಾಗಿತ್ತು. ಹೀಗಾಗಿ ಚೀನಾ ಕಂಪನಿಗಳು ಸಲ್ಲಿಸಿದ್ದ ಸುಮಾರು 15000 ಕೋಟಿ ರು. ಮೌಲ್ಯದ 150ಕ್ಕೂ ಹೆಚ್ಚು ಹೂಡಿಕೆ ಪ್ರಸ್ತಾಪಗಳು ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು.

ಆದರೆ ಇದೀಗ ಪರಿಸ್ಥಿತಿ ತಿಳಿಯಾಗುವ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಸಾಧ್ಯತೆ ಇಲ್ಲದ ವಲಯಗಳ ಪ್ರಸ್ತಾಪಗಳಿಗೆ ಅನುಮೋದನೆ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಇದರಲ್ಲಿ ಆಟೋಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಔಷಧ ಮತ್ತು ಜವಳಿ ವಲಯ ಸೇರಿವೆ ಎನ್ನಲಾಗಿದೆ.

ಲಡಾಖ್‌ನಿಂದ ಸೇನೆ ಹಿಂತೆಗೆತ ಪೂರ್ಣ; ಖಚಿತಪಡಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಚೀನಾ ಕಂಪನಿಗಳ ಹೂಡಿಕೆ ಪ್ರಸ್ತಾವವನ್ನು, ಅವು ಭಾರತದ ಭದ್ರತೆಗೆ ಅಪಾಯ ತರುವ ಸಾಧ್ಯತೆಯ ಆಧಾರದಲ್ಲಿ ಸರ್ಕಾರ ಮೂರು ಭಾಗಗಳಾಗಿ ವಿಂಗಡಿಸಿದೆ. ಈ ಪೈಕಿ ದತ್ತಾಂಶ ಮತ್ತು ಹಣಕಾಸು ವಲಯವನ್ನು ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಿರುವ ಕಾರಣ, ಅಂಥ ಪ್ರಸ್ತಾಪಗಳಿಗೆ ತಕ್ಷಣಕ್ಕೆ ಅನುಮತಿ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಯಾವ್ಯಾವ ಕಂಪನಿಗಳಿಗೆ ಅನುಮತಿ?:

ಮೊದಲ ಹಂತದಲ್ಲಿ ಅನುಮತಿ ಪಡೆಯಲಿರುವ 45 ಪ್ರಸ್ತಾಪಗಳ ಪೈಕಿ ಗ್ರೇಟ್‌ವಾಲ್‌ ಮೋಟಾರ್‌ ಮತ್ತು ಎಸ್‌ಎಐಸಿ ಮೋಟಾರ್‌ ಕಾಪ್‌ರ್‍ ಕೂಡಾ ಸೇರಿದೆ ಎನ್ನಲಾಗಿದೆ. ಗ್ರೇಟ್‌ವಾಲ್‌ ಮತ್ತು ನರಲ್‌ ಮೋಟಾ​ರ್‍ಸ್ ಕಂಪನಿಗಳು, ಭಾರತದಲ್ಲಿನ ಅಮೆರಿಕ ಮೂಲದ ಕಾರು ತಯಾರಿಕಾ ಕಂಪನಿಯೊಂದನ್ನು ಖರೀದಿಸುವ ಪ್ರಸ್ತಾಪ ಮುಂದಿಟ್ಟಿದ್ದವು. ಇನ್ನು ಎಸ್‌ಎಐಸಿ ಕಂಪನಿ 2019ರಿಂದಲೇ ತನ್ನ ಬ್ರಿಟಿಷ್‌ ಬ್ರ್ಯಾಂಡ್‌ ಎಂಜಿ ಮೋಟಾ​ರ್‍ಸ್ ಹೆಸರಿನಲ್ಲಿ ಭಾರತದಲ್ಲಿ ಕಾರು ಮಾರಾಟ ಮಾಡುತ್ತಿದ್ದು, ಮತ್ತಷ್ಟುಹೂಡಿಕೆಯ ಪ್ರಸ್ತಾಪ ಮಾಡಿದೆ.