* ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆ* 12 ದಿನದಲ್ಲಿ 24.8%ನಿಂದ 12.5%ಗೆ ಕುಸಿತ* ದೇಶದಲ್ಲಿ ಕೊರೋನಾ ಸ್ಥಿತಿ ಬಹುತೇಕ ಸ್ಥಿರ
ನವದೆಹಲಿ(ಮೇ.23): ದೇಶಾದ್ಯಂತ ಜಾರಿಮಾಡಿರುವ ಲಾಕ್ಡೌನ್ ಪರಿಣಾಮ ಬೀರಲು ಆರಂಭಿಸಿದ್ದು, ಇದಕ್ಕೆ ಉದಾಹರಣೆ ಎಂಬಂತೆ ದೇಶದ ಬಹುತೇಕ ಭಾಗಗಳಲ್ಲಿ ಕೊರೋನಾಸೋಂಕು ಮತ್ತು ಸಾವು ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ 382 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಇನ್ನೂ ಶೇ.10ಕ್ಕಿಂತ ಹೆಚ್ಚಿರುವ ಕಾರಣ, ಈ ಹೋರಾಟದ ಪ್ರಯಾಣ ಇನ್ನೂ ದೂರವಿದೆ ಎಂದು ಎಚ್ಚರಿಕೆ ನೀಡಿದೆ.
ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!
ಸತತ 9 ದಿನಗಳಿಂದ ಹೊಸ ಸೋಂಕಿತರಿಗಿಂತ ಚೇತರಿಕೆ ಆಗಿರುವವರ ಪ್ರಮಾಣ ಹೆಚ್ಚಿದೆ. ಮೇ 3ರಂದು ಶೇ.17.13ರಷ್ಟಿದ್ದ ಸಕ್ರಿಯ ಕೇಸು ಮೇ 22ಕ್ಕೆ ಶೇ.11.12ಕ್ಕೆ ಇಳಿದಿದೆ. ಸೋಂಕಿನಿಂದ ಚೇತರಿಕೆಯಾಗುತ್ತಿರುವವರ ಪ್ರಮಾಣ ಶೇ.81.97ರಿಂದ ಶೇ.87.76ಕ್ಕೆ ಹೆಚ್ಚಳವಾಗಿದೆ. ಮತ್ತೊಂದೆಡೆ ಪಾಸಿಟಿವಿಟಿ ಪ್ರಮಾಣ ಮೇ 10 ಮತ್ತು ಮೇ 22ರ ಅವಧಿಯಲ್ಲಿ ಶೇ.24.83ರಿಂದ ಶೇ.12.45ಕ್ಕೆ ಇಳಿದಿದೆ.
WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಸಾಮಾಜಿಕ, ಆರ್ಥಿಕ ಚಟುವಟಿಕೆ ನಿಷೇಧ, ಕಂಟ್ಮೈನ್‌ಮೆಂಟ್ ಮತ್ತು ಇತರೆ ಸುರಕ್ಷತಾ ಕ್ರಮಗಳ ಮೂಲಕ ದೇಶ ಕೊರೋನಾ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಪಾಸಿಟಿವಿಟಿ ದರ, ಸಕ್ರಿಯ ಕೇಸು ಇಳಿಕೆಯಾಗುತ್ತಿದೆ. ಸೋಂಕಿನಿಂದ ಚೇತರಿಕೆಯಾಗುತ್ತಿರುವವ ಪ್ರಮಾಣ ಕೂಡಾ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದರೆ ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. 382 ಜಿಲ್ಲೆಗಳಲ್ಲಿ ಈಗಲೂ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಹೀಗಾಗಿ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಸೋಂಕಿನ ಸರಪಳಿ ತುಂಡರಿಸಲು ನಾವು ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ನಿರ್ವಹಣೆ ನಿಧಾನವಾಗಿಯಾದರೂ ಬಹುತೇಕ ರಾಜ್ಯಗಳಲ್ಲಿ ಸಮಾಧಾನಕರ ಪರಿಸ್ಥಿತಿಯತ್ತ ತಲುಪುತ್ತಿದೆ. ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ. ಬಹುತೇಕ ಸಾವು ಕೇವಲ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಉತ್ತರಪ್ರದೇಶ, ಪಂಜಾಬ್ ಮತ್ತು ದೆಹಲಿಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೋವಿಶೀಲ್ಡ್ ಲಸಿಕೆ ವ್ಯರ್ಥವಾಗುವ ಪ್ರಮಾಣವನ್ನು ಶೇ.8ರಿಂದ ಶೇ.1ಕ್ಕೆ ಇಳಿಸಲಾಗಿದೆ. ಕೋವ್ಯಾಕ್ಸಿನ್ ಲಸಿಕೆ ವ್ಯರ್ಥ ಪ್ರಮಾಣವನ್ನು ಶೇ.17ರಿಂದ ಶೆ.4ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
