ನವದೆಹಲಿ(ಅ.11): ಕಳೆದ ಮೇ ತಿಂಗಳಿನಿಂದ ಲಡಾಖ್‌ನಲ್ಲಿ ಗಡಿ ಕ್ಯಾತೆ ಆರಂಭಿಸಿರುವ ಚೀನಾಕ್ಕೆ ಸ್ಥಳದಲ್ಲೇ ತಿರುಗೇಟು ನೀಡುತ್ತಲೇ ಬಂದಿರುವ ಭಾರತ, ಅದೇ ವೇಳೆ ಮತ್ತೊಂದೆಡೆ ತನ್ನ ಕ್ಷಿಪಣಿ ಯೋಜನೆಗಳಿಗೆ ಮತ್ತಷ್ಟುಚುರುಕು ನೀಡುವ ಮೂಲಕ ಕಮ್ಯುನಿಸ್ಟ್‌ ದೇಶಕ್ಕೆ ತಕ್ಕ ಸಂದೇಶ ರವಾನಿಸುವ ಯತ್ನವನ್ನೂ ಮಾಡಿದೆ. 800 ಕಿ.ಮೀ. ದೂರ ಸಾಗುವ ನಿರ್ಭಯ್‌ ಕ್ಷಿಪಣಿ ಪರೀಕ್ಷೆಯನ್ನು ಮುಂದಿನ ವಾರ ನಡೆಸಲು ‘ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿಆರ್‌ಡಿಒ) ಸಜ್ಜಾಗಿದೆ. ಇದರೊಂದಿಗೆ ಕಳೆದ 35 ದಿನಗಳಲ್ಲಿ ಭಾರತ ಭರ್ಜರಿ 10 ಕ್ಷಿಪಣಿಗಳನ್ನು ಪರೀಕ್ಷಿಸಿದಂತೆ ಆಗಲಿದೆ.

ಅಂದರೆ ಪ್ರತಿ 4 ದಿನಕ್ಕೆ ಒಂದು ಕ್ಷಿಪಣಿ ಪರೀಕ್ಷೆಯ ಮೂಲಕ ಭವಿಷ್ಯದ ಯಾವುದೇ ಸಂಭವನೀಯ ಪರಿಸ್ಥಿತಿ ಎದುರಿಸಲು ತಾನು ಸಜ್ಜು ಎಂಬ ಸಂದೇಶವನ್ನು ಚೀನಾಕ್ಕೆ ರವಾನಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಈಗ ಏಕೆ ಇಷ್ಟು ಪರೀಕ್ಷೆ?

ಮೇ 5ರಂದು ಪ್ಯಾಂಗಾಂಗ್‌ ಸರೋವರದ ಬಳಿ ಭಾರತ- ಚೀನಾ ಯೋಧರ ನಡುವೆ ಇತ್ತೀಚಿನ ವರ್ಷಗಳ ಮೊದಲ ಘರ್ಷಣೆ ನಡೆದಿತ್ತು. ಬಳಿಕ ಜೂನ್‌ನಲ್ಲಿ ಪರಸ್ಪರರ ನಡುವೆ ಭರ್ಜರಿ ಕಾಳಗ ನಡೆದು 50ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. 4 ದಶಕಗಳಲ್ಲೇ ನಡೆದ ಯೋಧರ ಸಾವಿನ ಮೊದಲ ಪ್ರಕರಣ ಉಭಯ ದೇಶಗಳ ನಡುವಿನ ವೈಷಮ್ಯವನ್ನು ಹೆಚ್ಚಿಸಿತ್ತು. ಅದಾದ 2 ತಿಂಗಳಲ್ಲಿ ಚೀನಾ ಯೋಧರು ಭಾರತೀಯ ಯೋಧರ ಕಡೆಗೆ ಗುಂಡಿನ ದಾಳಿ ನಡೆಸುವ ಮೂಲಕ ನಿಯಮ ಉಲ್ಲಂಘಿಸಿದ್ದರು. ಇದೆಲ್ಲದರ ನಡುವೆಯೇ ಉಭಯ ದೇಶಗಳ ನಡುವೆ ಗಡಿ ಶಾಂತಿ ಕಾಪಾಡಲು ಹಲವು ಸುತ್ತಿನಲ್ಲಿ ಮಾತುಕತೆ ನಡೆದಿದ್ದವು. ಪ್ರತಿ ಸಭೆಯಲ್ಲೂ ಚೀನಾ ಶಾಂತಿಯ ಮಾತುಗಳನ್ನು ಆಡಿಕೊಂಡು ಬಂದಿದ್ದರೂ, ಅದನ್ನು ನಂಬುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಇದೇ ಕಾರಣಕ್ಕಾಗಿಯೇ ಎಲ್ಲಾ ಕ್ಷಿಪಣಿ ಯೋಜನೆಗಳನ್ನು ತ್ವರಿತಗೊಳಿಸುವಂತೆ ಡಿಆರ್‌ಡಿಒಗೆ ಸರ್ಕಾರದ ಕಡೆಯಿಂದ ಸಂದೇಶ ರವಾನಿಸಲಾಗಿತ್ತು ಎನ್ನಲಾಗಿದೆ. ಯೋಜನೆಗಳಿಗೆ ತ್ವರಿತಗತಿ ನೀಡಿದ ಕಾರಣ, ನಿರ್ಭಯ ಕ್ಷಿಪಣಿಗಳನ್ನು ಲಡಾಖ್‌ ಗಡಿಗೆ ನಿಯೋಜಿಸಲು ಸಾಧ್ಯವಾಗಿದೆ. ಶೀಘ್ರವೇ ಶೌರ್ಯ ಕ್ಷಿಪಣಿಯನ್ನು ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಯಾವ್ಯಾವ ಕ್ಷಿಪಣಿ ಪ್ರಯೋಗ?

- ಸೆ.7: ಹೈಪರ್‌ಸಾನಿಕ್‌ ಟೆಕ್ನಾಲಜಿ ಡೆಮೊನ್‌ಸ್ಪ್ರೇಟರ್‌ ವೆಹಿಕಲ್‌

- ಸೆ.22: ಶರವೇಗದೊಂದಿಗೆ ವೈಮಾನಿಕ ದಾಳೀ ಮಾಡುವ ಅಭ್ಯಾಸ್‌

- ಸೆ.22: ಟ್ಯಾಂಕ್‌ ಹೊಡೆದುರುಳಿಸುವ ಲೇಸರ್‌ ನಿರ್ದೇಶಿತ ಕ್ಷಿಪಣಿ

- ಸೆ.23: ಪೃಥ್ವಿ-2 ಕ್ಷಿಪಣಿಯ ರಾತ್ರಿ ಪರೀಕ್ಷೆ

- ಸೆ.30: ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ

- ಅ.1: ಲೇಸರ್‌ ನಿರ್ದೇಶಿತ ಆ್ಯಂಟಿ ಟ್ಯಾಂಕ್‌ ಕ್ಷಿಪಣಿ

- ಅ.3: ಶೌರ್ಯ ಸೂಪರ್‌ಸಾನಿಕ್‌ ಕ್ಷಿಪಣಿ

- ಅ.5: ಕ್ಷಿಪಣಿ ಸಹಾಯದ ಟಾರ್ಪೆಡೋ

- ಅ.9: ರಾಡಾರ್‌ ಧ್ವಂಸಗೊಳಿಸುವ ರುದ್ರಂ-1