* ದೇಶದಲ್ಲಿ ಒಮಿಕ್ರಾನ್ ಅಟ್ಟಹಾಸ* ಮೂರನೇ ಅಲೆಯ ಮುನ್ಸೂಚನೆ ಕೊಟ್ಟಿತಾ ಒಮಿಕ್ರಾನ್ ಸೋಂಕು* ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತೊಂದು ತಲೆನೋವು

ನವದೆಹಲಿ(ಡಿ.,22): ಕೊರೋನಾ ವೈರಸ್ ಒಮಿಕ್ರಾನ್ ವೇರಿಯಂಟ್ ಕೇಸ್‌ನ ಹೊಸ ರೂಪಾಂತರದ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವುದು ಆತಂಕವನ್ನು ಹೆಚ್ಚಿಸಿದೆ. ಒಂದು ವಾರದೊಳಗೆ, ಓಮಿಕ್ರಾನ್ ಸೋಂಕಿತ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಕಳೆದ ವಾರ 100 ಇದ್ದ ಅಂಕಿ ಈ ವಾರ 200 ದಾಟಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 15 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕಿತ ರೋಗಿಗಳ ಸಂಖ್ಯೆ ಇದುವರೆಗೆ 213 ಕ್ಕೆ ಏರಿದೆ. ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.

ಆದಾಗ್ಯೂ, ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ನಡುವೆ, ಯಾವುದೇ ಸೋಂಕಿತ ರೋಗಿಗೆ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ ಎಂಬುವುದು ಸಮಾಧಾನದ ವಿಚಾರ. ಭಾರತದಲ್ಲಿ Omicron ರೂಪಾಂತರದ ಮೊದಲ ಪ್ರಕರಣವು ಡಿಸೆಂಬರ್ 2 ರಂದು ಬೆಳಕಿಗೆ ಬಂದಿದೆ ಎಂಬುವುದು ಉಲ್ಲೇಖನೀಯ. ಡಿಸೆಂಬರ್ 2 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿತ್ತು. ಅಂದಿನಿಂದ, ಇದರ ಪ್ರಕರಣಗಳು 110 ಪಟ್ಟು ಹೆಚ್ಚಾಗಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ 65 ಮತ್ತು ದೆಹಲಿಯಲ್ಲಿ 57 ರೋಗಿಗಳು ಪತ್ತೆಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಎರಡನೇ ಒಮಿಕ್ರಾನ್ ಪ್ರಕರಣ ಬೆಳಕಿಗೆ ಬಂದಿದೆ

ಇತ್ತೀಚೆಗೆ ಕೀನ್ಯಾದಿಂದ ಹಿಂದಿರುಗಿದ 39 ವರ್ಷದ ಮಹಿಳೆಯ ಮಾದರಿಯು ಕೊರೋನಾ ವೈರಸ್‌ನ ಓಮಿಕ್ರಾನ್ ಎಂಬುವುದು ದೃಢಪಟ್ಟಿದೆ. ಈ ಮೂಲಕ ಆಂಧ್ರಪ್ರದೇಶದಲ್ಲಿ ಬುಧವಾರ ಪ್ರಕರಣಗಳ ಸಂಖ್ಯೆ ಎರಡಕ್ಕೆ ಏರಿದೆ. ಆಂಧ್ರದ ಆರೋಗ್ಯ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಟ್ವೀಟ್‌ನಲ್ಲಿ, ಮಹಿಳೆ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ ಮತ್ತು ರಸ್ತೆ ಮೂಲಕ ತಿರುಪತಿಗೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಮಹಿಳೆ ಆರೋಗ್ಯವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಾಂಸ್ಥಿಕ ಪ್ರತ್ಯೇಕತೆಯಲ್ಲಿದ್ದಾರೆ.

ದೆಹಲಿಯಲ್ಲಿ ಹೊಸ ವರ್ಷಾಚರಣೆಗೆ ನಿಷೇಧ

ಹೆಚ್ಚುತ್ತಿರುವ ಕೊರೋನಾ ವೈರಸ್ ಪ್ರಕರಣಗಳು ಮತ್ತು ಓಮಿಕ್ರಾನ್ ರೂಪದ ಸೋಂಕು ಹರಡುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆ ಸಂಬಂಧ ಯಾವುದೇ ಆಯೋಜನೆ ನಡೆಯದಂತೆ ನೋಡಿಕೊಳ್ಳುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಕೋವಿಡ್ -19 ವೇಗವಾಗಿ ಹರಡುವ ಸಾಧ್ಯತೆಯಿರುವ ದೆಹಲಿಯ ಪ್ರದೇಶಗಳನ್ನು ಗುರುತಿಸಲು ಡಿಡಿಎಂಎ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.