ಒಡಿಶಾ(ಅ.04): 1000 ಕಿ.ಮೀ. ದೂರದಲ್ಲಿರುವ ಗುರಿಗಳನ್ನು ಹೊಡೆದುರುಳಿಸುವ, ಅಣ್ವಸ್ತ್ರ ಸಾಮರ್ಥ್ಯದ, ಶಬ್ದಕ್ಕಿಂತ ವೇಗವಾಗಿ ಚಲಿಸುವ ಸ್ವದೇಶಿ ನಿರ್ಮಿತ ಹೈಪರ್‌ಸಾನಿಕ್‌ ಕ್ಷಿಪಣಿ ‘ಶೌರ್ಯ’ ಪ್ರಯೋಗವನ್ನು ಭಾರತ ಶನಿವಾರ ಯಶಸ್ವಿಯಾಗಿ ನಡೆಸಿದೆ.

700ರಿಂದ 1000 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿ ಚೀನಾ ಹಾಗೂ ಪಾಕಿಸ್ತಾನದ ಬಹುತೇಕ ಪ್ರದೇಶಗಳನ್ನು ತಲುಪಬಲ್ಲುದು. ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವಾಗಲೇ, ಈ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿರುವುದು ಭಾರತದ ಶಕ್ತಿಯನ್ನು ಮತ್ತಷ್ಟುವೃದ್ಧಿಸಿದಂತಾಗಿದೆ.

ಶೌರ್ಯ ಕ್ಷಿಪಣಿ 200 ಕೆ.ಜಿ.ಯಿಂದ 1000 ಕೆ.ಜಿ.ವರೆಗೆ ಅಣ್ವಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಶನಿವಾರ ಮಧ್ಯಾಹ್ನ 12.10ಕ್ಕೆ ಇದನ್ನು ಎಪಿಜೆ ಅಬ್ದುಲ್‌ ಕಲಾಂ ದ್ವೀಪದಿಂದ ಉಡಾವಣೆ ಮಾಡಲಾಯಿತು. 10 ಮೀಟರ್‌ ಉದ್ದ, 74 ಸೆಂ.ಮೀ. ಸುತ್ತಳತೆ, 6.2 ಟನ್‌ ತೂಕ ಹೊಂದಿರುವ ಈ ಕ್ಷಿಪಣಿ ನಿಗದಿತ ಗುರಿಯನ್ನು ತಲುಪಿತು. ಬಂಗಾಳ ಕೊಲ್ಲಿಯಲ್ಲಿನ ಗುರಿಯನ್ನು ಅತ್ಯಂತ ನಿಖರವಾಗಿ ಮುಟ್ಟಿತು ಎಂದು ಮೂಲಗಳು ತಿಳಿಸಿವೆ.

ತನ್ನ ದರ್ಜೆಯಲ್ಲಿ ಶೌರ್ಯ ಕ್ಷಿಪಣಿ ವಿಶ್ವದ ಟಾಪ್‌ ಕ್ಷಿಪಣಿಗಳಲ್ಲಿ ಒಂದೆನಿಸಿಕೊಂಡಿದೆ ಎಂದು ಡಿಆರ್‌ಡಿಒ ತಿಳಿಸಿದೆ.