ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಹೊಸ ಹೊಸ ದಾಖಲೆಗಳಿಗೆ ಸಾಕ್ಷಿಯಾದ ಭಾರತ ಮಂಗಳವಾರ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಹೊಸ ಹೊಸ ದಾಖಲೆಗಳಿಗೆ ಸಾಕ್ಷಿಯಾದ ಭಾರತ ಮಂಗಳವಾರ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (41) ಭಾರತೀಯ ಕಾಲಮಾನ ಮಂಗಳವಾರ ಸಂಜೆ 5.22ಕ್ಕೆ ಅಮೆರಿಕದ ಆ್ಯಕ್ಸಿಯಾಮ್‌ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದು 41 ವರ್ಷಗಳ ಬಳಿಕ ಭಾರತೀಯರೊಬ್ಬರ ಮೊದಲ ಅಂತರಿಕ್ಷ ಯಾತ್ರೆ ಜತೆಗೆ, ಮೊಟ್ಟಮೊದಲ ಬಾರಿಗೆ ಭಾರತೀಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗೆ ಕಾಲಿಡುತ್ತಿದ್ದಾರೆ ಎಂಬ ದಾಖಲೆಗೆ ಕಾರಣವಾಗಲಿದೆ. ಈ ಹಿನ್ನೆಲೆ ಪ್ರಯಾಣ, ಉದ್ದೇಶ ಮೊದಲಾದವುಗಳ ಕುರಿತಾದ ಮಾಹಿತಿ ಇಲ್ಲಿದೆ.

ಇಸ್ರೋ- ನಾಸಾ ಸಹಯೋಗ

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಒಪ್ಪಂದ ಅನ್ವಯ, ಭಾರತೀಯ ವಾಯಪಡೆಯ ಪೈಲಟ್‌ ಶುಭಾಂಶು ಶುಕ್ಲಾ ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿದ್ದಾರೆ. ಭಾರತದಂತೆ ಪೋಲೆಂಡ್‌, ಹಂಗರಿ ದೇಶಗಳು ಕೂಡಾ ಮೊದಲ ಸಲ ತಮ್ಮ ಗಗಗನಯಾತ್ರಿಗಳನ್ನು ಐಎಸ್‌ಎಸ್‌ಗೆ ಕಳುಹಿಸುತ್ತಿವೆ.

ಆ್ಯಕ್ಸಿಯಾಮ್‌ ನೌಕೆಯಲ್ಲಿ ಯಾನ

ಅಮೆರಿಕದ ಆ್ಯಕ್ಸಿಯಾಮ್‌ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಪ್ರಯಾಣ ಕೈಗೊಳ್ಳಲಿದ್ದಾರೆ. ಈ ನೌಕೆಯನ್ನು ಹೊತ್ತು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಮಂಗಳವಾರ ಸಂಜೆ 5.22ಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದೆ. ಒಂದು ವೇಳೆ ಕಡೆಯು ಹಂತದಲ್ಲಿ ಉಡ್ಡಯನಕ್ಕೆ ಏನಾದರೂ ಅಡ್ಡಿ ಉಂಟಾದಲ್ಲಿ ಜೂ.11ರ ಸಂಜೆ 5 ಗಂಟೆಯ ಮತ್ತೊಂದು ಸಮಯವನ್ನೂ ನಿಗದಿ ಮಾಡಲಾಗಿದೆ.

28 ಗಂಟೆಗಳ ಸುದೀರ್ಘ ಪ್ರಯಾಣ

ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಮಂಗಳವಾರ ಸಂಜೆ ಹೊರಟರೂ ಅದು ಐಎಸ್‌ಎಸ್‌ ತಲುಪಲು ಭರ್ಜರಿ 28 ಗಂಟೆ ಬೇಕು. ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ಬುಧವಾರ ರಾತ್ರಿ 10 ಗಂಟೆಯ ವೇಳೆಗೆ ನಾಲ್ವರನ್ನು ಹೊತ್ತ ನೌಕೆ ಐಎಸ್‌ಎಸ್‌ ತಲುಪಲಿದೆ.

14 ದಿನಗಳ ಐಎಸ್‌ಎಸ್‌ ವಾಸ

ನಾಲ್ವರು ಗಗನಯಾತ್ರಿಗಳು ಒಟ್ಟು 14 ದಿನಗಳ ಕಾಲ ಐಎಸ್ಎಸ್‌ನಲ್ಲಿ ತಂಗಲಿದ್ದಾರೆ. ಈ ವೇಳೆ ಅವರು ಬಾಹ್ಯಾಕಾಶ ಯಾನದ ಅನುಭವಗಳ ಜತೆಗೆ ತಮ್ಮ ತಮ್ಮ ದೇಶಕ್ಕೆ ಸಂಬಂಧ ಪಟ್ಟ ಒಟ್ಟು 60 ಪ್ರತ್ಯೇಕ ಪ್ರಯೋಗಗಳನ್ನು ನಡೆಸಿ ಬಳಿಕ ಭೂಮಿಗೆ ಮರಳಲಿದ್ದಾರೆ.

ಗಗನಯಾತ್ರಿಗಳ ಹಿನ್ನೆಲೆ

ಭಾರತದ ಶುಭಾಂಶು ಶುಕ್ಲಾ (ಪೈಲಟ್‌), ಅಮೆರಿಕದ ಪೆಗ್ಗಿ ವಿಟ್ಸನ್‌ (ಪೈಲಟ್‌), ಪೋಲೆಂಡ್‌ನ ಸ್ಲವೋಝ್‌ ಉಝ್‌ನಾಸ್ಕಿ (ವಿಜ್ಞಾನಿ, ಎಂಜಿನಿಯರ್‌) ಮತ್ತು ಹಂಗರಿಯ ಟಿಬರ್‌ ಕಪು (ಎಂಜಿನಿಯರ್‌) ಐಎಸ್‌ಎಸ್‌ಗೆ ತೆರಳುತ್ತಿದ್ದ, ಪೆಗ್ಗಿ ವಿಟ್ಸನ್‌ ಇದರಲ್ಲಿ ಮುಖ್ಯ ಪೈಲಟ್‌ ಆಗಿರಲಿದ್ದಾರೆ.

41 ವರ್ಷದ ಬಳಿಕದ ಯಾತ್ರೆ

1984ರ ಏ.3ರಂದು ರಷ್ಯಾದ ಸೋಯುಜ್‌ ಟಿ 11 ನೌಕೆಯಲ್ಲಿ ಭಾರತೀಯ ಗಗನಯಾತ್ರಿ ರಾಕೇಶ್‌ ಶರ್ಮಾ ಭಾರತದ ಮೊದಲ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಈ ವೇಳೆ ಅವರಿಗೆ ದೂರವಾಣಿ ಕರೆ ಮಾಡಿದ್ದ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಗಸದಿಂದ ಭಾರತ ಹೇಗೆ ಕಾಣುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಶರ್ಮಾ, ಸಾರೇ ಜಹಾಂ ಸೇ ಅಚ್ಚಾ ಎಂದಿದ್ದರು. ಶರ್ಮಾ 7 ದಿನ 21 ಗಂಟೆ 40 ನಿಮಿಷ ಅಂತರಿಕ್ಷದಲ್ಲಿದ್ದರು

ಭಾರತಕ್ಕೆ ಪ್ರಯಾಣದ ಲಾಭ ಏನು?

2027ರಲ್ಲಿ ಭಾರತ ಮಾನವ ಸಹಿತ ಗಗನಯಾನಕ್ಕೆ ಉದ್ದೇಶಿಸಿದೆ. ಈ ಯಾತ್ರೆಯ ಅನುಭವ 2027ರಲ್ಲಿ ಭಾರತದ ಯಾತ್ರಿಗಳಿಗೆ ನೆರವು ನೀಡಲಿದೆ. ಇದಲ್ಲದೆ ಆಹಾರ, ಪೋಷಕಾಂಶ ಮತ್ತು ಜೈವಿಕ ಪ್ರಯೋಗಗಳನ್ನು ಇದೀಗ ಶುಕ್ಲಾ ನಡೆಸಲಿದ್ದಾರೆ.

ಹೆಸರುಬೇಳೆ, ಕ್ಯಾರೆಟ್‌ ಹಲ್ವಾ!

ಶುಕ್ಲಾ ತಮ್ಮೊಂದಿಗೆ ಐಎಸ್‌ಎಸ್‌ಗೆ ಹೆಸರುಬೇಳೆ ಹಲ್ವಾ, ಕ್ಯಾರೆಟ್‌ ಹಲ್ವಾ, ಮಾವಿನ ಹಣ್ಣಿನ ಮತ್ತು ಅನ್ನವನ್ನು ಕೊಂಡೊಯ್ಯಲಿದ್ದು, ಸಹವರ್ತಿಗೊಂದಿಗೆ ಅದನ್ನು ಹಂಚಿಕೊಳ್ಳಲಿದ್ದಾರೆ. ಭಾರತೀಯ ತಿನಿಸು ಹೆಚ್ಚು ಖಾರ ಇರುವ ಕಾರಣ ಹೆಚ್ಚಿನ ವಸ್ತು ಕೊಂಡೊಯ್ಯುಲು ಅವಕಾಶ ನೀಡಿಲ್ಲ

ಭಾರತದ ಭವಿಷ್ಯದ ಕನಸುಗಳು

2027ರಲ್ಲಿ ಇಸ್ರೋ ಮಾನವ ಸಹಿತ ಗಗನಯಾನ ನಡೆಸುವ ಉದ್ದೇಶ ಹೊಂದಿದೆ. ಅದಾದ ಬಳಿಕ 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ನಿರ್ಮಾಣ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಮಾನವನನ್ನು ಕಳುಹಿಸುವ ಮಹತ್ವಾಕಾಂಕ್ಷೆಯ ಗುರಿ ರೂಪಿಸಿದೆ.

ಶುಕ್ಲಾ ಉಡ್ಡಯನಕ್ಕೆ 500 ಕೋಟಿ ರು.ವೆಚ್ಚ

ಐಎಸ್‌ಎಸ್‌ ನೌಕೆಗೆ ಪ್ರಯಾಣದ ಸೀಟು ಕಾದಿರಿಸಲು ಮತ್ತು ಅದಕ್ಕೆ ಅಗತ್ಯವಾದ ವಿವಿಧ ರೀತಿಯ ಕಠಿಣ ತರಬೇತಿಯನ್ನು ಕ್ಯಾ.ಶುಭಾಂಶು ಶುಕ್ಲಾ ಅವರಿಗೆ ನೀಡಲು ಭಾರತ ಅಂದಾಜು 500 ಕೋಟಿ ರು. ವ್ಯಯಿಸಿದೆ ಎನ್ನಲಾಗಿದೆ.

ಆಗಸದಲ್ಲಿ ಭಾರತದ 7 ಪ್ರಯೋಗ

14 ದಿನಗಳ ಐಎಸ್‌ಎಸ್‌ ವಾಸದ ಅವಧಿಯಲ್ಲಿ ಭಾರತದ ಶುಕ್ಲಾ ಒಟ್ಟು 7 ಪ್ರಯೋಗಗಳನ್ನು ನಡೆಸಲಿದ್ದಾರೆ. ಅವುಗಳೆಂದರೆ ಶೂನ್ಯ ಗುರುತ್ವಾಕರ್ಷಣೆಯಲ್ಲಿ 6 ಮಾದರಿಯ ಕೃಷಿ ಬೀಜಗಳು ಹೇಗೆ ಹೊಂದಿಕೊಳ್ಳುತ್ತವೆ? ಸೂಪರ್‌ಫುಡ್‌ ಎಂದೇ ಹೇಳಲಾಗುವ, ಭವಿಷ್ಯದಲ್ಲಿ ಬಾಹ್ಯಾಕಾಶ ಯಾನಿಗಳಿಗೆ ನೆರವಾಗಬಲ್ಲ ಮೈಕ್ರೋ ಆಲ್ಗೆ (ಸೂಕ್ಷ್ಮ ಪಾಚಿ) ಕುರಿತ ಪ್ರಯೋಗ, ಅತ್ಯಂತ ತೀಕ್ಷ್ಮ ಹವಾಮಾನಕ್ಕೂ ಒಗ್ಗಿಕೊಳ್ಳುವ ನೀರು ಕರಡಿ, ಸೂಕ್ಷ್ಮ ಪ್ರಾಣಿಗಳು ಹೇಗೆ ಹೊಂದಿಕೊಳ್ಳುತ್ತವೆ? ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸ್ನಾಯುಗಳಲ್ಲಿನ ಜೀವಕೋಶಗಳ ನಾಶ? ಕಣ್ಣಿನ ಚಲನವಲನಗಳ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪ್ರಭಾವವನ್ನು ಅರಿಯುವುದು ಸೇರಿದೆ.

ಕಾರ್ಗಿಲ್‌ ಯುದ್ಧ ನೋಡಿ ಶುಕ್ಲಾ ಸೇನೆಗೆ

ಉತ್ತರಪ್ರದೇಶದ ಲಖನೌ ಮೂಲದ ಶುಕ್ಲಾ, 1999ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಭಾರತದ ಕಾರ್ಗಿಲ್‌ ಯುದ್ಧದಿಂದ ಪ್ರಭಾವಿತರಾಗಿ ಸೇನೆ ಸೇರಿದರು. ಯುಪಿಎಸ್‌ಸಿಯಲ್ಲಿ ಎನ್‌ಡಿಎ ಪರೀಕ್ಷೆ ಉತ್ತೀರ್ಣರಾದ ಶುಕ್ಲಾ ಬಳಿಕ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮೆಯಿಂದ ಕಂಪ್ಯೂಟರ್ಸ್‌ ಸೈನ್ಸ್ನಲ್ಲಿ ಪದವಿ ಪಡೆದರು. ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ ಪದವಿ ಪಡೆದರು. 

ಬಳಿಕ ಸೇನೆಯಲ್ಲಿ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಸೇರಿದ ಶುಕ್ಲಾರನ್ನು ತರಬೇತಿ ಬಳಿಕ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್‌ ಆಗಿ ನೇಮಿಸಲಾಯಿತು. 2000 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಇವರು ಸುಖೋಯ್‌ 30 ಎಂಕೆಐ, ಮಿಗ್ಗ್ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌ 228, ಎನ್‌ 32 ವಿಮಾನ ಹಾರಿಸಿದ ಅನುಭವ ಹೊಂದಿದ್ಧಾರೆ. 2019ರಲ್ಲಿ ಶುಕ್ಲಾ ಸೇರಿದಂತೆ ಹಲವರನ್ನು ಗಗನಯಾತ್ರಿ ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. 2020ರಲ್ಲಿ ಅಂತಿಮ ನಾಲ್ವರ ಪಟ್ಟಿಯಲ್ಲಿ ಸ್ಥಾನ ಪಡೆದ ಶುಕ್ಲಾ ಹೆಸರನ್ನು, ಐಎಸ್‌ಎಸ್‌ ಪ್ರಯಾಣದ ವ್ಯಕ್ತಿ ಎಂದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.