ಭಾರತ- ಚೀನಾ ಸೈನಿಕರ ಜಮಾವಣೆ: ಗಡಿಯಲ್ಲಿ ಯುದ್ಧಾಂತಕ ತೀವ್ರ!
ಗಡಿಯಲ್ಲಿ ಯುದ್ಧಾಂತಕ ತೀವ್ರ| ಕೆಲವೇ 100 ಮೀಟರ್ ಅಂತರದಲ್ಲಿ ಭಾರತ- ಚೀನಾ ಸೈನಿಕರ ಜಮಾವಣೆ| ಬೇಲಿ ದಾಟಿ ಬಂದರೆ ಸುಮ್ಮನಂತೂ ಬಿಡಲ್ಲ: ಭಾರತ ಕಠೋರ ಎಚ್ಚರಿಕೆ
ನವದೆಹಲಿ(ಸೆ.10): ಭಾರತದ ಭೂಭಾಗ ಅತಿಕ್ರಮಿಸುವ ಗುರಿಯೊಂದಿಗೆ 45 ವರ್ಷಗಳ ಬಳಿಕ ಚೀನಾ ಯೋಧರು ಗುಂಡು ಹಾರಿಸಿ ಬೆದರಿಕೆಯೊಡ್ಡಿದ ನಂತರ ಗಡಿಯಲ್ಲಿ ನಿರ್ಮಾಣವಾಗಿದ್ದ ತ್ವೇಷಮಯ ಪರಿಸ್ಥಿತಿ ಮತ್ತಷ್ಟುವಿಕೋಪಕ್ಕೆ ಹೋಗಿದೆ. ಭಾರತ ಹಾಗೂ ಚೀನಾ ಯೋಧರು ಕೆಲವೇ 100 ಮೀಟರ್‌ಗಳ ಅಂತರದಲ್ಲಿ ಮುಖಾಮುಖಿಯಾಗಿ ಜಮಾವಣೆಯಾಗಿದ್ದು, ‘ಏನು ಬೇಕಾದರೂ’ ಆಗಬಹುದು ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಮತ್ತೊಮ್ಮೆ ಏನಾದರೂ ಚೀನಾ ದುಸ್ಸಾಹಸಕ್ಕೆ ಇಳಿದರೆ ಅದು ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಎರಡೂ ದೇಶಗಳ ನಡುವೆ ಯುದ್ಧಕ್ಕೆ ಎಡೆ ಮಾಡಿಕೊಡಬಹುದು ಎಂಬ ಆತಂಕ ಇನ್ನಷ್ಟುಹೆಚ್ಚಾಗಿದೆ.
ಇದಕ್ಕೆ ಇಂಬು ನೀಡುವಂತೆ, ಎತ್ತರದ ಪ್ರದೇಶಗಳಲ್ಲಿ ಭಾರತೀಯ ಯೋಧರು ಮುಳ್ಳು ತಂತಿಯ ಬೇಲಿ ನಿರ್ಮಿಸಿದ್ದಾರೆ. ಇದನ್ನು ದಾಟಿ ಏನಾದರೂ ಒಳಬಂದರೆ ಪ್ರತೀಕಾರಕ್ಕೆ ಇಳಿಯಬೇಕಾಗುತ್ತದೆ ಎಂದು ಭಾರತ ಕಠೋರ ಎಚ್ಚರಿಕೆ ನೀಡಿದೆ. ತನ್ನ ಧಮಕಿಗೆ ಭಾರತ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಕಳವಳಗೊಂಡಿರುವ ಚೀನಾ, ಗಡಿಯ ಸನಿಹಕ್ಕೆ 150 ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ತಂದು ಗೊಡ್ಡು ಬೆದರಿಕೆ ಪ್ರಯತ್ನಗಳನ್ನು ಮುಂದುವರಿಸಿದೆ. ಅಲ್ಲದೆ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ 5ರಿಂದ 7 ಸಾವಿರ ಯೋಧರನ್ನು ಜಮಾವಣೆ ಮಾಡಿದೆ.
‘ಪರಿಸ್ಥಿತಿ ಗಂಭೀರವಾಗಿದೆ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿನ ಕನಿಷ್ಠ 4 ಸ್ಥಳಗಳಲ್ಲಿ ಭಾರತ- ಚೀನಾ ಯೋಧರು ಮುಖಾಮುಖಿಯಾಗಿ ನಿಂತಿದ್ದಾರೆ. ಎರಡೂ ಸೇನೆಗಳು ತಮ್ಮ ತಮ್ಮ ನೈಜ ಗಡಿ ನಿಯಂತ್ರಣ ರೇಖೆಯ ಒಳಗೇ ಇದ್ದರೂ, ಅಂತರ ಮಾತ್ರ ಕೆಲವೇ 100 ಮೀಟರ್‌ಗಳಷ್ಟಿದೆ. ಉದಾಹರಣೆಗೆ ರೇಜಾಂಗ್ ಲಾ ಮೌಂಟೇನ್ ಪಾಸ್‌ನಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವಣ ಅಂತರ ಕೇವಲ 200 ಮೀಟರ್‌ನಷ್ಟಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತದ ಸಂಪೂರ್ಣ ನಿಯಂತ್ರಣ:
ಪ್ಯಾಂಗಾಂಗ್ ಸರೋವರದಲ್ಲಿ 8 ಬೆಟ್ಟಗಳು ಇವೆ. ಈ ಪೈಕಿ ಕೆಲವು ಬೆಟ್ಟಗಳು ಚೀನಾದ ನಿಯಂತ್ರಣದಲ್ಲಿ ಇದ್ದವು. ಆದರೆ ಭಾರತ ತನ್ನ ಭೂಭಾಗದಲ್ಲಿನ ಬೆಟ್ಟಗಳಿಂದ ಚೀನಾ ಯೋಧರನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿದ್ದು, ಎತ್ತರದ ಪ್ರದೇಶಗಳಲ್ಲಿ ತನ್ನ ಯೋಧರನ್ನು ಜಮಾವಣೆ ಮಾಡಿದೆ. ಇದು ವ್ಯೂಹಾತ್ಮಕವಾಗಿ ಮಹತ್ವದ ಸ್ಥಳಗಳಾಗಿರುವುದರಿಂದ ಆ ಪ್ರದೇಶಗಳನ್ನು ಮರುವಶ ಪಡೆಯಲು ಚೀನಾ ಪ್ರಯತ್ನಿಸುತ್ತಿದೆ. ಭಾರತ ತನ್ನ ನಿಯಂತ್ರಣದಲ್ಲಿರುವ ಬೆಟ್ಟಗಳ ಮೇಲೆ ಮುಳ್ಳು ತಂತಿಯ ಬೇಲಿಯನ್ನು ಅಳವಡಿಕೆ ಮಾಡಿದೆ. ಇದನ್ನು ದಾಟಿ ಏನಾದರೂ ಚೀನಾ ಯೋಧರು ಬಂದರೆ ಪ್ರತಿ ದಾಳಿ ನಡೆಸಲೂ ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.
ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿನ ಬೆಟ್ಟಗಳ ಎತ್ತರದ ಪ್ರದೇಶ ವಶಕ್ಕೆ ಚೀನಾ ಕಳೆದ ಎರಡು ವಾರಗಳಿಂದ ಹಲವು ಬಾರಿ ಪ್ರಯತ್ನ ಮಾಡಿದೆ. ಆದರೆ ಸಫಲವಾಗಿಲ್ಲ. ಹೀಗಾಗಿ ಹತಾಶಗೊಂಡ ಚೀನಿ ಯೋಧರು ಸೋಮವಾರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ದಕ್ಷಿಣ ದಂಡೆಯಲ್ಲಿ ಚೀನಾ 5ರಿಂದ 7 ಸಾವಿರ ಯೋಧರನ್ನು ಜಮಾವಣೆ ಮಾಡಿದೆ. ಉತ್ತರ ದಂಡೆಯಲ್ಲೂ ಸಂಘರ್ಷ ನಡೆಯುತ್ತಿದೆಯಾದರೂ, ಶಾಂತ ಸ್ಥಿತಿ ನೆಲೆಸಿದ್ದ ದಕ್ಷಿಣ ದಂಡೆಯಲ್ಲಿ ನಡೆಯುತ್ತಿರುವ ಸಂಘರ್ಷ ಹೆಚ್ಚು ಗಮನಸೆಳೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಪ್ಯಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆ ಎರಡರ ಎತ್ತರದ ಸ್ಥಳಗಳೆಲ್ಲಾ ಭಾರತದ ನಿಯಂತ್ರಣದಲ್ಲಿರುವುದು ಚೀನಾಕ್ಕೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗಿದೆ.