ನವದೆಹಲಿ(ಡಿ.20): ಭಾರತದಲ್ಲಿ 2021ರಲ್ಲಿ ಕೊರೋನಾ ವೈರಸ್‌ ತಡೆಯುವ ಲಸಿಕೆ ವಿತರಿಸಲು ಬರೋಬ್ಬರಿ 80,000 ಕೋಟಿ ರು.ಗಳ ಬಂಡವಾಳ ಬೇಕಾಗುತ್ತದೆ ಎಂದು ಜಗತ್ತಿನ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಹೇಳಿದೆ.

ಲಸಿಕೆಗೆ ಸರ್ಕಾರದ ಔಷಧ ನಿಯಂತ್ರಕರಿಂದ ಒಪ್ಪಿಗೆ ದೊರೆತ ಕೂಡಲೇ ವಿತರಣೆ ಆರಂಭಿಸಬೇಕಾಗುತ್ತದೆ. ಇಡೀ ದೇಶಕ್ಕೆ ಲಸಿಕೆ ನೀಡುವಂತಹ ಬೃಹತ್‌ ಕಾರ್ಯಕ್ಕೆ ಬೃಹತ್‌ ಆರ್ಥಿಕ ನೆರವು ಬೇಕಾಗುತ್ತದೆ. ಇದಕ್ಕಾಗಿ ಮುಂದಿನ ಒಂದು ವರ್ಷಕ್ಕೆ ಭಾರತ 80,000 ಕೋಟಿ ರು.ಗಳನ್ನು ಸಿದ್ಧವಾಗಿಟ್ಟುಕೊಳ್ಳುವ ಅಗತ್ಯವಿದೆ. ಲಸಿಕೆಯನ್ನು ಸುರಕ್ಷಿತವಾಗಿಡಲು ವಿದ್ಯುತ್‌ ಪೂರೈಕೆ ಕೂಡ ಸರಿಯಾಗಿರಬೇಕು. ಮುಖ್ಯವಾಗಿ ಲಸಿಕೆಗಳನ್ನು ಹಳ್ಳಿಗಾಡಿನಲ್ಲಿ ಶೇಖರಿಸುವಾಗ ವಿದ್ಯುತ್‌ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದೂ ತಿಳಿಸಿದೆ.

ಉದ್ದಿಮೆಗಳ ಒಕ್ಕೂಟ ನ್ಯಾಸ್ಕಾಂ ಶನಿವಾರ ಆಯೋಜಿಸಿದ್ದ ‘ಲಸಿಕೆ ವಿತರಣೆ’ ಕುರಿತ ವೆಬಿನಾರ್‌ನಲ್ಲಿ ಸೀರಂ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ

ಸತೀಶ್‌ ರೇವತ್ಕರ್‌ ಈ ಕುರಿತು ಮಾಹಿತಿ ಹಂಚಿಕೊಂಡರು. ಸದ್ಯ ಸೀರಂ ಸಂಸ್ಥೆಯಲ್ಲಿ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದು, ಅದರ ತುರ್ತು ವಿತರಣೆಗೆ ಸರ್ಕಾರದಿಂದ ಅನುಮತಿ ಕೋರಲಾಗಿದೆ. ಅದೇ ರೀತಿ, ಭಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಹಾಗೂ ಅಮೆರಿಕದ ಫೈಝರ್‌ ಲಸಿಕೆಗಳ ತುರ್ತು ವಿತರಣೆಗೂ ಅನುಮತಿ ಕೇಳಲಾಗಿದೆ. ಸೀರಂ ಹಾಗೂ ಭಾರತ್‌ ಬಯೋಟೆಕ್‌ನಿಂದ ಲಸಿಕೆಗಳ ಪ್ರಯೋಗಕ್ಕೆ ಸಂಬಂಧಿಸಿದ ಇನ್ನಷ್ಟುಅಂಕಿಅಂಶಗಳನ್ನು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಕೇಳಿದೆ. ಯಾವುದೇ ಕ್ಷಣದಲ್ಲಿ ಈ ಲಸಿಕೆಗಳ ವಿತರಣೆಗೆ ಅನುಮತಿ ದೊರೆಯುವ ಸಾಧ್ಯತೆಯಿದೆ.

ಡೂಪ್ಲಿಕೇಟ್‌ ಲಸಿಕೆ ಬಗ್ಗೆ ಎಚ್ಚರ

ಯಾವುದೇ ಲಸಿಕೆಗೂ ನಕಲಿ ಲಸಿಕೆಗಳನ್ನು ತಯಾರಿಸಿ ಬಿಡುಗಡೆ ಮಾಡುವ ದೊಡ್ಡ ಜಾಲವೇ ಇರುತ್ತದೆ. ಅದರಲ್ಲೂ ಕೊರೋನಾ ಲಸಿಕೆಗೆ ಬಹಳ ಬೇಡಿಕೆ ಇರುವುದರಿಂದ ಖಂಡಿತ ಇದರ ನಕಲಿ ಲಸಿಕೆಗಳನ್ನು ತಯಾರಿಸಿ ಹಣ ಗಳಿಸುವ ದಂಧೆ ಶುರುವಾಗಲಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸೀರಂ ಸಂಸ್ಥೆ ಹೇಳಿದೆ.