ನವದೆಹಲಿ(ಏ.30): ಎರಡನೇ ಹಂತದ ಲಾಕ್‌ಡೌನ್‌ ಮುಕ್ತಾಯಗೊಳ್ಳುವ ದಿನ ಸಮೀಪಿಸುತ್ತಿರುವಾಗಲೇ ಕೊರೋನಾ ವೈರಸ್‌ ದೇಶದಲ್ಲಿ ಉಗ್ರ ಪ್ರತಾಪ ತೋರಿದೆ. ಮಂಗಳವಾರ ಒಂದೇ ದಿನ ಈ ವೈರಾಣುವಿಗೆ ದಾಖಲೆಯ 75 ಮಂದಿ ಬಲಿಯಾಗಿದ್ದರೆ, 2114 ಮಂದಿಗೆ ಸೋಂಕು ಹರಡಿದೆ. ಒಂದು ದಿನದಲ್ಲಿ ಇಷ್ಟುಮಂದಿಯಲ್ಲಿ ವೈರಸ್‌ ಕಾಣಿಸಿಕೊಂಡಿದ್ದು ಕೂಡ ದಾಖಲೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 1000ದ ಗಡಿ ದಾಟಿದೆ.

ಬುಧವಾರ ಕೂಡ 59 ಮಂದಿ ಬಲಿಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 1064ಕ್ಕೆ ಹೆಚ್ಚಳವಾಗಿದೆ. 1421 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವೈರಸ್‌ಪೀಡಿತರ ಸಂಖ್ಯೆ 32657ಕ್ಕೇರಿಕೆಯಾಗಿದೆ. ಒಟ್ಟಾರೆ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಅವಧಿಯಲ್ಲಿ 3535 ಮಂದಿಯಲ್ಲಿ ವೈರಸ್‌ ಕಾಣಿಸಿಕೊಂಡಿದ್ದರೆ, ಒಟ್ಟಾರೆ 134 ಮಂದಿ ಸಾವಿಗೀಡಾಗಿದ್ದಾರೆ.

ಕೊರೋನಾತಂಕ: ರಾಜ್ಯದ 5 ಸಚಿವರಿಗೆ ಸೋಂಕು ಟೆಸ್ಟ್!

ಮಹಾರಾಷ್ಟ್ರದಲ್ಲಿ ಬುಧವಾರ ದಾಖಲೆಯ 32 ಮಂದಿ ಬಲಿಯಾಗಿದ್ದಾರೆ. 597 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದತ್ತ ಸಾಗುತ್ತಿದ್ದು, ಸದ್ಯ 9915 ಇದೆ. ಮಹಾರಾಷ್ಟ್ರದಲ್ಲಿ ಮೃತರಾದ 32 ಮಂದಿಯ ಪೈಕಿ ಮುಂಬೈನವರೇ 26 ಜನರಿದ್ದಾರೆ. ಮತ್ತೊಂದೆಡೆ ಮಂಗಳವಾರ ಗುಜರಾತ್‌ನಲ್ಲಿ 19 ಮಂದಿ ಬಲಿಯಾಗಿದ್ದರು. ಬುಧವಾರ ಕೂಡ 16 ಮಂದಿ ಸಾವಿಗೀಡಾಗಿದ್ದರು, ಒಟ್ಟು ಮೃತರ ಸಂಖ್ಯೆ 197ಕ್ಕೇರಿಕೆಯಾಗಿದೆ.

ರಾಜ್ಯದಲ್ಲಿ ಮತ್ತೊಂದು ಸಾವು

ತುಮಕೂರಿನ ವ್ಯಕ್ಯಿಯೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಏ.26ರಂದು ಮೃತಪಟ್ಟಿದ್ದ ಇವರ ಪರೀಕ್ಷೆ ವರದಿ ಬುಧವಾರ ಬಂದಿದ್ದು ಸೋಂಕು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಮೃತರ ಸಂಖ್ಯೆ 21ಕ್ಕೆ ಏರಿದೆ.