3 ದಿನದಿಂದ ಇಳಿಯುತ್ತಿದ್ದ ಕೋವಿಡ್‌ ಪ್ರಕರಣ ಸಂಖ್ಯೆ ಬುಧವಾರ ಭಾರೀ ಪ್ರಮಾಣ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 2,82,970 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

ನವದೆಹಲಿ (ಜ.20): 3 ದಿನದಿಂದ ಇಳಿಯುತ್ತಿದ್ದ ಕೋವಿಡ್‌ ಪ್ರಕರಣ (Covid19 Cases) ಸಂಖ್ಯೆ ಬುಧವಾರ ಭಾರೀ ಪ್ರಮಾಣ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 2,82,970 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 8 ತಿಂಗಳ ಗರಿಷ್ಠ. ಅಲ್ಲದೇ, ಇದು ಮಂಗಳವಾರಕ್ಕಿಂತ ಶೇ.18ರಷ್ಟುಅಧಿಕ. 

ಇದೇ ಅವಧಿಯಲ್ಲಿ 441 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 18.31 ಲಕ್ಷಕ್ಕೆ ಹೆಚ್ಚಿದೆ. ಇದು ಕಳೆದ 232 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ಚೇತರಿಕೆ ಪ್ರಮಾಣ ಶೇ.93.88ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.15.13ಕ್ಕೆ ಏರಿಕೆಯಾಗಿದೆ. 

ವಾರದ ಪಾಸಿಟಿವಿಟಿ ದರ ಶೇ.15.53ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 3.79 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,87,202ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.55 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 158.88 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

70 ಒಮಿಕ್ರೋನ್‌ ಕೇಸ್‌ ಪತ್ತೆ: ಬುಧವಾರ ದೇಶದಲ್ಲಿ 70 ಒಮಿಕ್ರೋನ್‌ ಪ್ರಕರಣಗಳು (Omicron Cases) ಪತ್ತೆಯಾಗಿವೆ. ತನ್ಮೂಲಕ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 8961ಕ್ಕೆ ಹೆಚ್ಚಳವಾಗಿದೆ.

Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಒಟ್ಟಿಗೆ ಎರಡು ಪ್ರತ್ಯೇಕ ಕೋವಿಡ್‌ ಅಲೆ: ಒಮಿಕ್ರೋನ್‌ (Omicron) ರೂಪಾಂತರಿ ಕೊರೋನಾ ವೈರಸ್‌ನ (Coronavirus) ಗುಣಲಕ್ಷಣಗಳು, ಸೋಂಕಿನ ಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿರುವ ಹೊತ್ತಿನಲ್ಲೇ, ಇದುವರೆಗೆ ಪತ್ತೆಯಾದ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ಗೆ ನಂಟಿಲ್ಲ. ಇದೊಂದು ಪ್ರತ್ಯೇಕ ಪ್ರಭೇದ. ಹೀಗಾಗಿ ಭಾರತದಲ್ಲೀಗ ಸಮಾನಾಂತರಾವಾಗಿ ಎರಡು ಕೋವಿಡ್‌ ಅಲೆ ಕಾಣಿಸಿಕೊಂಡಿದೆ ಎಂದು ಹಿರಿಯ ವೈದ್ಯರೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಜಿ ಮುಖ್ಯಸ್ಥ, ಹಿರಿಯ ವೈರಾಣು ತಜ್ಞ ಡಾ. ಟಿ.ಜಾಕೋಬ್‌ ಜಾನ್‌ (T Jacob John) ಮಾತನಾಡಿ, ‘ವುಹಾನ್‌ನಲ್ಲಿ ಮೊತ್ತ ಮೊದಲಿಗೆ ಸೋಂಕಿಗೆ ಕಾರಣವಾದ ವುಹಾನ್‌-ಡಿ614ಜಿ, ನಂತರ ಕಾಣಿಸಿಕೊಂಡ ಆಲ್ಪಾ, ಬೀಟಾ, ಗಾಮಾ, ಡೆಲ್ಟಾ, ಕಪ್ಪಾ, ಮು ಸೇರಿದಂತೆ ಯಾವುದೇ ರೂಪಾಂತರಿ ಜೊತೆಗೂ ಒಮಿಕ್ರೋನ್‌ ಸಂಬಂಧ ಹೊಂದಿಲ್ಲ. ಇದು ಸಂಪೂರ್ಣವಾಗಿ ಬೇರೆ ಮೂಲದಿಂದ ಉಗಮವಾಗಿರುವ ವೈರಸ್‌’ ಎಂದು ಹೇಳಿದ್ದಾರೆ.

Coronavirus: ಒಮಿಕ್ರೋನ್‌, ಡೆಲ್ಟಾಗೆ ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

‘ಕೋವಿಡ್‌ ಸಾಂಕ್ರಾಮಿಕದ ಬೆಳವಣಿಗೆಯ ಹಾದಿಯಲ್ಲಿ ಕಂಡುಬಂದ ಯಾವುದೇ ವೈರಸ್‌ ಜೊತೆಗೆ ಇದು ನಂಟು ಹೊಂದಿಲ್ಲ. ಹೀಗಾಗಿ ನಾವೀಗ ಭಾರತದಲ್ಲಿ ಡೆಲ್ಟಾಮತ್ತು ಒಮಿಕ್ರೋನ್‌ ಎಂಬ ಎರಡು ಪ್ರತ್ಯೇಕ ಕೋವಿಡ್‌ ಅಲೆಯನ್ನು ಎದುರಿಸುತ್ತಿದ್ದೇವೆ ಎಂಬ ಚಿಂತನೆಯತ್ತ ಸಾಗಬೇಕಿದೆ’ ಎಂದು ಜಾನ್‌ ಹೇಳಿದ್ದಾರೆ. ‘ಸಾಂಪ್ರದಾಯಿಕ ಕೋವಿಡ್‌ ವೈರಸ್‌ಗಳಿಗೆ ಹೋಲಿಸಿದರೆ ಒಮಿಕ್ರೋನ್‌ ಸಾಕಷ್ಟುಭಿನ್ನವಾಗಿದೆ. ಹೀಗಾಗಿಯೇ ಒಮಿಕ್ರೋನ್‌ ಅನ್ನು ಕೇವಲ ಜಿನೋಮ್‌ ಸೀಕ್ವೆನ್ಸಿಂಗ್‌ ಮೂಲಕ ಮಾತ್ರವೇ ಪತ್ತೆ ಹಚ್ಚಬಹುದು. ಇತರೆ ವೈರಸ್‌ ಶ್ವಾಸಕೋಶಕ್ಕೆ ತೊಂದರೆ ಮೂಡಿಸಿದರೆ, ಒಮಿಕ್ರೋನ್‌ ಕೇವಲ ಗಂಟಲು ಭಾಗದಲ್ಲಿ ಇರುತ್ತದೆ’ ಎಂದು ಜಾನ್‌ ಹೇಳಿದ್ದಾರೆ.