ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಇದರ ನಡುವೆ ಕೋವಿಡ್ ಆತಂಕವೂ ಹಚ್ಚಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 841 ಕೋವಿಡ್ ಪ್ರಕರಣ ದಾಖಲಾಗಿದೆ. 227 ದಿನಗಳ ಬಳಿಕ ದಾಖಲಾದ ಗರಿಷ್ಠ ಕೋವಿಡ್ ಸಂಖ್ಯೆ ಇದಾಗಿದೆ.
ನವದೆಹಲಿ(ಡಿ.31) ಹೊಸ ವರ್ಷವನ್ನು ಅದ್ಧೂರಿ ಆಚರಿಲಾಗುತ್ತಿದೆ. ಪಾರ್ಟಿ, ಡಿಜೆ ಮ್ಯೂಸಿಕ್, ಪಟಾಕಿಗಳ ಚಿತ್ತಾರ ಎಲ್ಲೆಡೆ ಕಾಣುತ್ತಿದೆ. ಇದರ ನಡುವೆ ಕೋವಿಡ್ ಕೂಡ ಅಬ್ಬರಿಸುತ್ತಿದೆ. 227 ದಿನಗಳ ಬಳಿಕ ಭಾರತದಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 841 ಕೋವಿಡ್ ಪ್ರಕರಣ ದಾಖಲಾಗಿದೆ. ಕೇರಳ, ಕರ್ನಾಟಕ ಹಾಗೂ ಬಿಹಾರದಲ್ಲಿ ತಲಾ ಒಂದರಂತೆ ಮೂರು ಮುಂದಿ ಕೋವಿಡ್ ವೈರಸ್‌ಗೆ ಬಲಿಯಾಗಿದ್ದಾರೆ.
2023ರ ಮೇ 19 ರಂದು ಭಾರತದಲ್ಲಿ 865 ಪ್ರಕರಣ ದಾಲಾಗಿತ್ತು. ಆದರೆ ಅಂದು ಇಳಿಮುಖವಾಗಿದ್ದ ಪ್ರಕರಣ ಇದೀಗ ಮತ್ತೆ ಏರಿಕೆಯಾಗುತ್ತಿದೆ. ಡಿಸೆಂಬರ್ 5 ರಿಂದ ಭಾರತದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ದೇಶದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 743 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿತ್ತು. ಒಂದೇ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.ಶನಿವಾರ ಕರ್ನಾಟಕದಲ್ಲಿ 2 ಸೇರಿ ದೇಶದಲ್ಲಿ 7 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 3997ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದಲ್ಲಿ ಈವರೆಗೂ 4.50 ಕೋಟಿ ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 4.44 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.33 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಗುಣಮುಖರ ಪ್ರಮಾಣವು ಶೇ.98.81ರಷ್ಟು ದಾಖಲಾಗಿದ್ದರೆ, ಮರಣದರವು ಶೇ.1.18ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 19 JN.1 ಕೋವಿಡ್ ಪ್ರಕರಣ ದಾಖಲಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ JN.1 ಪ್ರಕರಣ 29ಕ್ಕೆ ಏರಿಕೆಯಾಗಿದೆ. ಪುಣೆಯಲ್ಲಿ 15 ಪ್ರಕರಣ ದಾಖಲಾಗಿದೆ.
ದೇಶದಲ್ಲಿ ಡಿಸೆಂಬರ್ 29ಕ್ಕೆ ಕೋವಿಡ್ ರೂಪಾಂತರಿ ಜೆಎನ್.1ನ 172 ಪ್ರಕರಣಗಳು ಪತ್ತೆಯಾಗಿತ್ತು. ಈ ಪೈಕಿ ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು, 83 ಕೇಸುಗಳು ಪತ್ತೆಯಾಗಿದ್ದರೆ, ಬಳಿಕ ಗುಜರಾತ್ 34 ಪ್ರಕರಣಗಳ ಮೂಲಕ 2ನೇ ಸ್ಥಾನದಲ್ಲಿದೆ. ಇತ್ತೀಚೆಗೆ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆಯಾದರೂ ಜೆಎನ್.1 ಉಪತಳಿ ಮಾತ್ರ 9 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿದೆ. ಈ ಪೈಕಿ ಕೇರಳದಲ್ಲಿ 83, ಗುಜರಾತ್ 34, ಗೋವಾ 18, ಕರ್ನಾಟಕ 8, ಮಹಾರಾಷ್ಟ್ರ 7, ರಾಜಸ್ಥಾನ 5, ತಮಿಳು ನಾಡಿನಲ್ಲಿ 4, ತೆಲಂಗಾಣದಲ್ಲಿ 2 ಮತ್ತು ದೆಹಲಿಯಲ್ಲಿ 1 ಪ್ರಕರಣಗಳಿತ್ತು.
