ಕೊರೋನಾ ಹೊಸ ಕೇಸ್ 5 ತಿಂಗಳ ಕನಿಷ್ಠಕ್ಕೆ| ನಿನ್ನೆ ದೇಶದಲ್ಲಿ ಕೇವಲ 22000 ಪ್ರಕರಣ ದಾಖಲು| ರೋಗದಿಂದ ಚೇತರಿಕೆ ಪ್ರಮಾಣ ಶೇ.95ಕ್ಕೆ ಹೆಚ್ಚಳ| 4-5 ದಿನದಲ್ಲಿ 1 ಕೋಟಿಗೆ ಸೋಂಕಿತರು ಏರಿಕೆ?
ನವದೆಹಲಿ(ಡಿ.16): ಜನವರಿ- ಫೆಬ್ರವರಿಯಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ವಿಶ್ಲೇಷಣೆಗಳ ನಡುವೆಯೇ, ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಮಂಗಳವಾರ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಮಂಗಳವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 22,065 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ದಿನವೊಂದರಲ್ಲಿ ಇಷ್ಟುಮಂದಿಗೆ ವೈರಸ್ ಸೋಂಕು ಕಂಡುಬರುತ್ತಿರುವುದು 161 ದಿನಗಳ ಬಳಿಕ ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ದಿನವೊಂದರಲ್ಲಿ ದೇಶದಲ್ಲಿ 23 ಸಾವಿರಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗುತ್ತಿರುವುದು ಐದು ತಿಂಗಳ ಬಳಿಕ ಇದೇ ಮೊದಲು. ಜು.7ರಂದು 22,252 ಸೋಂಕಿತರು ಕಂಡುಬಂದಿದ್ದರು. ಈಗ ಅದಕ್ಕಿಂತಲೂ ಕಡಿಮೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 99,06,165ಕ್ಕೆ ಹೆಚ್ಚಳಗೊಂಡಿದೆ. ಸೋಂಕು ಇದೇ ಗತಿಯಲ್ಲಿ ಪತ್ತೆಯಾದರೆ ಮುಂದಿನ 4-5 ದಿನಗಳಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ಗಡಿ ದಾಟುವ ಸಾಧ್ಯತೆ ಇದೆ.
ಈ ನಡುವೆ, ದೇಶದಲ್ಲಿ ಮಂಗಳವಾರ ಬೆಳಗ್ಗೆ 8ರವರೆಗಿನ ಅವಧಿಯಲ್ಲಿ 354 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಕೊರೋನಾಗೆ ಈವರೆಗೆ ಬಲಿಯಾದವರ ಸಂಖ್ಯೆ 1,43,709ಕ್ಕೆ ಏರಿಕೆಯಾಗಿದೆ. ಸತತ 8ನೇ ದಿನವೂ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 4 ಲಕ್ಷಕ್ಕಿಂತ (3.4 ಲಕ್ಷ) ಕಡಿಮೆ ಇದೆ. ಈವರೆಗೆ ರೋಗದಿಂದ 94,22,636 ಮಂದಿ ಚೇತರಿಸಿಕೊಂಡಿದ್ದು, ಗುಣಮುಖವಾಗುವ ಪ್ರಮಾಣ ಶೇ.95.12ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ವಿಶ್ವದಲ್ಲಿ ಅತ್ಯಧಿಕ ಚೇತರಿಕೆ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದೆನಿಸಿಕೊಂಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 16, 2020, 8:28 AM IST