Asianet Suvarna News Asianet Suvarna News

ಲೋಕಸಭಾ ಚುನಾವಣೆ : ಮೋದಿ ವಿರುದ್ಧ ದಿಲ್ಲಿಯಲ್ಲಿ ಇಂಡಿಯಾ ಕೂಟ ರಣಕಹಳೆ

ಲೋಕಸಭಾ ಚುನಾವಣೆ ಕಾವೇರಿರುವ ನಡುವೆಯೇ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಇಂಡಿಯಾ ಮೈತ್ರಿಕೂಟದ 27 ರಾಜಕೀಯ ಪಕ್ಷಗಳು ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಬೇಕು.

INDIA party against BJPs Narendra Modi At Delhi gvd
Author
First Published Apr 1, 2024, 5:38 AM IST

ನವದೆಹಲಿ (ಏ.01): ಲೋಕಸಭಾ ಚುನಾವಣೆ ಕಾವೇರಿರುವ ನಡುವೆಯೇ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಇಂಡಿಯಾ ಮೈತ್ರಿಕೂಟದ 27 ರಾಜಕೀಯ ಪಕ್ಷಗಳು ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಬೇಕು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಇಂಡಿಯಾ ಕೂಟವನ್ನು ಆಯ್ಕೆ ಮಾಡಿ ಸಂವಿಧಾನ ರಕ್ಷಿಸಬೇಕು ಎಂದು ಕರೆಕೊಟ್ಟಿವೆ. ಅಲ್ಲದೆ ಚುನಾವಣಾ ಆಯೋಗ ಕೂಡಲೇ ಮಧ್ಯಪ್ರವೇಶಿಸಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿವೆ.

ಕಳೆದ ಮಾ.17ರಂದು ಮುಂಬೈನಲ್ಲಿ ಬೃಹತ್‌ ಸಮಾವೇಶದ ಮೂಲಕ ಲೋಕಸಭಾ ಪ್ರಚಾರಕ್ಕೆ ಚಾಲನೆ ನೀಡಿದ್ದ ಮೈತ್ರಿಕೂಟದ ಪಕ್ಷಗಳು, ಭಾನುವಾರ ನವದೆಹಲಿ ರಾಮ್‌ಲೀಲಾ ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದವು. ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷದಂತಿವೆ. ಅದರ ರುಚಿ ನೋಡಬೇಡಿ. ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು. ಇದು ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆ. 

ದಿಲ್ಲಿಯಲ್ಲಿ ಇಂಡಿಯಾ ಕೂಟದ ಶಕ್ತಿ ಪ್ರದರ್ಶನ: ಲೋಕತಂತ್ರ ಬಚಾವೋ ರ್‍ಯಾಲಿ

ಇಬ್ಬರು ಸಿಎಂಗಳ ಬಂಧನದಿಂದ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆ ಸಾಬೀತಾಗಿದೆ. ನಾವು ಒಗ್ಗಟ್ಟಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯ, ಪರಸ್ಪರ ಹೊಡೆದಾಡಿಕೊಂಡರೆ ಯಶಸ್ವಿಯಾಗಲ್ಲ’ ಎಂದು ಹೇಳಿದರು. ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್‌ಗೆ ಯತ್ನಿಸುತ್ತಿದ್ದಾರೆ. ಒಂದು ವೇಳೆ ಈ ಸಾಹಸದ ಮೂಲಕ ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ಅವರು ಸಂವಿಧಾನವನ್ನು ಬದಲಾಯಿಸಲಿದ್ದಾರೆ, ಬಳಿಕ ದೇಶದ ಕಥೆ ಮುಗಿದು ಹೋಗಲಿದೆ’ ಎಂದು ಆರೋಪಿಸಿದರು.

ಅಲ್ಲದೆ, ಇದು ಸಾಮಾನ್ಯ ಚುನಾವಣೆಯಲ್ಲ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ. ಇಲ್ಲಿ ಅಂಪೈರ್‌ ಮತ್ತು ಕ್ಯಾಪ್ಟನ್‌ಗಳ ಮೇಲೆ ಒತ್ತಡ ಹೇರಿ ಆಟಗಾರರನ್ನು ಖರೀದಿಸಿ ಪಂದ್ಯವನ್ನು ಗೆಲ್ಲುವ ಯತ್ನ ಮಾಡಲಾಗುತ್ತಿದೆ. ಕ್ರಿಕೆಟ್‌ನಲ್ಲಿ ಇದನ್ನು ಮ್ಯಾಚ್‌ ಫಿಕ್ಸಿಂಗ್‌ ಎನ್ನಲಾಗುತ್ತದೆ. ಬಿಜೆಪಿ 400 ಸ್ಥಾನ ಗೆಲ್ಲುವ ಮಾತುಗಳನ್ನು ಆಡುತ್ತಿದೆ. ಆದರೆ ಇವಿಎಂ ಮತ್ತು ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ ಹೋದಲ್ಲಿ ಅವರು 180 ಸ್ಥಾನ ಕೂಡಾ ಗೆಲ್ಲಲಾರರು ಎಂದು ಬಿಜೆಪಿ ವಿರುದ್ಧ ರಾಹುಲ್‌ ಹರಿಹಾಯ್ದರು.

ಸಭೆ ಉದ್ದೇಶಿಸಿ ಮಾತನಾಡಿದ ಬಹುತೇಕ ನಾಯಕರು, ರಾಜಕೀಯ ಸೇಡಿಗಾಗಿ ಬಿಜೆಪಿ ವಿಪಕ್ಷ ನಾಯಕರನ್ನು ಜೈಲಿಗೆ ಕಳಿಸುತ್ತಿದೆ ಎಂದು ಆರೋಪಿಸಿದರು. ಇಂದು ನಾವು ನಮ್ಮ ಸಹೋದರಿಯರಾದ ಕಲ್ಪನಾ ಸೊರೇನ್‌ ಮತ್ತು ಸುನೀತಾ ಕೇಜ್ರಿವಾಲ್‌ ಅವರಿಗಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಭಾವುಕರಾಗಿ ನುಡಿದರು. ಇದೇ ವೇಳೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಜೈಲು ಪಾಲಾಗಿರುವ ಜಾರ್ಖಂಡ್‌ ನಿರ್ಗಮಿತ ಮುಖ್ಯಮಂತ್ರಿ ಹೇಮಂತ ಸೊರೇನ್‌ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಸಭೆಗೆ ಆಗಮಿಸಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ತಮ್ಮ ಪತಿಯನ್ನು ಬಂಧಿಸಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪ್ರಮುಖರು ಭಾಗಿ: ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಮತ್ತು ರಾಹುಲ್ ಗಾಂಧಿ, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ, ಎನ್‌ಸಿಪಿಯ ಶರದ್ ಪವಾರ್‌, ನ್ಯಾಷನಲ್‌ ಕಾನ್ಫರೆನ್ಸ್ ನಾಯಕ ಫಾರೂಖ್‌ ಅಬ್ದುಲ್ಲಾ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಎಡರಂಗ ನಾಯಕರಾದ ಸೀತಾರಾಂ ಯೆಚೂರಿ, ಡಿ.ರಾಜಾ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಟಿಎಂಸಿಯ ಡೆರೆಕ್ ಒ''ಬ್ರಿಯಾನ್ ಮೊದಲಾದವರು ಭಾಗಿಯಾಗಿದ್ದರು.

ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ದಶಮಾನೋತ್ಸವ: ಜಗತ್ತಿನಾದ್ಯಂತ ದಾಳಿಗೆ ಕರೆ!

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷದಂತಿವೆ. ಅದರ ರುಚಿ ನೋಡಬೇಡಿ. ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು. ಇದು ಪ್ರಜಾಪ್ರಭುತ್ವ, ದೇಶ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆ. ಇಬ್ಬರು ಸಿಎಂಗಳ ಬಂಧನದಿಂದ ಪ್ರಜಾಪ್ರಭುತ್ವಕ್ಕೆ ಇರುವ ಬೆದರಿಕೆ ಸಾಬೀತಾಗಿದೆ. ನಾವು ಒಗ್ಗಟ್ಟಾದರೆ ಮಾತ್ರ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯ, ಪರಸ್ಪರ ಹೊಡೆದಾಡಿಕೊಂಡರೆ ಯಶಸ್ವಿಯಾಗಲ್ಲ.
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

Follow Us:
Download App:
  • android
  • ios