ನವದೆಹಲಿ(ಅ.06): ಭಾರತದಲ್ಲಿ ಕೊರೋನಾ ಸೋಂಕು ಮುಂಬರುವ ದಿನಗಳಲ್ಲಿ ಗರಿಷ್ಠ ಮಟ್ಟತಲುಪಿ ಮತ್ತಷ್ಟುಪ್ರತಾಪ ತೋರಬಹುದು ಎಂಬ ಆತಂಕದ ಮಧ್ಯೆಯೇ ಹಣಕಾಸು ಸಚಿವಾಲಯ ಇದಕ್ಕೆ ತದ್ವಿರುದ್ಧವಾದ ವಿಶ್ಲೇಷಣೆಯೊಂದನ್ನು ಮಂಡಿಸಿದೆ. ಅದರ ಪ್ರಕಾರ, ಕಳೆದ ಸೆಪ್ಟೆಂಬರ್‌ನಲ್ಲಿಯೇ ಕೊರೋನಾ ವೈರಸ್‌ ಭಾರತದಲ್ಲಿ ತನ್ನ ಗರಿಷ್ಠ ಮಟ್ಟಮುಟ್ಟಿರುವ ಸಾಧ್ಯತೆ ಇದೆ!

ಸೆ.17ರಿಂದ ಸೆ.30ರವರೆಗಿನ 14 ದಿನಗಳ ಅವಧಿಯಲ್ಲಿ ದೈನಂದಿನ ಹೊಸ ಸೋಂಕಿತರ ಪ್ರಮಾಣ ಸರಾಸರಿ 93000ರಿಂದ 83000ಕ್ಕೆ ಇಳಿದಿದೆ. ಪ್ರತಿನಿತ್ಯ ಕೊರೋನಾ ಪರೀಕ್ಷೆ ಪ್ರಮಾಣ 1.15 ಲಕ್ಷದಿಂದ 1.24 ಲಕ್ಷಕ್ಕೆ ಏರಿಕೆಯಾಗಿದ್ದರೂ ಹೊಸ ಸೋಂಕಿತರ ಪ್ರಮಾಣ ಇಳಿಕೆ ದಾಖಲಾಗಿರುವುದು ದೇಶವು ಸೆಪ್ಟೆಂಬರ್‌ನಲ್ಲೇ ತನ್ನ ಗರಿಷ್ಠ ಮುಟ್ಟಿರುವುದರ ಸುಳಿವಿರಬಹುದು ಎಂದು ಹಣಕಾಸು ಸಚಿವಾಲಯ ವಿಶ್ಲೇಷಿಸಿದೆ.

ಸೆ.17ರಂದು ಭಾರತದಲ್ಲಿ 93199 ಪ್ರಕರಣಗಳು ದಾಖಲಾಗಿದ್ದವು. ನಂತರ ಅದು ಇಳಿಕೆಯ ಹಾದಿಯಲ್ಲೇ ಸಾಗಿತ್ತು. ದೇಶದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಇಷ್ಟುಸುದೀರ್ಘ ಅವಧಿಗೆ ಇಳಿಕೆ ಹಾದಿಯಲ್ಲೇ ಸಾಗಿದ್ದು ಇದೇ ಮೊದಲು.

‘ಆದರೆ ಇಂಥ ಸುಳಿವಿನ ಹೊರತಾಗಿಯೂ ಸಾಂಕ್ರಾಮಿಕದ ಅಪಾಯ ಇನ್ನೂ ಪೂರ್ಣವಾಗಿ ದೂರವಾಗಿಲ್ಲ. ದೇಶವ್ಯಾಪಿ ಹೊಸ ಸೋಂಕಿತರ ಪ್ರಮಾಣ ಇಳಿಕೆಯಾಗಿರುವುದು ದೇಶದಲ್ಲಿ ಆರ್ಥಿಕತೆಗೆ ಚೇತರಿಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇದನ್ನು ಸಾಧ್ಯವಾಗಿಸಲು ಪ್ರತಿಯೊಬ್ಬರೂ ಸೋಂಕು ಹರಡದಂತೆ ಇರುವ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರಕ್ಕಿಂತ ಹೆಚ್ಚಾಗಿ ಸ್ವಯಂ ರಕ್ಷಣೆಯು ಈಗಿನ ಸನ್ನಿವೇಶಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ’ ಎಂದು ಹಣಕಾಸು ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.

ಸೋಮವಾರ ಮುಂಜಾನೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿರುವ ವರದಿ ಅನ್ವಯ ಕಳೆದ 24 ಗಂಟೆಗಳ ಅವಧಿಯಲ್ಲಿ 74442 ಹೊಸ ಸೋಂಕಿತರು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 66 ಲಕ್ಷ ದಾಟಿದೆ. ಮತ್ತೊಂದೆಡೆ 903 ಜನರ ಸಾವಿನೊಂದಿಗೆ ಸೋಂಕಿಗೆ ಬಲಿಯಾದವರ ಪ್ರಮಾಣವು 1.02 ಲಕ್ಷ ತಲುಪಿದೆ.

ಇದೇ ವೇಳೆ ಭಾನುವಾರ ಭಾರತವು ಪ್ರತಿ 10 ಲಕ್ಷ ಜನರಿಗೆ 140 ಜನರಿಗೆ ತಪಾಸಣೆ ಮಾಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿದ್ದ ಮಿತಿಯನ್ನು 6 ಪಟ್ಟು ಮೀರಿ ಸಾಧನೆ ಮಾಡಿದೆ. ಜೊತೆಗೆ ಹಲವು ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿನ ತಪಾಸಣೆ ಮಾಡುವ ಮೂಲಕ, ಸೋಂಕು ಪತ್ತೆಯಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂಬ ಅಪವಾದ ತೊಡೆದು ಹಾಕುವ ಕೆಲಸ ಮಾಡಿವೆ.