ನವದೆಹಲಿ(ಜ.20): ಕೊರೋನಾ ಮಹಾಮಾರಿಯಿಂದಾಗಿ 2020ರ ಸಾಲಿನಲ್ಲಿ ದೇಶದ ರಕ್ಷಣೆಗಾಗಿ ಗಡಿಗಳಲ್ಲಿ ಶತ್ರು ಸೈನ್ಯದ ವಿರುದ್ಧ ಹಗಲಿರುಳು ಹೋರಾಡುವ ಯೋಧರ ಸಾವಿಗಿಂತ ಕರ್ತವ್ಯ ನಿರತರ ವೈದ್ಯರ ಸಾವಿನ ಪ್ರಮಾಣ 7 ಪಟ್ಟು ಹೆಚ್ಚಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

2020ರ ಸಾಲಿನಲ್ಲಿ ದೇಶದ ಗಡಿಗಳಲ್ಲಿ ಶತ್ರು ಸೈನ್ಯದ ವಿರುದ್ಧದ ಹೋರಾಟದ ವೇಳೆ 106 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಆದರೆ ಕೊರೋನಾ ಹೆಮ್ಮಾರಿಯಿಂದ ಜನರ ರಕ್ಷಣೆಗಾಗಿ ಯೋಧರ ರೀತಿಯಲ್ಲೇ ಶ್ರಮಿಸಿದ ವೈದ್ಯರ ಪೈಕಿ 734 ಮಂದಿ ಪ್ರಾಣ ತೆತ್ತಿದ್ದಾರೆ. ಭಾರತಕ್ಕೆ ಕೊರೋನಾ ಹಬ್ಬಿದ ಆರಂಭದ ವೇಳೆ ಈ ವೈರಸ್‌ನಿಂದ ರಕ್ಷಣೆ ಪಡೆಯಲು ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್‌ಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳು ಇರಲಿಲ್ಲ.

ಜೊತೆಗೆ ಆಸ್ಪತ್ರೆಗಳಲ್ಲಿ ಹೆಚ್ಚು ಸೋಂಕಿತರ ಕಾರಣದಿಂದಾಗಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬಳಿಕ ವೈದ್ಯರು ಕೊರೋನಾ ಪರೀಕ್ಷೆಗೆ ಒಳಪಡುತ್ತಿದ್ದರು. ಇದೂ ಸಹ ಸೋಂಕಿಗೆ ಹೆಚ್ಚು ವೈದ್ಯರು ಬಲಿಯಾಗಲು ಕಾರಣ ಎಂದು ವೈದ್ಯ ತಜ್ಞರು ಹೇಳಿದ್ದಾರೆ.