ನವದೆಹಲಿ(ಮೇ.05): ಕೊರೋನಾ ವಿಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಅಲಿಪ್ತ ನೀತಿ ದೇಶಗಳ ನಾಯಕರೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಮಾನವ ಕುಲ ಈಗ ಭಾರೀ ದೊಡ್ಡ ತೊಂದರೆಯಲ್ಲಿದೆ. ಇದರ ವಿರುದ್ದ ಆಲಿಪ್ತ ನೀತಿ ಹೊಂದಿರುವ ರಾಷ್ಟ್ರಗಳು ಹೋರಾಟ ಮಾಡುತ್ತಿದೆ. ಭಾರತ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, 120 ದೇಶಗಳಿಗೆ ಔಷಧಗಳನ್ನು ರಫ್ತು ಮಾಡುವ ಮೂಲಕ ಭಾರತ ‘ವಿಶ್ವದ ಔಷಧಾಲಯ’ವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

ಅಲ್ಲದೇ ಪ್ರಜಾತಂತ್ರ, ಶಿಸ್ತು ಹಾಗೂ ಖಚಿತತೆಯಿಂದಾಗಿ ಈ ಹೋರಾಟವನ್ನು ಜನರ ಚಳುವಳಿಯನ್ನಾಗಿ ಮಾಡಬಹುದು. ಕೊರೋನಾ ಬಳಿಕದ ಜಾಗತೀಕರಣಕ್ಕೆ ಹೊಸ ಮಾರ್ಗಸೂಚಿ ರಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಇದೇ ವೇಳೆ ಪಾಕಿಸ್ತಾನ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಇಂಥ ಸನ್ನಿವೇಶದಲ್ಲೂ ಕೆಲವರು ಉಗ್ರವಾದ, ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋಗಳ ವೈರಸ್‌ ಹರಡುತ್ತಿದ್ದಾರೆ ಎಂದಿದ್ದಾರೆ