Asianet Suvarna News Asianet Suvarna News

ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದವರನ್ನೆಲ್ಲ ಜೈಲಿಗೆ ಹಾಕಲಾಗುತ್ತಿದೆ: ರಾಹುಲ್‌ ಗಾಂಧಿ

ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಕೆಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ಆರಂಭವಾಗಿದೆ ಎಂದೂ ಕಾಂಗ್ರೆಸ್‌ ನಾಯಕ ಆರೋಪಿಸಿದ್ದಾರೆ. 

india is witnessing death of democracy rahul gandhi new delhi ash
Author
Bangalore, First Published Aug 5, 2022, 11:10 AM IST

ಭಾರತವು "ಪ್ರಜಾಪ್ರಭುತ್ವದ ಸಾವಿಗೆ" ಸಾಕ್ಷಿಯಾಗುತ್ತಿದೆ ಹಾಗೂ ಈ ಸರ್ವಾಧಿಕಾರದ ವಿರುದ್ಧ ನಿಂತವರೆನ್ನಲ್ಲ ದ್ವೇಷಪೂರಿತವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಎಐಸಿಸಿ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ಬೆಲೆ ಏರಿಕೆ, ನಿರುದ್ಯೋಗ ಹಾಗೂ ಸಮಾಜದಲ್ಲಿ ಉಂಟಾಗುತ್ತಿರುವ ಹಿಂಸೆಯ ವಿರುದ್ಧ ಧ್ವನಿ ಎತ್ತಬಾರದು ಎಂಬುದೇ ಮೋದಿ ಸರ್ಕಾರದ ಉದ್ದೇಶ ಎಂದೂ ಕಿಡಿ ಕಾರಿದ್ದಾರೆ.

 ಭಾರತದಲ್ಲಿ ಸದ್ಯ ಪ್ರಜಾಪ್ರಭುತ್ವವೇ ಇಲ್ಲ ಹಾಗೂ ನಾಲ್ಕು ಜನರ ಸರ್ವಾಧಿಕಾರವಿದೆ ಎಂದು ವಯನಾಡ್‌ ಸಂಸದ ಆರೋಪಿಸಿದ್ದಾರೆ. ಈಗ ನಾವು  "ಪ್ರಜಾಪ್ರಭುತ್ವದ ಸಾವಿಗೆ" ಸಾಕ್ಷಿಯಾಗಿದ್ದೇವೆ. ಕಳೆದೊಂದು ಶತಮಾನದಿಂದ ದೇಶ ಇಟ್ಟಿಗೆಯಿಂದ ಇಟ್ಟಿಗೆಯನ್ನಿಟ್ಟು ನಿರ್ಮಾಣ ಮಾಡಿದ್ದನ್ನು ಈಗ ನಿಮ್ಮ ಕಣ್ಣು ಮುಂದೆಯೇ ನಾಶ ಮಾಡಲಾಗುತ್ತಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

'ಮೋದಿ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ'

ಇದು ನಿಮ್ಮೆಲ್ಲರಿಗೂ ಗೊತ್ತು, ಇಡೀ ಭಾರತಕ್ಕೆ ಗೊತ್ತಿದೆ. ಸರ್ವಾಧಿಕಾರದ ಆರಂಭದ ಈ ಕಲ್ಪನೆಯ ವಿರುದ್ಧ ನಿಂತವರೆನ್ನಲ್ಲ ದ್ವೇಷಪದಿಂದ ಟಾರ್ಗೆಟ್‌ ಮಾಡಲಾಗುತ್ತಿದೆ, ಜೈಲಿಗೆ ಹಾಕಲಾಗುತ್ತಿದೆ, ಹೊಡೆಯಲಾಗುತ್ತಿದೆ. ಅವರು ಯಾರೇ ಆಗಿರಲಿ, ಎಲ್ಲಿಂದ ಆದರೋ ಬಂದಿರಲಿ, ಯಾವ ರಾಜ್ಯದವರೇ ಆಗಿರಲಿ, ಯಾವುದೇ ಧರ್ಮದಿಂದಲೇ ಬಂದಿರಲಿ, ಪುರುಷ ಅಥವಾ ಮಹಿಳೆ ಆಗಿರಲಿ ಅವರ ಮೇಲೆ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಬೆಲೆ ಏರಿಕೆ,  ನಿರುದ್ಯೋಗ ಹಾಗೂ ಸಮಾಜದಲ್ಲಿ ಉಂಟಾಗುತ್ತಿರುವ ಹಿಂಸೆಯ ವಿರುದ್ಧ ಧ್ವನಿ ಎತ್ತಬಾರದು ಎಂಬುದೇ ಅವರ ಕಲ್ಪನೆ. ಕೇಂದ್ರ ಸರ್ಕಾರ 4 - 5 ಜನರ ಹಿತಾಸಕ್ತಿಗಾಗಿ ನಡೆಸಲಾಗುತ್ತಿದೆ ಹಾಗೂ ಇಬ್ಬರು ಈ ಸರ್ವಾಧಿಕಾರವನ್ನು ಇಬ್ಬರು - ಮೂವರು ಉದ್ಯಮಿಗಳ ಹಿತಾಸಕ್ತಿಗಾಗಿ ನಡೆಸುತ್ತಿದ್ದಾರೆ ಎಂದು ಸಹ ಕಾಂಗ್ರೆಸ್‌ ನಾಯಕ ವಾಗ್ದಾಳಿ ನಡೆಸಿದ್ದಾರೆ. 

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, "ನಿಮಗೆ ಬೇಕಾದುದನ್ನು ಪ್ರಶ್ನಿಸಿ, ಅಲ್ಲಿ ಸಂಪೂರ್ಣವಾಗಿ ಏನೂ ಇಲ್ಲ, ಅದು ಎಲ್ಲರಿಗೂ ತಿಳಿದಿದೆ" ಎಂದು ಉತ್ತರಿಸಿದರು. "ಆರ್‌ಎಸ್‌ಎಸ್‌ನ ಕಲ್ಪನೆಯನ್ನು ವಿರೋಧಿಸುವುದು ನನ್ನ ಕೆಲಸ ಮತ್ತು ನಾನು ಅದನ್ನು ಎಷ್ಟು ಹೆಚ್ಚು ಮಾಡುತ್ತೇನೋ ಅಷ್ಟು ಹೆಚ್ಚು ನನ್ನ ಮೇಲೆ ದಾಳಿಯಾಗುತ್ತದೆ, ನನಗೆ ಸಂತೋಷವಾಗಿದೆ, ನನ್ನ ಮೇಲೆ ದಾಳಿ ಮಾಡಿ". ಸರ್ಕಾರವು ಅವರನ್ನು "ಹೆದರಿಸುವುದನ್ನು ಮುಂದುವರೆಸಬಹುದು" ಅದು ವ್ಯತ್ಯಾಸವನ್ನು ಮಾಡುವುದಿಲ್ಲ ಎಂದೂ ರಾಹುಲ್‌ ಗಾಂಧಿ ಪ್ರತಿಪಾದಿಸಿದರು.

ನ್ಯಾಷನಲ್‌ ಹೆರಾಲ್ಡ್‌ ಕೇಸ್‌: ಯಂಗ್ ಇಂಡಿಯನ್ ಕಚೇರಿ ಸೀಲ್‌ ಮಾಡಿದ ಇಡಿ

ಅಲ್ಲದೆ, "ನಾವು ಸಿದ್ಧಾಂತಕ್ಕಾಗಿ ಹೋರಾಡುತ್ತೇವೆ ಮತ್ತು ನಮ್ಮಂತಹ ಕೋಟಿಗಟ್ಟಲೆ ಜನರು ಇದ್ದಾರೆ ಎಂಬ ಕಾರಣಕ್ಕಾಗಿ ಅವರು ಗಾಂಧಿ ಕುಟುಂಬದ ಮೇಲೆ ಟಾರ್ಗೆಟ್‌ ಮಾಡುತ್ತಾರೆ, ನಾವು ಪ್ರಜಾಪ್ರಭುತ್ವಕ್ಕಾಗಿ, ಕೋಮು ಸೌಹಾರ್ದಕ್ಕಾಗಿ ಹೋರಾಡುತ್ತೇವೆ ಮತ್ತು ವರ್ಷಗಳಿಂದ ಹೋರಾಡುತ್ತಿದ್ದೇವೆ, ನಾನು ಮಾತ್ರ ಇದನ್ನು ಮಾಡಲಿಲ್ಲ. ಇದನ್ನು ವರ್ಷಗಳಿಂದ ಮಾಡಲಾಗುತ್ತಿದೆ, ನನ್ನ ಕುಟುಂಬ ಸದಸ್ಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. "ಇದು ನಮ್ಮ ಜವಾಬ್ದಾರಿ" ಎಂದು ಅವರು ಹೇಳಿದರು.

"ಭಾರತ ಇಬ್ಭಾಗವಾದಾಗ ಮತ್ತು ಹಿಂದೂ-ಮುಸ್ಲಿಂರನ್ನು ಹೊಡೆದಾಡುವಂತೆ ಮಾಡಿದಾಗ ನಮಗೆ ನೋವಾಗುತ್ತದೆ, ದಲಿತ ಎಂಬ ಕಾರಣಕ್ಕೆ ಯಾರಾದರೂ ಹಲ್ಲೆಗೊಳಗಾದಾಗ, ನಮಗೆ ನೋವಾಗುತ್ತದೆ, ಮಹಿಳೆಯನ್ನು ಹೊಡೆದಾಗ ನಮಗೆ ನೋವಾಗುತ್ತದೆ, ಅದಕ್ಕಾಗಿಯೇ ನಾವು ಹೋರಾಡುತ್ತೇವೆ. ಇದು ಕುಟುಂಬವಲ್ಲ, ಇದು ಒಂದು ಸಿದ್ಧಾಂತ’’ ಎಂದು ರಾಹುಲ್‌ ಗಾಂಧಿ ಪ್ರತಿಪಾದಿಸಿದ್ದಾರೆ. ಇಂದು ಕಾಂಗ್ರೆಸ್ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯ ನಿವಾಸಕ್ಕೆ ಸಹ ಮುತ್ತಿಗೆ ಹಾಕಲಿದೆ ಎನ್ನಲಾಗುತ್ತಿದೆ. 

Follow Us:
Download App:
  • android
  • ios