ನವದೆಹಲಿ/ಬೀಜಿಂಗ್(ಅ.21)‌: ಪೂರ್ವ ಲಡಾಖ್‌ನ ಡೆಮ್‌ಚೊಕ್‌ನಲ್ಲಿ ಸೋಮವಾರ ಭಾರತದ ಗಡಿಯೊಳಗೆ ನುಸುಳಿ ಸೆರೆಸಿಕ್ಕಿರುವ ತನ್ನ ಯೋಧನನ್ನು ಭಾರತ ಶೀಘ್ರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಚೀನಾ ಸೇನೆ ವಿಶ್ವಾಸ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಭಾರತ ಆತನನ್ನು ಚೀನಾಗೆ ಹಸ್ತಾಂತರಿಸಿದೆ. ಈ ಮೂಲಕ ಉಭಯ ದೇಶಗಳ ನಡುವೆ ಹುಟ್ಟಿಕೊಳ್ಳಲಿದ್ದ ಹೊಸ ವಿವಾದ ಾಂತ್ಯವಾಗಿದೆ.

ಬಂಧಿತ ಯೋಧ ವಾಂಗ್‌ ಯಾ ಲಾಂಗ್‌ ಪರ ವಾದ ಮಾಡಿರುವ ಚೀನಾ ಸೇನೆ, ‘ನಮ್ಮ ಯೋಧನನ್ನು ಭಾರತ ಶೀಘ್ರ ಹಸ್ತಾಂತರಿಸುವ ವಿಶ್ವಾಸವಿದೆ. ಸ್ಥಳೀಯ ದನಗಾಹಿಗಳ ಕೋರಿಕೆಯ ಮೇರೆಗೆ, ತಪ್ಪಿಸಿಕೊಂಡಿದ್ದ ಯಾಕ್‌ ಪ್ರಾಣಿಯನ್ನು ಮರಳಿ ಅವರ ವಶಕ್ಕೆ ಒಪ್ಪಿಸಲು ಯತ್ನಿಸುತ್ತಿದ್ದ. ಈ ವೇಳೆ ಆತ ನಾಪತ್ತೆಯಾಗಿದ್ದ’ ಎಂದು ಹೇಳಿತ್ತು.

ಆದರೆ, ಈತ ಯಾವ ಕಾರಣಕ್ಕೆ ಭಾರತದ ಗಡಿಯಲ್ಲಿ ನುಸುಳಿದ್ದ ಎಂಬ ವಿಚಾರಣೆಯನ್ನು ಭಾರತ ನಡೆಸಿದೆ. ಸೋಮವಾರವಷ್ಟೇ ಹೇಳಿಕೆ ನೀಡಿದ್ದ ಭಾರತ ಸೇನೆ, ‘ಎಲ್ಲ ಔಪಚಾರಿಕ ಪ್ರಕ್ರಿಯೆ ಬಳಿಕ ಆತನನ್ನು ಹಸ್ತಾಂತರಿಸಲಾಗುವುದು’ ಎಂದಿತ್ತು.