ಕಾಳಧನಿಕರ ಸ್ವರ್ಗ ಎಂದೇ ಬಣ್ಣಿಸಲಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತೀಯರ ಮಾಹಿತಿಯನ್ನು ಸ್ವಿಜರ್ಲೆಂಡ್‌ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಇದು ಐದನೇ ಕಂತಿನ ಮಾಹಿತಿಯಾಗಿದೆ.

ನವದೆಹಲಿ (ಅ.10): ತೆರಿಗೆಗಳ್ಳರ ಸ್ವರ್ಗ ಎಂದು ಹೇಳಲಾಗುವ ಸ್ವಿಜರ್‌ಲೆಂಡಿನ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಭಾರತದ ಶ್ರೀಮಂತರ ಮಾಹಿತಿಯನ್ನು ಸ್ವಿಜರ್‌ಲೆಂಡ್‌ ಸರ್ಕಾರ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇದು ಸ್ವಿಸ್‌ ಸರ್ಕಾರ ಭಾರತಕ್ಕೆ ನೀಡಿರುವ 5ನೇ ಕಂತಿನ ಮಾಹಿತಿಯಾಗಿದೆ.

ಸ್ವಿಜರ್‌ಲೆಂಡ್‌ ಹಾಗೂ ಭಾರತದ ನಡುವೆ ಇರುವ ಸ್ವಯಂಚಾಲಿತ ಮಾಹಿತಿ ಹಸ್ತಾಂತರ ಒಪ್ಪಂದದಡಿ ಈ ಭಾರತಕ್ಕೆ ಈ ಮಾಹಿತಿ ನೀಡಲಾಗಿದೆ. ಸ್ವಿಸ್‌ ಬ್ಯಾಂಕುಗಳಲ್ಲಿ ಹಣ ಇರಿಸಿರುವ ಎಷ್ಟು ಭಾರತೀಯರ ಮಾಹಿತಿಯನ್ನು ನೀಡಲಾಗಿದೆ, ಎಷ್ಟು ಮೊತ್ತದ ಹಣದ ಬಗ್ಗೆ ಮಾಹಿತಿ ನೀಡಲಾಗಿದೆ, ಅದರಲ್ಲಿ ಕಪ್ಪು ಹಣವೆಷ್ಟು ಎಂಬುದನ್ನು ಸ್ವಿಜರ್‌ಲೆಂಡ್‌ ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ‘ನೂರಾರು ಖಾತೆಗಳ ಮಾಹಿತಿ ನೀಡಿದ್ದೇವೆ. ಅವುಗಳಲ್ಲಿ ಹಲವು ಖಾತೆ ಹೊಂದಿರುವ ಕೆಲವು ವ್ಯಕ್ತಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಟ್ರಸ್ಟ್‌ಗಳ ಮಾಹಿತಿಯೂ ಸೇರಿದೆ’ ಎಂದಷ್ಟೇ ತಿಳಿಸಿದೆ.

ಅಂಬಾನಿ, ಟಾಟಾ, ಪೆಪ್ಸಿಕೋ, ಕೋಕಾಕೋಲಾಗೆ ಎದುರಾಳಿ 7000 ಕೋಟಿ ರೂ. ಕಂಪನಿಗೆ ವಾರಸುದಾರೆ ಈಕೆ

‘ಒಟ್ಟು 104 ದೇಶಗಳ ಜೊತೆಗೆ 36 ಲಕ್ಷ ಖಾತೆಗಳ ಕುರಿತಾದ ಮಾಹಿತಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಖಾತೆಯ ಸಂಖ್ಯೆ, ಅದರಲ್ಲಿರುವ ಹಣದ ಮೊತ್ತ, ಖಾತೆದಾರರ ಹೆಸರು, ವಿಳಾಸ, ದೇಶ, ತೆರಿಗೆ ಗುರುತಿನ ಸಂಖ್ಯೆ ಇತ್ಯಾದಿಗಳು ಸೇರಿವೆ. ಈ ಮಾಹಿತಿ ಆಧರಿಸಿ ಆಯಾ ದೇಶಗಳು ಸದರಿ ಖಾತೆದಾರರು ತಮ್ಮ ದೇಶದಲ್ಲಿ ಸರಿಯಾಗಿ ತೆರಿಗೆ ಪಾವತಿಸಿದ್ದಾರಾ ಅಥವಾ ವಂಚನೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬಹುದು’ ಎಂದು ಸ್ವಿಜರ್‌ಲೆಂಡ್‌ ತಿಳಿಸಿದೆ.

ವಿಶ್ವದ ನಂ.1 ಕಂಪೆನಿ ಹೊಂದಿರುವ ಭಾರತೀಯ ಉದ್ಯಮಿ ಬಳಿ ಅತ್ಯಂತ ದುಬಾರಿ ಮನೆ, ಇದು ಅಂಬಾನಿ ಮನೆ ಸಮೀಪದಲ್ಲಿದೆ

2019ರಿಂದ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಸ್ವಿಸ್‌ ಸರ್ಕಾರ ಭಾರತಕ್ಕೆ ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಭಾರತೀಯ ಖಾತೆದಾರರ ಮಾಹಿತಿಯನ್ನು ನೀಡುತ್ತಾ ಬಂದಿದೆ. ತೆರಿಗೆ ವಂಚಿಸಿ ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪು ಹಣ ಇರಿಸುವ ಶ್ರೀಮಂತರನ್ನು ಮಟ್ಟಹಾಕಲು ಭಾರತ ಸರ್ಕಾರ ಈ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಸ್ವಿಜರ್‌ಲೆಂಡಿನಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಭಾರತೀಯರ ಮಾಹಿತಿಯನ್ನೂ ಅಲ್ಲಿನ ಸರ್ಕಾರ ಭಾರತಕ್ಕೆ ನೀಡುತ್ತದೆ.