ರಫ್ತಾಗಿರುವುದು ಕೈಗಾರಿಕಾ ಆಮ್ಲಜನಕ, ಮೆಡಿಕಲ್ ಆಕ್ಸಿಜನ್ ಅಲ್ಲ: ಕೇಂದ್ರ!
ಮೆಡಿಕಲ್ ಆಕ್ಸಿಜನ್ ರಫ್ತು ಶುದ್ಧ ಸುಳ್ಳು: ಕೇಂದ್ರ| ರಫ್ತಾಗಿರುವುದು ಕೈಗಾರಿಕಾ ಆಮ್ಲಜನಕ| ಕಾಂಗ್ರೆಸ್ ಆರೋಪಕ್ಕೆ ಸರ್ಕಾರ ತಿರುಗೇಟು
ನವದೆಹಲಿ(ಏ.22): ಕೋವಿಡ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಮ್ಲಜನಕದ ಅಗತ್ಯ ಇದ್ದರೂ ಕೇಂದ್ರ ಸರ್ಕಾರ ಕಳೆದೊಂದು ವರ್ಷದಲ್ಲಿ ಭಾರಿ ಪ್ರಮಾಣದ ಆಕ್ಸಿಜನ್ ಅನ್ನು ರಫ್ತು ಮಾಡಿದೆ ಎಂಬ ಆರೋಪವನ್ನು ಸರ್ಕಾರದ ಮೂಲಗಳು ತಳ್ಳಿ ಹಾಕಿವೆ. ಇದೊಂದು ಶುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರ ಎಂದು ಬಣ್ಣಿಸಿವೆ.
ದ್ರವರೂಪದ ಆಕ್ಸಿಜನ್‌ನಲ್ಲಿ ಎರಡು ವಿಧ. ಒಂದು ವೈದ್ಯಕೀಯ ಬಳಕೆಯದ್ದು, ಮತ್ತೊಂದು ಕೈಗಾರಿಕಾ ಉದ್ದೇಶದ್ದು. 2020-21ನೇ ಸಾಲಿನ ಏಪ್ರಿಲ್- ಫೆಬ್ರವರಿ ಅವಧಿಯಲ್ಲಿ ಭಾರತ 9884 ಮೆಟ್ರಿಕ್ ಟನ್ ಕೈಗಾರಿಕಾ ಆಕ್ಸಿಜನ್ ಅನ್ನು ರಫ್ತು ಮಾಡಿದೆ. ಕೇವಲ 12 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ರಫ್ತಾಗಿದೆ. ಒಟ್ಟು ವಾರ್ಷಿಕ ಉತ್ಪಾದನೆಯಲ್ಲಿ ರಫ್ತು ಪ್ರಮಾಣ ಕೇವಲ ಶೇ.0.4ರಷ್ಟಿದೆ ಎಂದು ಮೂಲಗಳು ವಿವರಿಸಿವೆ.
ಡಿಸೆಂಬರ್ ಹಾಗೂ ಜನವರಿ ಅವಧಿಯಲ್ಲಿ ಕೈಗಾರಿಕಾ ಆಮ್ಲಜನಕ ಬಳಕೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಆ ಸಂದರ್ಭದಲ್ಲೇ ಹೆಚ್ಚು ರಫ್ತು ನಡೆದಿದೆ ಎಂದೂ ವಿವರಿಸಿದೆ.
ದೇಶದಲ್ಲಿ ಸಾಕಾಗುವಷ್ಟುಆಮ್ಲಜನಕ ಇದ್ದರೂ ಕೇಂದ್ರ ಸರ್ಕಾರ ಸರಿಯಾದ ಸಾಗಣೆ ವ್ಯವಸ್ಥೆ ಸೃಷ್ಟಿಸಿಲ್ಲ. ಕಳೆದ 12 ತಿಂಗಳಲ್ಲಿ 9300 ಮೆಟ್ರಿಕ್ ಟನ್ ಆಮ್ಲಜನಕವನ್ನು ರಫ್ತು ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ದೂರಿದ್ದರು.