ನವದೆಹಲಿ(ಜೂ.03): ಭಾರತದಲ್ಲಿ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳು ಈಗ 7ರಿಂದ 8 ಸಾವಿರದಷ್ಟುದಾಖಲಾಗುತ್ತಿದ್ದು, ಪ್ರಕರಣಗಳ ಏರಿಕೆ ಪ್ರಮಾಣ ತುತ್ತ ತುದಿಯನ್ನು ತಲುಪುವ ದಿನಗಳು ಹತ್ತಿರಾಗುತ್ತಿವೆ ಎಂದು ನಿರೀಕ್ಷೆ ಇಟ್ಟುಕೊಂಡಿರುವಾಗಲೇ, ನಿರಾಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಕೊರೋನಾ ವೈರಸ್‌ ತುತ್ತ ತುದಿ ತಲುಪುವ ದಿನಗಳು ಇನ್ನೂ ದೂರವಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಹೀಗಾಗಿ ಭಾರತದಲ್ಲಿ ಕೊರೋನಾ ವೈರಸ್‌ ಇನ್ನೂ ಅಧಿಕ ಪ್ರಮಾಣದಲ್ಲಿ ದಾಖಲಾಗುವ ಆಂತಕ ಎದುರಾಗಿದೆ.

ಆರೋಗ್ಯ ಸಚಿವಾಲಯ ಆಯೋಜಿಸಿದ್ದ ಸುದ್ದಿಗೋಷ್ಠಿಯ ವೇಳೆ ಐಸಿಎಂಆರ್‌ ವಿಜ್ಞಾನಿ ನಿವೇದಿತಾ ಗುಪ್ತಾ ಈ ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ ಕೊರೋನಾ ವೈರಸ್‌ ಸಮುದಾಯ ಹಂತದಲ್ಲಿ ಹರಡಲು ಆರಂಭವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೋನಾ ವೈರಸ್‌ ದೇಶದಲ್ಲಿ ಯಾವರೀತಿಯಾಗಿ ಹರಡುತ್ತಿದೆ ಎಂಬುದನ್ನು ತಿಳಿಯುವ ಸಲುವಾಗಿ ಐಸಿಎಂಆರ್‌ ರಾರ‍ಯಂಡಮ್‌ ಟೆಸ್ಟ್‌ಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಸುಮಾರು 34 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳ ಫಲಿತಾಂಶ ಈ ವಾರದ ಅಂತ್ಯದ ವೇಳೆಗೆ ಅಥವಾ ಮುಂದಿನವಾರದ ಆರಂಭದಲ್ಲಿ ಲಭ್ಯವಾಗಲಿದೆ. ಆ ಬಳಿಕ ಭಾರತದಲ್ಲಿ ಕೊರೋನಾ ವೈರಸ್‌ ಯಾವರೀತಿಯಲ್ಲಿ ಪಸರಿಸುತ್ತಿದೆ ಎಂಬುದು ತಿಳಿಯಲಿದೆ. ಪ್ರತಿನಿತ್ಯ ಸುಮಾರು 1.20 ಲಕ್ಷ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೇಶದಲ್ಲಿ 476 ಸರ್ಕಾರಿ ಮತ್ತು 205 ಖಾಸಗಿ ಆಸ್ಪತ್ರೆಯ ಲ್ಯಾಬ್‌ಗಳಲ್ಲಿ ವೈರಸ್‌ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗ ಫಲವಾಗಿ ಇತರ ದೇಶಗಳಿಗೆ ಹೋಲಿಸಿದರೆ ನಾವು ಇಂದು ಉತ್ತಮ ಪರಿಸ್ಥಿತಿಯಲ್ಲಿದ್ದೇವೆ ಎಂದು ನಿವೇದಿತಾ ಗುಪ್ತಾ ಮಾಹಿತಿ ನೀಡಿದ್ದಾರೆ.

ಕೊರೋನಾಕ್ಕೆ ವೃದ್ಧರೇ ಹೆಚ್ಚು ಸಾವು:

ಇದೇ ವೇಳೆ ಕೊರೋನಾಕ್ಕೆ ಬಲಿಯಾದವರ ಪೈಕಿ ಅರ್ಧದಷ್ಟುಮಂದಿ ವೃದ್ಧರಾಗಿದ್ದಾರೆ. ಅಲ್ಲದೇ ಸಾವಿಗೀಡಾದವರ ಪೈಕಿ ಶೇ.73ರಷ್ಟುಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಾಗಿದ್ದಾರೆ. ಶೇ.6.13ರಷ್ಟುಇರುವ ಜಾಗತಿಕ ಸಾವಿನ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಶೇ.2.82ರಷ್ಟಿದೆ. ಅದೇ ರೀತಿ ಒಂದು ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸಾವಿನ ಪ್ರಕರಣ ಶೇ.0.41ರಷ್ಟಿದೆ. ಜಾಗತಿಕವಾಗಿ ಒಂದು ಲಕ್ಷಕ್ಕೆ ಶೇ. 4.9ರಷ್ಟುಸಾವು ಸಂಭವಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ಸುದ್ದಿಗೋಷ್ಠಿಯ ವೇಳೆ ಮಾಹಿತಿ ನೀಡಿದ್ದಾರೆ.