* ಮೊದಲು ಯಾವ ಲಸಿಕೆ ಪಡೆದಿದ್ದರೂ ಕೋರ್ಬೆವ್ಯಾಕ್ಸ್ 3ನೇ ಡೋಸ್ ನೀಡಬಹುದು* ಕೋರ್ಬೆವ್ಯಾಕ್ಸ್ ಲಸಿಕೆ ಮಿಕ್ಸ್ ಬೂಸ್ಟರ್‌ಗೆ ಕೇಂದ್ರ ಒಪ್ಪಿಗೆ
ನವದೆಹಲಿ(ಜೂ.05): ದೇಶದಲ್ಲಿ 5ರಿಂದ 18 ವರ್ಷದ ಮಕ್ಕಳಿಗೆ ಮಾತ್ರ ನೀಡಲಾಗುತ್ತಿದ್ದ ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಇನ್ನು ಮುಂದೆ ಯಾವುದೇ ಲಸಿಕೆ ಪಡೆದ ವಯಸ್ಕರಿಗೂ ಬೂಸ್ಟರ್ ಡೋಸ್ ಆಗಿ ನೀಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಒಪ್ಪಿಗೆ ನೀಡಿದೆ. ಮೊದಲೆರಡು ಡೋಸ್‌ಗಳನ್ನು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಪಡೆದಿದ್ದರೂ 3ನೇ ಡೋಸ್ ಕೋರ್ಬೆವ್ಯಾಕ್ಸ್ ನೀಡಬಹುದು ಎಂದು ಅನುಮತಿ ನೀಡಲಾಗಿದೆ.
ಇದರೊಂದಿಗೆ ದೇಶದಲ್ಲಿ ಇದೇ ಮೊದಲ ಬಾರಿ ಕೊರೋನಾ ಲಸಿಕೆಯನ್ನು ಮಿಶ್ರಣ ಮಾಡಲು ಅನುಮತಿ ನೀಡಿದಂತಾಗಿದೆ. ಈವರೆಗೆ ಬೂಸ್ಟರ್ ಡೋಸ್ (3ನೇ ಡೋಸ್) ಆಗಿ ಮೊದಲೆರಡು ಡೋಸ್ ಪಡೆದ ಲಸಿಕೆಯನ್ನೇ ಪಡೆಯಬೇಕಿತ್ತು. ಈಗ ಭಿನ್ನ ಲಸಿಕೆಗೆ ಅನುಮತಿ ನೀಡಲಾಗಿದೆ. ಕೋರ್ಬೆವ್ಯಾಕ್ಸ್ ಲಸಿಕೆಯ ಬೂಸ್ಟರ್ ಡೋಸ್ ನೀಡಲು ಮೊದಲೆರಡು ಡೋಸ್ ಪಡೆದು ಆರು ತಿಂಗಳು ಆಗಿರಬೇಕು ಎಂದು ಡಿಸಿಜಿಐ ಹೇಳಿದೆ.
ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಕಂಪನಿ ಕೋರ್ಬೆವ್ಯಾಕ್ಸ್ ಕೊರೋನಾ ಲಸಿಕೆ ಅಭಿವೃದ್ಧಿಪಡಿಸಿದೆ. ಇತ್ತೀಚೆಗೆ ಅದು ಬೂಸ್ಟರ್ ಡೋಸ್ ಟ್ರಯಲ್ ಪೂರ್ಣಗೊಳಿಸಿ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ಕಂಪನಿ ಈಗಾಗಲೇ 10 ಕೋಟಿ ಡೋಸ್ ಲಸಿಕೆ ಉತ್ಪಾದಿಸಿ ಕೇಂದ್ರ ಸರ್ಕಾರಕ್ಕೆ ನೀಡಿದೆ.
ರಾಜ್ಯದಲ್ಲಿ 259 ಕೇಸು: ಪಾಸಿಟಿವಿಟಿ ಶೇ.2.06ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣಗಳು ತುಸು ಇಳಿಕೆ ಕಂಡಿವೆ. ಜತೆಗೆ ಕೊರೋನಾ ಪರೀಕ್ಷೆಗಳ ಪಾಸಿಟಿವಿ ದರ ಶೇ.2ಕ್ಕೆ ಹೆಚ್ಚಳವಾಗಿದೆ.
ಶುಕ್ರವಾರ 259 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 234 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಆದರೆ ಗುಣಮುಖರ ಸಂಖ್ಯೆ ಇಳಿಕೆ ಕಾರಣ ಸಕ್ರಿಯ ಪ್ರಕರಣ 2229ಕ್ಕೆ ಏರಿದೆ.
ಸೋಂಕು ಪರೀಕ್ಷೆಗಳು 12 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 2.06ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 8 ಸಾವಿರ ಕಡಿಮೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 28 ಕಡಿಮೆಯಾಗಿವೆ. ಗುರುವಾರ 297 ಪ್ರಕರಣಗಳು, ಸಾವು ಶೂನ್ಯ ವರದಿಯಾಗಿತ್ತು.
ಬೆಂಗಳೂರಲ್ಲೇ ಅಧಿಕ:
ಬೆಂಗಳೂರು 243, ಬೆಳಗಾವಿ 4, ದಕ್ಷಿಣ ಕನ್ನಡ 5, ಶಿವಮೊಗ್ಗ, ಮೈಸೂರು ತಲಾ ಇಬ್ಬರು, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 22 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ಮೂರು ತಿಂಗಳ ಬಳಿಕ ಗುರುವಾರ 300 ಗಡಿಗೆ ಹೆಚ್ಚಳವಾಗಿದ್ದವು. ಆದರೆ, ಸೋಂಕು ಪರೀಕ್ಷೆ ಇಳಿಕೆಯಾದ ಹಿನ್ನಲೆ ಹೊಸ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಕಳೆದ ಒಂದು ವಾರದಿಂದ ಸರಾಸರಿ 1.5 ಇದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2ಕ್ಕೆ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,065 ಮಂದಿ ಸಾವಿಗೀಡಾಗಿದ್ದಾರೆ.
