ಗಲ್ವಾನ್ ನದಿ ತಿರುಗಿಸಲು ಚೀನಾ ಕಸರತ್ತು?
ಈಶಾನ್ಯ ಲಡಾಖ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಚೀನಾದ ಬುಲ್ಡೋಜರ್‌ಗಳು ಉಪಗ್ರಹ ಚಿತ್ರದಲ್ಲಿ ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.19): 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾ-ಭಾರತ ಯೋಧರ ಸಂಘರ್ಷದ ಬೆನ್ನಲ್ಲೇ, ಈಶಾನ್ಯ ಲಡಾಖ್‌ನ ಗಲ್ವಾನ್ ನದಿಯ ಹರಿವನ್ನು ತಿರುಗಿಸಲು ಚೀನಾ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಕೆಲವು ಉಪಗ್ರಹ ಚಿತ್ರಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು, ಹರಿವನ್ನು ತಡೆಯಲು ಬಳಕೆಯಾಗುತ್ತಿತ್ತು ಎನ್ನಲಾದ ಬುಲ್ಡೋಜರ್ ಕಾಣಿಸಿದೆ.
ಸಂಘರ್ಷ ನಡೆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಚೀನಾದ ಬುಲ್ಡೋಜರ್‌ಗಳು ಉಪಗ್ರಹ ಚಿತ್ರದಲ್ಲಿ ಪತ್ತೆಯಾಗಿವೆ. ಈ ಸ್ಥಳದಲ್ಲಿ ನದಿಯು ಪದೇ ಪದೇ ತಿರುವು ಬದಲಿಸುತ್ತಿರುವುದು ಕಾಣಿಸಿದೆ. ವಿವಾದಿತ ಅಕ್ಸಾಯ್ ಚಿನ್‌ನಿಂದ ಲಡಾಖ್‌ನತ್ತ ಈ ನದಿ ಹರಿಯುತ್ತದೆ. ಚೀನಾದಲ್ಲಿ ನೀಲಿ ಬಣ್ಣದಲ್ಲಿ ಶುಷ್ಕವಾಗಿದ್ದ ನೀರು, ವಾಸ್ತವ ಗಡಿ ರೇಖೆ ದಾಟಿ ಭಾರತಕ್ಕೆ ಹರಿವು ಆರಂಭಿಸುತ್ತಿದ್ದಂತೆಯೇ ಮಣ್ಣು ಮಿಶ್ರಿತ ನೀರಾಗಿ ಹಾಗೂ ಕಾಣಲು ಆಗದಷ್ಟು ಚಿಕ್ಕದಾಗಿ ಪರಿವರ್ತಿತವಾಗಿದೆ. ಇದೇ ವೇಳೆ, ಭಾರತದ ಸೇನಾ ಟ್ರಕ್‌ಗಳು ಗಡಿಯಿಂದ ಈಚೆ 2 ಕಿ.ಮೀ. ದೂರದಲ್ಲಿ ಒಣಗಿದ ಗಲ್ವಾನ್ ನದಿ ತೀರದಲ್ಲಿ ನಿಂತಿದ್ದು ಕಂಡುಬರುತ್ತದೆ.
ಟಿಕ್‌ಟಾಕ್ ಸೇರಿ ಚೀನಾದ 52 ಆ್ಯಪ್ ಬ್ಯಾನ್; ಕೇಂದ್ರಕ್ಕೆ ಭಾರತ ಗುಪ್ತಚರ ಇಲಾಖೆ ಸೂಚನೆ!
ಚೀನಾ ಮೌನ:
ಈ ನಡುವೆ, ‘ಗಲ್ವಾನ್ ನದಿ ಭಾರತಕ್ಕೆ ಹರಿದು ಬರುವುದನ್ನು ತಡೆಯಲು ಚೀನಾ ಅಣೆಕಟ್ಟು ನಿರ್ಮಿಸಲು ಯತ್ನಿಸುತ್ತಿದೆ. ಇದು ಭಾರತ-ಚೀನಾ ನಡುವಿನ ಒಪ್ಪಂದದ ಉಲ್ಲಂಘನೆ’ ಎಂಬ ಆರೋಪಗಳ ಬಗ್ಗೆ ಚೀನಾ ವಿದೇಶಾಂಗ ವಕ್ತಾರರು ಯಾವುದೇ ಉತ್ತರ ನೀಡದೇ ಜಾರಿಕೊಂಡಿದ್ದಾರೆ. ಪತ್ರಕರ್ತರು ಗುರುವಾರ ವಕ್ತಾರ ಝಾವೋ ಲಿಜಿಯಾನ್ ಅವರನ್ನು ಪ್ರಶ್ನಿಸಿದಾಗ, ‘ಈ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದಷ್ಟೇ ಉತ್ತರಿಸಿದರು.
ದಾಳಿ ನಾವು ಮಾಡಿಲ್ಲ:
ಈ ನಡುವೆ, ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದು ಚೀನಾ ಎಂಬ ಭಾರತದ ಆರೋಪಕ್ಕೆ ಪುನಃ ನಕಾರಾತ್ಮಕ ಉತ್ತರ ನೀಡಿದ ಚೀನಾ ವಿದೇಶಾಂಗ ವಕ್ತಾರರು, ‘ಯಾರದು ತಪ್ಪು, ಯಾರದು ಸರಿ ಎಂಬುದು ಸ್ಪಷ್ಟ. ಈ ಜವಾಬ್ದಾರಿ (ದಾಳಿ ಮಾಡಿದ ಹೊಣೆ) ಹೊರಲು ಚೀನಾ ಸಿದ್ಧವಿಲ್ಲ’ ಎಂದರು.